ಹುಟ್ಟುಹಬ್ಬದಂದು ಬಿಎಸ್'ವೈ'ಗೆ ಗಿಫ್ಟ್ ಕೊಡಲು ರೆಡಿಯಾಗಿರುವ ರಾಜ್ಯ ಸರ್ಕಾರ !

By Suvarna Web DeskFirst Published Feb 27, 2017, 3:15 PM IST
Highlights

ಆದರೆರಾಜ್ಯಸರ್ಕಾರದನಡೆಗೆಯಡಿಯೂರಪ್ಪತೀವ್ರಆಕ್ರೋಶವ್ಯಕ್ತಪಡಿಸಿದ್ದಾರೆ. ಸರ್ಕಾರದಸೇಡಿನಪ್ರವೃತ್ತಿಗೆನಾನುಬಗ್ಗುವುದೂಇಲ್ಲಜಗ್ಗುವುದೂಇಲ್ಲಎಂದಿರುವಬಿಎಸ್ವೈ, ಸಿದ್ಧರಾಮಯ್ಯಅವರನ್ನುಮುಖ್ಯಮಂತ್ರಿಸ್ಥಾನದಿಂದಕೆಳಗಿಳಿಸುವುದಾಗಿಹೇಳಿದ್ದಾರಲ್ಲದೇ, ಸವಾಲಾಗಿಸ್ವೀಕರಿಸುತ್ತೇನೆಎಂದಿದ್ದಾರೆ.

ಬೆಂಗಳೂರು(ಫೆ.27): ಹುಟ್ಟುಹಬ್ಬದ ದಿನವೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಿದ್ದೆಗೆಡಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಡಿನೋಟಿಫಿಕೇಶನ್​ ಸಂಬಂಧ ಹೈಕೋರ್ಟ್​ನಲ್ಲಿ ಖುಲಾಸೆಗೊಂಡು ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲ್ಪಟ್ಟಿರುವ 15 ಪ್ರಕರಣಗಳನ್ನು ಬಲಯುತಗೊಳಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಮುಗಿದು ಹೋದ ಪ್ರಕರಣಗಳಿಗೆ ಮತ್ತೆ ಜೀವ ಬರಲಿದ್ದು, ಬಿಎಸ್​ವೈ ಅವರನ್ನು ಸ್ವಲ್ಪ ಮಟ್ಟಿನ ಚಿಂತೆಗೆ ದೂಡಿದೆ.

ಡಿನೋಟಿಫಿಕೇಶನ್​ ಪ್ರಕರಣಗಳು ಖುಲಾಸೆಗೊಂಡು ನಿರಾಳರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರಿಗೆ ಇವತ್ತು ರಾಜ್ಯ ಸರ್ಕಾರ ಸಣ್ಣ ಮಟ್ಟಿನ ಶಾಕ್​ ನೀಡಿದೆ. ಮುಖ್ಯಮಂತ್ರಿ ಸ್ಥಾನವನ್ನೇ ಕಸಿದುಕೊಂಡಿದ್ದ ಡಿನೋಟಿಫಿಕೇಶನ್​ ಪ್ರಕರಣಗಳ ಪೈಕಿ 15 ಪ್ರಕರಣಗಳು ಹೈಕೋರ್ಟ್​ ನಲ್ಲಿ ಖುಲಾಸೆಗೊಂಡಿದ್ದವು. ಕಾನೂನು ಪ್ರಕ್ರಿಯೆಯನ್ವಯ ಸುಪ್ರೀಂಕೋರ್ಟ್​ ನಲ್ಲಿ ಮೇಲ್ಮನವಿ ಸಲ್ಲಿಸಲ್ಪಟ್ಟಿತ್ತಾದರೂ ಆ ಬಗ್ಗೆ ಸರ್ಕಾರ ಗಂಭೀರ ಗಮನ ಹರಿಸಿರಲಿಲ್ಲ.

