
ಬಳ್ಳಾರಿ : ‘ಈಗ ಆಗಿರುವುದೇ ಸಾಕು. ಮತ್ತೆ ಮತ್ತೆ ಆಪರೇಷನ್ ಕೆಲಸಕ್ಕೆ ಕೈ ಹಾಕುವುದಿಲ್ಲ’ ಎಂದು ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಜೆಪಿಗೆ ‘ಆಪರೇಷನ್ ಕಮಲ’ ನಡೆಸುವ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವಂತೂ ಆಪರೇಷನ್ ಕಮಲ ಮಾಡಲು ಮುಂದಾಗುವುದಿಲ್ಲ. ಈಗ ಆಗಿರುವುದೇ ಸಾಕು. ಮತ್ತೆ ಮತ್ತೆ ಆಪರೇಷನ್ ಕೆಲಸಕ್ಕೆ ಕೈ ಹಾಕುವುದಿಲ್ಲ. ಏನೇ ಮಾತನಾಡಿದರೂ ರೆಕಾರ್ಡ್ ಮಾಡುತ್ತಾರೆ. ಹೀಗಾಗಿ ಆಪರೇಷನ್ ಬಗ್ಗೆ ನಾವು ಒಂಚೂರು ಆಲೋಚಿಸುವುದಿಲ್ಲ. ಆ ಕಡೆ ತಲೆ ಮಾಡಿಯೂ ಮಲಗುವುದಿಲ್ಲ’ ಎಂದು ತಿಳಿಸಿದರು.
ತೃತೀಯ ರಂಗ ಮಳೆಗಾಲದಲ್ಲಿ ಬೆಳೆಯುವ ಅಣಬೆಯಿದ್ದಂತೆ. ಬಹಳಷ್ಟುದಿನ ಉಳಿಯುವುದಿಲ್ಲ. ತೃತೀಯ ರಂಗಕ್ಕೆ ಭವಿಷ್ಯವಿಲ್ಲ. ತೃತೀಯ ರಂಗದಲ್ಲಿನ ಎಲ್ಲ ಪಕ್ಷಗಳು ಮೋದಿ ಅವರ ವಿರುದ್ಧ ಸೋತು ಸುಣ್ಣವಾದ ಪಕ್ಷಗಳೇ ಆಗಿವೆ ಎಂದು ಶ್ರೀರಾಮುಲು ಇದೇ ವೇಳೆ ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲ ತೃತೀಯ ರಂಗದ ನಾಯಕರಿಗೆ ಪ್ರಾದೇಶಿಕ ಹಿತಸಾಕ್ತಿಯೇ ಮುಖ್ಯ ಹೊರತು, ರಾಷ್ಟ್ರೀಯ ಹಿತಾಸಕ್ತಿಗಳಿಲ್ಲ. ಅವರೆಲ್ಲರೂ ಒಂದುಗೂಡಲು ಸಾಧ್ಯವೇ ಇಲ್ಲ. ತೃತೀಯ ರಂಗ ಒಂದಾಗುವುದು ಎಂದರೆ ತಕ್ಕಡಿಯಲ್ಲಿಟ್ಟು ಕಪ್ಪೆಗಳನ್ನು ತೂಗಿದಂತೆ ಎಂದು ವ್ಯಂಗ್ಯವಾಡಿದರು. ಇದೇ ವೇಳೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯಕ್ಕೆ ಬರುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ರೆಡ್ಡಿ ರಾಜಕಾರಣದಲ್ಲಿ ಸಕ್ರಿಯವಾಗುವ ಕುರಿತು ನಾನು ಮಾತನಾಡುವುದು ಸರಿಯಲ್ಲ. ಪಕ್ಷವೇ ಅದನ್ನು ನಿರ್ಧರಿಸಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.