ಕಸ ಸುರಿಯೋದನ್ನು ತಪ್ಪಿಸಲು ಯುವಕರ ಹೊಸ ಪ್ಲಾನ್!

First Published Jun 3, 2018, 2:12 PM IST
Highlights

ನಗರದಲ್ಲಿ ಎಲ್ಲಾದರೂ ಸ್ವಲ್ಪ ಖಾಲಿ ಜಾಗ ಇದ್ದರೆ ಸಾಕು ಕಸ ತಂದು ಎಸೆದು ಹೋಗೋರೇ ಹೆಚ್ಚು. ಈ ರೀತಿ ಕಸ ತಂದು ಸುರಿಯುವುದನ್ನು ತಪ್ಪಿಸಲು ರಸ್ತೆ ಬದಿಯ ಜಾಗದಲ್ಲಿ ಸುಂದರವಾದ ಪಂಜರ ನಿರ್ಮಿಸಿ ಅದರ ತುಂಬಾ ‘ಲವ್‌ಬರ್ಡ್ಸ್’ಗಳ ಕಲರವ ಸೃಷ್ಟಿಸಲಾಗಿದೆ. ಜತೆಗೆ ಆಸುಪಾಸಿನ ಒಂದಷ್ಟು ಖಾಲಿ ಜಾಗದಲ್ಲಿ ಬೇಲಿ ನಿರ್ಮಿಸಿ ಗಿಡ ಮರ ಬೆಳೆಸಲಾಗುತ್ತಿದೆ.

ಬೆಂಗಳೂರು (ಜೂ. 03): ನಗರದಲ್ಲಿ ಎಲ್ಲಾದರೂ ಸ್ವಲ್ಪ ಖಾಲಿ ಜಾಗ ಇದ್ದರೆ ಸಾಕು ಕಸ ತಂದು ಎಸೆದು ಹೋಗೋರೇ ಹೆಚ್ಚು. ಈ ರೀತಿ ಕಸ ತಂದು ಸುರಿಯುವುದನ್ನು ತಪ್ಪಿಸಲು ರಸ್ತೆ ಬದಿಯ ಜಾಗದಲ್ಲಿ ಸುಂದರವಾದ  ಪಂಜರ ನಿರ್ಮಿಸಿ ಅದರ ತುಂಬಾ ‘ಲವ್‌ಬರ್ಡ್ಸ್’ಗಳ ಕಲರವ ಸೃಷ್ಟಿಸಲಾಗಿದೆ. ಜತೆಗೆ ಆಸುಪಾಸಿನ ಒಂದಷ್ಟು ಖಾಲಿ ಜಾಗದಲ್ಲಿ ಬೇಲಿ ನಿರ್ಮಿಸಿ ಗಿಡ ಮರ ಬೆಳೆಸಲಾಗುತ್ತಿದೆ.

ಇದರ ಫಲವಾಗಿ ಈಗ ಜನ ಇಲ್ಲಿ ಕಸ ತಂದು ಸುರಿಯುವುದು ಬಿಟ್ಟಿದ್ದಾರೆ. ಆ ಜಾಗದಲ್ಲಿ ನಿರ್ಮಿಸಿರುವ ಹಕ್ಕಿಗಳ ಪಂಜರ, ಅದರೊಳಗೆ ಚಿಲಿಪಿಲಿ ಗುಟ್ಟುತ್ತಿರುವ ಬಣ್ಣಬಣ್ಣದ ಲವ್‌ಬರ್ಡ್ಸ್‌ಗಳು ದಾರಿಹೋಕರು, ವಾಹನ ಸವಾರರ ಗಮನ ಸೆಳೆಯುತ್ತಿವೆ. ಇಂತಹದ್ದೊಂದು ಪರಿಸರ ಸ್ನೇಹಿ ಬದಲಾವಣೆ ನಡೆದಿರುವುದು ನಗರದ ಶ್ರೀರಾಮಪುರದ ಗೌತಮ್ ನಗರದಲ್ಲಿ. ಇಲ್ಲಿನ ಬಿಬಿಎಂಪಿ ಶಾಲೆ ಬಳಿಯ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಈ ಮೊದಲು ಸುತ್ತಮುತ್ತಲ ಜನ ತ್ಯಾಜ್ಯವನ್ನು ತಂದು ಸುರಿದು ಹೋಗುತ್ತಿದ್ದರು.