ಆದರೆ ಈಗ ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್​ ಡೈರಿ ವಿಚಾರವಾಗಿ ಸರ್ಕಾರದ ಮೇಲೆ ಯಡಿಯೂರಪ್ಪ ಮುಗಿಬಿದ್ದಿರುವ ಕಾರಣದಿಂದಾಗಿ ಸರ್ಕಾರ ಕೂಡಾ ಜಿದ್ದಿಗೆ ಬಿದ್ದಿದೆ. ಕಳೆದ ವರ್ಷ ಮೇಲ್ಮನವಿ ಸಲ್ಲಿಸಲ್ಪಟ್ಟಿದ್ದ 15 ಪ್ರಕರಣಗಳ ವಿಚಾರಣೆಗೆ ಪ್ರಬಲ ಸಾಕ್ಷ್ಯ ಸಂಗ್ರಹಿಸಿ ಇನ್ನಷ್ಟು ಬಲಯುತಗೊಳಿಸಲು ತೀರ್ಮಾಸಿದೆ.

ಆದರೆ ರಾಜ್ಯ ಸರ್ಕಾರದ ನಡೆಗೆ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಸೇಡಿನ ಪ್ರವೃತ್ತಿಗೆ ನಾನು ಬಗ್ಗುವುದೂ ಇಲ್ಲ ಜಗ್ಗುವುದೂ ಇಲ್ಲ ಎಂದಿರುವ ಬಿಎಸ್​ವೈ,  ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಾಗಿ ಹೇಳಿದ್ದಾರಲ್ಲದೇ, ಸವಾಲಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರ ಬಂದ ಬಳಿಕ ಎಲ್ಲರಿಗೂ ಪಾಠ ಕಲಿಸುವುದಾಗಿ ಯಡಿಯೂರಪ್ಪ ಅಬ್ಬರಿಸಿದ್ದಾರೆ.

ಈ ಮಧ್ಯೆ ಲೋಕಾಯುಕ್ತ ಮರು ತನಿಖೆಯ ಸಾಧ್ಯತೆಗಳು ಕೂಡಾ ಇವೆ ಎಂಬ ಮಾಹಿತಿಯೂ ಇದ್ದು, ಮರು ತನಿಖೆ ವೇಳೆ ಲಭ್ಯವಾಗುವ ಸಾಕ್ಷ್ಯಗಳನ್ನು ಸುಪ್ರೀಂಕೋರ್ಟ್​ನಲ್ಲಿ ಒದಗಿಸಲು ಚಿಂತನೆಯೂ ನಡೆದಿದೆ ಎನ್ನಲಾಗಿದೆ. ಈ ಮಧ್ಯೆ  ಸಿಎಜಿ ವರದಿ ಆಧರಿಸಿ ಮೇಲ್ಮನವಿ ಸಲ್ಲಿಸುವುದು ರಾಜ್ಯ ಸರ್ಕಾರದ ವಿವೇಚನಾಧಿಕಾರ ಎಂದು ಮಹಾಲೇಖಪಾಲರು ಹೇಳಿರುವುದು ಸರ್ಕಾರದ ಪ್ರಯತ್ನಕ್ಕೆ ಇನ್ನಷ್ಟು ಬಲ ತುಂಬಿದೆ. ಒಟ್ಟಾರೆ, ಒಂದು ವೇಳೆ ಆರೋಪ ಪ್ರತ್ಯಾರೋಪ ಮುಂದುವರಿದು ಸರ್ಕಾರ ಜಿದ್ದಿಗೆ ಬಿದ್ದಲ್ಲಿ ಯಡಿಯೂರಪ್ಪ ಅವರಿಗೆ ಮತ್ತೆ ಕಂಟಕ ಎದುರಾದರೂ ಅಚ್ಚರಿಯಿಲ್ಲ.

ವರದಿ: ಕಿರಣ್​ ಹನಿಯಡ್ಕ, ಪೊಲಿಟಿಕಲ್​ ಬ್ಯೂರೋ, ಸುವರ್ಣ ನ್ಯೂಸ್​.

click me!