ಲಂಕಾ ಬಿಕ್ಕಟ್ಟು ದುಪ್ಪಟ್ಟು: ಜನರತ್ತ ಗುಂಡು ಹಾರಿಸಿದ ರಣತುಂಗ ಅಂಗರಕ್ಷಕ!

By Web DeskFirst Published Oct 28, 2018, 9:39 PM IST
Highlights

ಶ್ರೀಲಂಕಾದಲ್ಲಿ ತೀವ್ರಗೊಂಡ ರಾಜಕೀಯ ಬಿಕ್ಕಟ್ಟು! ಜನರ ಮೇಲೆ ಗುಂಡು ಹಾರಿಸಿದ ಅರ್ಜುನ್ ರಣತುಂಗ ಅಂಗರಕ್ಷಕ! ಗುಂಡಿನ ದಾಳಿಯಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ! ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವುದಿಲ್ಲ ಎಂದ ವಿಕ್ರಮ ಸಿಂಘೆ  

ಕೊಲಂಬೊ(ಅ.28): ಶ್ರೀಲಂಕಾ ರಾಜಕೀಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಜಾಗೊಂಡ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರ ಅಂಗರಕ್ಷಕ ಜನರ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

ಅರ್ಜುನ ರಣತುಂಗ ಇಂದು ಸೆಲಾನ್ ಪೆಟ್ರೋಲಿಯಂ ಕಾರ್ಪೋರೇಷನ್ ನಲ್ಲಿರುವ ತಮ್ಮ ಕಚೇರಿಗೆ ತೆರಳಿದ್ದರು. ಈ ವೇಳೆ ನೂತನ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ಕಚೇರಿ ಪ್ರವೇಶಿಸಲು ಅರ್ಜನ ರಣತುಂಗ ಅವರನ್ನು ತಡೆದು, ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಅವರ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರ್ಜುನ ರಣತುಂಗ ಅವರ ಇಬ್ಬರು ಅಂಗರಕ್ಷಕರನ್ನು ಬಂಧಿಸಲಾಗಿದೆ.

ಕಳೆದ ಶುಕ್ರವಾರ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರು ಪ್ರಧಾನಿ ರಾನಿಲ್​ ವಿಕ್ರಮಸಿಂಘೆ ಅವರನ್ನು ಉಚ್ಚಾಟಿಸಿ, ಮಹಿಂದ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದು, ಅವರು ಸೋಮವಾರ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಅಧ್ಯಕ್ಷ ಸಿರಿಸೇನಾ ನಿರ್ಧಾರ ಅಕ್ರಮ ಮತ್ತು ಅಸಂವಿಧಾನಿಕ ಎಂದಿರುವ ವಿಕ್ರಮ ಸಿಂಘೆ, ತಾವು ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

click me!