
ಬೆಂಗಳೂರು : ನೆರೆಯ ರಾಷ್ಟ್ರ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಐಸಿಸ್ ಉಗ್ರರು ಬಾಂಬ್ ಸ್ಫೋಟಿಸಿ ನೂರಾರು ಮಂದಿಯನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖಾಕಿ ಪಡೆ ಕಟ್ಟೆಚ್ಚರ ವಹಿಸಿದೆ.
ಎಲ್ಲಾ ಸಮುದಾಯದ ಧಾರ್ಮಿಕ ಮುಖಂಡರು ಹಾಗೂ ಹೋಟೆಲ್, ಮಾಲ್‌ಗಳ ಮಾಲೀಕರೊಂದಿಗೆ ಗುರುವಾರ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು, ಎಲ್ಲೆಡೆ ಸಿಸಿಟಿವಿ ಅಳವಡಿಸಬೇಕು. ಚರ್ಚ್, ಮಸೀದಿ, ದೇವಸ್ಥಾನಗಳಿಗೆ ಒಳ ಹಾಗೂ ಹೊರ ಹೋಗುವ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ದಿನದ 24 ಗಂಟೆ ನಿಗಾ ವಹಿಸುವಂತೆ ಸೂಚಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಯುಕ್ತ ಸುನೀಲ್ ಕುಮಾರ್ ಅವರು, ಶ್ರೀಲಂಕಾದಲ್ಲಿ ನಡೆದ ಸ್ಫೋಟದ ಹಿನ್ನೆಲೆಯಲ್ಲಿ ನಗರದಲ್ಲಿನ ಜನಬೀಡ ಪ್ರದೇಶಗಳು ಮತ್ತು ಪ್ರತಿಯೊಂದು ಪ್ರಾರ್ಥನಾ ಮಂದಿರದ ಮುಖಂಡರಿಗೆ ಭದ್ರತೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 1.25 ಕೋಟಿ ಜನಸಂಖ್ಯೆ ಇದ್ದು, ಪ್ರತಿಯೊಬ್ಬ ವ್ಯಕ್ತಿಯ ಎರಡು ಕಣ್ಣುಗಳು ಸೇರಿದರೆ 2.5 ಕೋಟಿ ಜನಸಂಖ್ಯೆ ಆಗುತ್ತದೆ. ಈ ಮೂಲಕ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡಿದರು.
ಕರ್ನಾಟಕ ಸಾರ್ವಜನಿಕ ರಕ್ಷಣಾ ಕಾಯ್ದೆ 2017ರ ಅನ್ವಯ ನಿಬಂಧನೆಗಳಿಗೆ ಒಳಪಡುವ ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸಿಕೊಳ್ಳಬೇಕು. ಪ್ರಮುಖವಾಗಿ ಹೋಟೆಲ್, ಮಾಲ್ ಇತ್ಯಾದಿ ಸ್ಥಳಗಳಲ್ಲಿ ಲೋಹಶೋಧಕ ಯಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹೋಟೆಲ್ ಮತ್ತು ಸಾರ್ವಜನಿಕರು ತಂಗುವ ಸ್ಥಳಗಳಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಅಥವಾ ಗುರುತನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಈ ಮೂಲಕ ದಿನದ 24 ಗಂಟೆ ಸಂಶಯಾಸ್ಪದ ವ್ಯಕ್ತಿಗಳ ತಪಾಸಣೆ, ಬ್ಯಾಗ್ ಹಾಗೂ ಇನ್ನಿತರ ವಸ್ತುಗಳ ತಪಾಸಣೆ ಆಗಲೇ ಬೇಕು. ಯಾವುದಾದರೂ ಸಂಶಯಾಸ್ಪದ ವ್ಯಕ್ತಿಗಳು, ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ದಿನದ 24 ಗಂಟೆ ತಪಾಸಣೆ ನೋಡಿಕೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಗಿದೆ. ಪ್ರತಿಯೊಬ್ಬ ಸಾರ್ವಜನಿಕರು ಎಚ್ಚರಿಕೆಯಿಂದ ಇರುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿಗೆ ಪ್ರತ್ಯೇಕ ಭಯೋತ್ಪಾದನ ನಿಗ್ರಹ ದಳ (ಎಟಿಎಸ್) ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪವನೆ ಸಲ್ಲಿಸಲಾಗಿದೆ. ಭಯೋತ್ಪಾದನೆಯಂತಹ ಚಟುವಟಿಕೆಗಳ ಬಗ್ಗೆ ನಿಗಾ ಇಡಲು ಸಿಸಿಬಿಯನ್ನೇ ಬಳಸಿಕೊಳ್ಳುತ್ತಿದ್ದೇವೆ. ಸಿಸಿಬಿಯಲ್ಲಿಯೇ ಪ್ರತ್ಯೇಕ ವಿಭಾಗದ (ಎಟಿಎಸ್) ಸ್ಥಾಪನೆ ಅಗತ್ಯವಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್, ಸೀಮಂತ್ ಕುಮಾರ್ ಸಿಂಗ್, ಬಿ.ಕೆ.ಸಿಂಗ್, ನಗರದ ಎಲ್ಲಾ ವಲಯದ ಡಿಸಿಪಿಗಳು, ದೇವಸ್ಥಾನ, ಪ್ರಾರ್ಥನಾ ಮಂದಿರಗಳ ಮುಖಂಡರು, ಮಾಲ್, ಹೋಟೆಲ್‌ಗಳ ಮಾಲೀಕರು ಸೇರಿ ಸುಮಾರು ಒಂದು ಸಾವಿರ ಮಂದಿ ಪಾಲ್ಗೊಂಡಿದ್ದರು.
ಬೆಂಗಳೂರಿಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ. ಪ್ರತಿಯೊಂದು ಸ್ಥಳದಲ್ಲಿಯೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಎಲ್ಲಾ ಪ್ರಾರ್ಥನಾ ಮಂದಿಗಳ ಮುಖಂಡರು ಹಾಗೂ ಹೋಟೆಲ್, ಮಾಲ್ ಮಾಲೀಕರೊಂದಿಗೆ ಸಭೆ ನಡೆಸಿ ಭದ್ರತೆ ಬಗ್ಗೆ ಸೂಚಿಸಲಾಗಿದೆ.
-ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತ.
ಯುವಕರು ನಾಪತ್ತೆಯಾದರೆ ಮಾಹಿತಿ ನೀಡಿ
ತಮ್ಮ ಸಮುದಾಯಗಳಲ್ಲಿ ಯಾವುದೇ ಯುವಕರು ಏಕಾಏಕಿ ನಾಪತ್ತೆಯಾದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಮಾಯಕರು ಬಲಿಪಶುವಾಗುವುದನ್ನು ತಡೆಯುವಂತೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದರು.
ಸಭೆಯಲ್ಲಿ ಮಾತನಾಡಿದ ಅವರು, ಉಗ್ರ ಸಂಘಟನೆಗಳು ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಸೆಳೆದು ಅವರನ್ನು ಭಯೋತ್ಪಾದನ ಕೃತ್ಯಗಳಿಗೆ ಬಳಸಿಕೊಳ್ಳುತ್ತಿವೆ. ಯಾವುದೇ ಸಮುದಾಯದಲ್ಲಿ ತಮ್ಮಗೆ ಪರಿಚಯವಿರುವ ಯುವಕರು ನಾಪತ್ತೆಯಾದರೆ ಮಾಹಿತಿ ನೀಡಿ. ಅಮಾಯಕ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಅಂತಹ ಯುವಕರ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತೇವೆ ಎಂದು ತಿಳಿಸಿದರು.
ಚಿನ್ನಸ್ವಾಮಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಇನ್ನು ಕೂಡ ಬಂಧನವಾಗಿಲ್ಲ. ಅಂತಹವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದರೆ ಯಾರೂ ಗುರುತಿಸುವುದಿಲ್ಲ ಎಂದು ಇಲ್ಲಿ ಅಡಗಿರುತ್ತಾರೆ. ಈ ಬಗ್ಗೆ ವಿಶೇಷ ನಿಗಾ ಇಡಲಾಗಿದೆ ಎಂದು ಅಲೋಕ್ ಕುಮಾರ್ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದರು.
ದಕ್ಷಿಣ ರಾಜ್ಯಗಳಲ್ಲಿ ಮುಂಜಾಗ್ರತೆಗೆ ಸೂಚನೆ
ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತಿದ್ದಂತೆ ದಕ್ಷಿಣ ರಾಜ್ಯಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ಕೇಂದ್ರ ಗೃಹ ಇಲಾಖೆಯಿಂದ ಸೂಚನೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಉಗ್ರರು ದಕ್ಷಿಣ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲಿ ಕೃತ್ಯ ಎಸಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ಮಾಹಿತಿ ಬಂದಿದೆ. ಹೀಗಾಗಿ ಬೆಂಗಳೂರಿನಲ್ಲಿ ಎಲ್ಲಾ ಪ್ರಾರ್ಥನಾ ಮಂದಿರ, ಹೋಟೆಲ್ ಹಾಗೂ ಮಾಲ್ ಮಾಲೀಕರ ಸಭೆ ನಡೆಸಲಾಗಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.