ಕಬ್ಬಿನ ಬಾಕಿ ಹಣ ನೀಡದ ಮಾಲೀಕರು ಜೈಲಿಗೆ

By Web DeskFirst Published Jul 3, 2019, 10:50 AM IST
Highlights

ಕಬ್ಬಿನ ಬಾಕಿ ಹಣ ನೀಡದ ಮಾಲೀಕರ ಜೈಲಿಗೆ ಹಾಕುವ ಅಧಿಕಾರ ರಾಜ್ಯಕ್ಕಿದೆ: ಕೇಂದ್ರ| ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಮಾಹಿತಿ

ನವದೆಹಲಿ[ಜು.03]: ರೈತರಿಗೆ ಕಬ್ಬಿನ ಬಾಕಿ ಹಣವನ್ನು ನೀಡಲು ವಿಫಲವಾಗುವ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಜೈಲಿ ಹಾಕುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಲೋಕಸಭೆಯಲ್ಲಿ ಈ ಹೇಳಿಕೆ ನೀಡಿದ ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌, 2017-​18ರಲ್ಲಿ ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಬಾಕಿ ಹಣದ ಪ್ರಮಾಣ 85,179 ಕೋಟಿ ರು. ಇತ್ತು. ಈ ಪ್ರಮಾಣ ಕಬ್ಬಿನ ಬೆಳೆಯ ಋುತುವಿನ ಮುಕ್ತಾಯದ ವೇಳೆಗೆ 303 ಕೋಟಿ ರು.ಗಳಿಗೆ ಇಳಿಕೆಯಾಗಿತ್ತು.

ಪ್ರಸ್ತುತ ಋುತುವಿನಲ್ಲಿ ರೈತರಿಗೆ ಪಾವತಿಸಬೇಕಿರುವ 85,355 ಕೋಟಿ ರು. ಬಾಕಿ ಹಣದ ಪೈಕಿ 67,706 ಕೋಟಿ ರು.ಗಳನ್ನು ಈಗಾಗಲೇ ಪಾವತಿಸಲಾಗಿದೆ. ಈ ವರ್ಷ ಅಂತ್ಯದ ವೇಳೆಗೆ ರೈತರ ಎಲ್ಲಾ ಬಾಕಿ ಹಣವನ್ನು ಪಾವತಿಸುವುದನ್ನು ಖಾತರಿಪಡಿಸಿಕೊಳ್ಳಲು ಯತ್ನಿಸಲಾಗುವುದು. ಒಂದು ವೇಳೆ ಬಾಕಿ ಹಣ ಪಾವತಿಸದೇ ಇದ್ದರೆ, ಸಕ್ಕರೆ ಕಾರ್ಖಾನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಬಾಕಿ ಹಣ ಪಾವತಿಸದ ಮಾಲೀಕರನ್ನು ಜೈಲಿಗೆ ಹಾಕುವುದಕ್ಕೂ ಅವಕಾಶವಿದೆ ಎಂದು ರಾಮ್‌ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

click me!