ಶ್ರೀ ರಾಮುಲುರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸವಾಲ್

By Web DeskFirst Published Aug 26, 2018, 12:57 PM IST
Highlights

 ರಾಜ್ಯದ ಒಬ್ಬ ರೈತನ ಸಾಲ ಮನ್ನಾ ಆಗಿದ್ದರೆ ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ಶ್ರೀರಾಮುಲು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕೊಪ್ಪಳ :  ಸಾಲ ಮನ್ನಾ ಹೆಸರಿನಲ್ಲಿ ಮಣ್ಣೆರಚುವ ಕೆಲಸ ನಡೆಯುತ್ತಿದೆ. ಒಂದು ವೇಳೆ ರಾಜ್ಯದ ಒಬ್ಬ ರೈತನ ಸಾಲ ಮನ್ನಾ ಆಗಿದ್ದರೆ ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ಶ್ರೀರಾಮುಲು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲದಕ್ಕೂ ಕುಂಟುನೆಪ ಹೇಳುತ್ತಿದ್ದಾರೆ. ಸಾಲಮನ್ನಾ ಘೋಷಿಸಿ ಇಷ್ಟುದಿನ ಕಳೆದರೂ ಬ್ಯಾಂಕ್‌ಗಳಿಗೆ ಸರ್ಕಾರದ ಆದೇಶ ತಲುಪಿಲ್ಲ. ಮುಖ್ಯಮಂತ್ರಿಗಳಿಗೆ ಜನಪರ ಕಾಳಜಿಯಿಲ್ಲ. ಕೊಡಗಿನ ಪರಿಸ್ಥಿತಿ ಅರಿಯಲು ತಡವಾಗಿ ಬಂದು ಮತ್ತೆ ವಾಪಸ್‌ ಹೋಗಿದ್ದರು. ಆ ನಂತರ ಮಾಧ್ಯಮಗಳು ಕಣ್ತೆರೆಸಿದ್ದರಿಂದ ಕೊಡಗಿನಲ್ಲಿ ಒಂದು ದಿನ ಕಳೆದಿದ್ದಾರೆ. ಇಲ್ಲದಿದ್ದರೆ ಒಂದೇ ಗಂಟೆಗೆ ವಾಪಸ್‌ ಹೋಗುತ್ತಿದ್ದರು ಎಂದು ಹೇಳಿದರು.

ಭಾರತದ ನಿರುದ್ಯೋಗ ಸಮಸ್ಯೆಯನ್ನು ಯಾವುದೋ ದೇಶದಲ್ಲಿ ಕುಳಿತು ಮಾತನಾಡುವ ರಾಹುಲ್ ಗಾಂಧಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಬಿ.ಕೆ.ಹರಿಪ್ರಸಾದ್‌ ಅವರೇ, ಬಿಜೆಪಿ ನಾಯಕರ ವಿರುದ್ಧ ನಾಲಿಗೆ ಹರಿಬಿಡಬೇಡಿ. ನಮಗೂ ಮಾತನಾಡುವುದಕ್ಕೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಚ್‌ಡಿಕೆಯಿಂದ ರಾಜ್ಯ ಉದ್ಧಾರ ಆಗದು:  ರೈತರು ಸಾಲಮನ್ನಾ ಮಾಡಿ ಎಂದು ಕೇಳಿದರೆ ವೋಟು ನಮಗೆ ಹಾಕಿದ್ದೀರಾ ಎಂದು ಸಿಎಂ ಕುಮಾರಸ್ವಾಮಿ ಕೇಳುತ್ತಾರೆ. ಇಂಥವರಿಂದ ರಾಜ್ಯ ಉದ್ಧಾರವಾಗುವುದಿಲ್ಲ. ರಾಜ್ಯದಲ್ಲಿ ಈಗಿರುವ ಸರ್ಕಾರ ಬಹಳಷ್ಟುದಿನ ಉಳಿಯುವುದಿಲ್ಲ. ಇದನ್ನು ಸಮ್ಮಿಶ್ರ ಸರ್ಕಾರದ ಮಂತ್ರಿಗಳೇ ಹೇಳುತ್ತಿದ್ದಾರೆ. ಹೈದ್ರಾಬಾದ್‌- ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ನಾವು ಎಷ್ಟುದಿನ ರಾಜಕೀಯ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ನಾವು ಅಧಿಕಾರದಲ್ಲಿರುವಾಗ ಜನರಿಗೋಸ್ಕರ ಏನು ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ ಎಂಬುದನ್ನು ಸಿಎಂ ಕುಮಾರಸ್ವಾಮಿ ಅರ್ಥೈಸಿಕೊಳ್ಳಬೇಕಿದೆ ಎಂದರು.

click me!