ಅಷ್ಟಕ್ಕೂ ಆ ಸ್ಥಳ ಕಸ ಹಾಕಲು ಬಿಬಿಎಂಪಿ ನಿಗದಿಪಡಿಸಿದ್ದ ಬ್ಲಾಕ್‌ಸ್ಟಾಟ್ ಏನೂ ಆಗಿರಲಿಲ್ಲ. ಆದರೂ, ಸುತ್ತಮುತ್ತಲ ಜನ ಕಸ ತಂದು ಎಸೆಯುತ್ತಿದ್ದರು. ಸ್ಥಳೀಯರು ಬಿಬಿಎಂಪಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಕಸ ಹಾಕುವುದು ತಪ್ಪಿಸುವುದು ಬಿಬಿಎಂಪಿಗೂ ತಲೆನೋವಾಗಿತ್ತು. ರಾಶಿ ತ್ಯಾಜ್ಯ ವಿಲೇವಾರಿಯಾಗದೆ ಬೀರುತ್ತಿದ್ದ ದುರ್ವಾಸನೆ ದಾರಿಹೋಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಕಾಡುತ್ತಿತ್ತು. ಇದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ನಿರ್ಧರಿಸಿದಾಗ ಸೃಷ್ಟಿಯಾಗಿದ್ದೇ ‘ಲವ್ ಬರ್ಡ್ಸ್ ಪಂಜರ’.

ಯುವಪಡೆ ಮ್ಯಾಜಿಕ್: ಅಷ್ಟಕ್ಕೂ, ಈ ಜಾಗದಲ್ಲಿ ಹಕ್ಕಿಗಳ ಕಲರವ ಸೃಷ್ಟಿಸಿದ್ಯಾರು, ಕಸ ತಂದು ಎಸೆಯುವುದು ತಪ್ಪಲು ಕಾರಣ ಯಾರು? ಖಂಡಿತಾ ಅದು ಬಿಬಿಎಂಪಿಯಂತೂ ಅಲ್ಲ. ಶ್ರೀರಾಮಪುರದ ಯುವಪಡೆ ಇಂತಹದ್ದೊಂದು ಮ್ಯಾಜಿಕ್ ಮಾಡಿದೆ. ಈ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊರಟ ಇಲ್ಲಿನ ‘ಕೇರಳಾ ಪೊಲೀಸ್ ಫುಟ್‌ಬಾಲ್ ಕ್ಲಬ್’ನ ಯುವ ಸದಸ್ಯರು ಜನರು ಕಸ ಎಸೆಯುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಇಟ್ಟಿಗೆ ಸಿಮೆಂಟ್ ಬಳಸಿ ದೊಡ್ಡ ಪಂಜರ ನಿರ್ಮಿಸಿದೆ. ಯುವಕರು ಆ ಗೂಡಲ್ಲಿ ‘ಲವ್‌ಬರ್ಡ್ಸ್’ ತಂದು ಸಾಕಲಾರಂಭಿಸಿದ್ದಾರೆ.

60 ಕ್ಕೂ ಹೆಚ್ಚು ಲವ್‌ಬರ್ಡ್ಸ್:
ಸುಮಾರು 45  ಜಾತಿಯ ಬಣ್ಣಬಣ್ಣದ  60 ಕ್ಕೂ ಹೆಚ್ಚು ಹಕ್ಕಿಗಳನ್ನು ತಂದು ಗೂಡಿನಲ್ಲಿ ಬಿಡಲಾಗಿದೆ. ಹಕ್ಕಿಗಳಿಗೆ ಸ್ಚಚ್ಛ ಗಾಳಿ, ಬೆಳಕು ಸಿಗಲೆಂದು ಒಂದು ಭಾಗಕ್ಕೆ ಪೂರ್ಣ ಕಬ್ಬಿಣದ ಜಾಲರಿ ಅಳವಡಿಸಿ ನಿರ್ಮಿಸಲಾಗಿದೆ. ಜತೆಗೆ ಸ್ಥಳೀಯ ಪಾಲಿಕೆ ಸದಸ್ಯರು, ಶಾಸಕರನ್ನು ಕರೆಸಿ ಈ ಜಾಗದಲ್ಲಿ ಹತ್ತಾರು ಸಸಿಗಳನ್ನೂ ನೆಟ್ಟಿದ್ದೇವೆ. ಅವೆಲ್ಲಾ ಬೆಳೆಯುತ್ತಿದ್ದು, ಉತ್ತಮ ನೆರಳಿನ ವಾತಾವರಣವೂ ನಿರ್ಮಾಣವಾಗಿದೆ. ಹಕ್ಕಿಗಳಿಗೆ ಪ್ರತಿದಿನ ಒಬ್ಬೊಬ್ಬರು ಸರದಿಯಂತೆ ಗೂಡು ಸ್ವಚ್ಛಗೊಳಿಸುವ, ಆಹಾರ, ನೀರು ಪೂರೈಸುವ ಕೆಲಸ ಮಾಡುತ್ತೇವೆ.  ಇದಕ್ಕೆ ಪ್ರತಿ ತಿಂಗಳು ಬರುವ ಖರ್ಚನ್ನೂ ಎಲ್ಲರೂ ಸೇರಿ ಭರಿಸುತ್ತೇವೆ ಎಂದು ಈ ತಂಡದ ಸದಸ್ಯರಲ್ಲೊಬ್ಬರಾದ ಲೋಹಿತ್ ‘ಕನ್ನಡಪ್ರಭ’ಕ್ಕೆ ವಿವರಿಸಿದ್ದಾರೆ.

click me!