
ಬೆಂಗಳೂರು : ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿರುವ ‘ಮೀ ಟೂ’ ಆರೋಪ ಕುರಿತ ಚರ್ಚೆ ನಡೆಸಲು ಮತ್ತು ಸಂಧಾನ ನಡೆಸುವ ಉದ್ದೇಶದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಧಾನ ಸಮಿತಿ ಸಭೆ ಕರೆದಿದೆ. ಗುರುವಾರ ಸಂಧಾನ ಸಮಿತಿ ಸಭೆ ನಡೆಯಲಿದ್ದು, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಸಭೆಯಲ್ಲಿ ಭಾಗಹಿಸುತ್ತಿದ್ದಾರೆ.
ಗುರುವಾರ ಸಂಜೆ 4 ಗಂಟೆಗೆ ಸಭೆ ನಿಗದಿ ಆಗಿದೆ. ಬುಧವಾರವೇ ನಟ ಅರ್ಜುನ್ ಸರ್ಜಾ ಮತ್ತು ಅವರ ಮೇಲೆ ಮೀಟೂ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರಿಗೆ ಸಭೆಗೆ ಬರುವಂತೆ ವಾಣಿಜ್ಯ ಮಂಡಳಿಯಿದ ಬುಲಾವ್ ಹೋಗಿದೆ. ಪತ್ರದ ಜತೆಗೆ ಫೋನ್ ಕರೆಯ ಮೂಲಕವೂ ಸಭೆಗೆ ಬರುವಂತೆ ಸೂಚಿಸಿರುವುದಾಗಿ ವಾಣಿಜ್ಯ ಮಂಡಳಿ ಮೂಲಗಳು ತಿಳಿಸಿವೆ. ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ವಾಣಿಜ್ಯ ಮಂಡಳಿ ಮೂಲಗಳು ತಿಳಿಸಿವೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಹಿರಿಯ ನಟ ಅಂಬರೀಶ್ ನೇತೃತ್ವದಲ್ಲಿ ನಡೆಯುವ ಈ ಸಭೆಗೆ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಕೆ.ವಿ. ಚಂದ್ರಶೇಖರ್, ಹಿರಿಯ ನಟಿ ಬಿ. ಸರೋಜಾ ದೇವಿ, ಸುಧಾರಾಣಿ, ಪ್ರೇಮಾ ಸೇರಿದಂತೆ ಚಿತ್ರೋದ್ಯಮದ ಅನೇಕ ಹಿರಿಯ ನಟ-ನಟಿಯರು, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಹಾಗೂ ಕಲಾವಿದರ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಇಬ್ಬರಿಗೂ ಕರೆ ಮಾಡಿ ತಿಳಿಸಿದ್ದೇವೆ. ಇಬ್ಬರೂ ಸಂಧಾನ ಸಮಿತಿ ಸಭೆಗೆ ಬರಲು ಒಪ್ಪಿದ್ದಾರೆ.
- ಚಿನ್ನೇಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.