
ಬೆಂಗಳೂರು (ಅ.12): ಅಪರಾಧ ಕೃತ್ಯಗಳ ತನಿಖಾ ಸಂದರ್ಭದಲ್ಲಿ ಸೂಕ್ಷ್ಮ ಸಾಕ್ಷ್ಯಗಳನ್ನು ಕಲೆ ಹಾಕಲು ಮತ್ತು ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕಾರ್ಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ವೈಜ್ಞಾನಿಕ ನೆರವು ನೀಡಲು ರಾಜ್ಯದ 30 ಜಿಲ್ಲೆಗಳಲ್ಲಿ ವಿಶೇಷ ತಂಡ ರಚಿಸಲು ಗೃಹ ಇಲಾಖೆ ಮುಂದಾಗಿದೆ.
ಸೂಕ್ತ ಸಾಕ್ಷ್ಯಗಳ ವಿವರ ಸಲ್ಲಿಸದ ಕಾರಣ ಕೋರ್ಟ್‌ನಲ್ಲಿ ಹಲವು ಪ್ರಕರಣಗಳು ರದ್ದಾಗುತ್ತಿದ್ದವು. ಇದರಿಂದ ಎಚ್ಚೆತ್ತಿರುವ ಗೃಹ ಇಲಾಖೆ ರಾಜ್ಯದ 30 ಜಿಲ್ಲೆಗಳಲ್ಲಿ ಸಂಭವಿಸುವ ಅಪರಾಧ ಕೃತ್ಯಗಳ ತನಿಖೆಗೆ ಸಹಕಾರಿಯಾಗಲೆಂದೇ ವೈಜ್ಞಾನಿಕ ನೆರವು ತಂಡ ರಚಿಸಿದೆ. ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನ ಪದವಿಗಳಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪಡೆದಿರುವ 248 ವಿಜ್ಞಾನಿಗಳ ನೇಮಕಕ್ಕೆ ಸಿದ್ಧತೆ ನಡೆಸಿದೆ. ಅಲ್ಲದೆ, ನೇಮಕ ಪ್ರಕ್ರಿಯೆಗೆ ಗೃಹ ಇಲಾಖೆ ಈಗಾಗಲೇ ಅನುಮತಿ ನೀಡಿದ್ದು, ಅಧಿಸೂಚನೆ ಹೊರಡಿಸುವುದು ಬಾಕಿಯಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಅಧಿಕಾರಿಗಳ ತಂಡ: ಅಧಿಕಾರಿಗಳ ತಂಡದಲ್ಲಿ ಒಬ್ಬ ಹಿರಿಯ ವಿಜ್ಞಾನಿ, ಇಬ್ಬರು ಕಿರಿಯ ವಿಜ್ಞಾನಿಗಳು ಮತ್ತು ಒಬ್ಬ ಸಹಾಯಕರು ಇರುತ್ತಾರೆ. ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ನಡೆದಲ್ಲಿ ಅಲ್ಲಿಗೆ ಬರುವ ಈ ತಂಡ ಕುರುಹುಗಳನ್ನು ಸಂಗ್ರಹಿಸುತ್ತಾರೆ. ಸಾಕ್ಷ್ಯಗಳ ಸಂಗ್ರಹ ಹಾಗೂ ಸಂರಕ್ಷಣೆ ಹೇಗೆ? ಅವುಗಳಲ್ಲಿ ಪ್ರಯೋಗಾಲ ಯಕ್ಕೆ ತಕ್ಷಣ ಕಳುಹಿಸಬೇಕಾದ ವಸ್ತುಗಳು ಯಾವುವು ಎಂಬ ಸಲಹೆಗಳನ್ನು ಪೊಲೀಸರಿಗೆ ನೀಡುತ್ತಾರೆ.
ಸೂಕ್ಷ್ಮ, ಅತಿ ಸೂಕ್ಷ್ಮ ಸಾಕ್ಷ್ಯ ಪತ್ತೆಗೆ ತಂಡ ಸಹಕಾರಿ. ನೇಮಕ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಸಾಕ್ಷ್ಯಗಳ ಬಗ್ಗೆ ಶೀಘ್ರ ವರದಿ ನೀಡಬಹುದು.
ರೋಹಿಣಿ ಸೆಪಟ್ ಕಟೋಚ್ ಎಫ್‌ಎಸ್‌ಎಲ್ ನಿರ್ದೇಶಕಿ
ಈ ಹಿಂದೆ ರಾಜ್ಯದ ಪ್ರಾದೇಶಿಕ ಕೇಂದ್ರಗಳಾದ ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು ಮತ್ತು ಕಲಬುರ್ಗಿಯಲ್ಲಿ ಮಾತ್ರ ವೈಜ್ಞಾನಿಕ ನೆರವು ಕೇಂದ್ರಗಳಿದ್ದು, ಆಯಾ ವಿಭಾಗ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳ ತನಿಖೆಗೆ ನೆರವು ನೀಡುತ್ತಿದ್ದರು. ಇದರಿಂದಾಗಿ ಹಲವು ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಗಳ ಕಲೆ ಹಾಕುವುದಕ್ಕೆ ಸಾಧ್ಯವಾಗಂತಹ ಪರಿಸ್ಥಿತಿ ಇತ್ತು. ಇದೇ ಕಾರಣಕ್ಕಾಗಿ ಅಪರಾಧ ಕೃತ್ಯಗಳ ಸಂಬಂಧ ಸೂಕ್ತ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ವಿಫಲವಾಗುತ್ತಿದ್ದರು.
ಪ್ರಮುಖ ಕರ್ತವ್ಯ: ಪ್ರಕರಣಗಳಲ್ಲಿ ಡೆತ್‌ನೋಟ್, ರಕ್ತದ ಮಾದರಿ, ಕೂದಲು, ಉಗುರು, ಮೂಳೆ, ಮೂತ್ರ, ಬಟ್ಟೆಮೇಲೆ ರಕ್ತದ ಕಲೆಗಳು, ಘಟನೆ ನಡೆದ ಸ್ಥಳದಲ್ಲಿ ಪತ್ತೆಯಾಗುವ ಚಾಕು ಅಥವಾ ಇನ್ನಾವುದೇ ಮಾರಕಾಸ್ತ್ರಗಳು. ಮೃತ ದೇಹದೊಳಗಿನ ಮಾದರಿ(ದ್ರವ) ಸೇರಿದಂತೆ ಅಪರಾಧ ನಡೆದ ಸ್ಥಳದಲ್ಲಿ ಪತ್ತೆಯಾದ ಸಾಕ್ಷ್ಯ ಎಂದು ಪರಿಗಣಿಸುವ ಎಲ್ಲ ವಸ್ತುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡುವುದು. ಅವುಗಳನ್ನು ಪರಿಶೀಲಿಸಲು ಪ್ರತ್ಯೇಕ ವಿಭಾಗಗಳಿರುತ್ತವೆ. ಆಯಾ ವಿಭಾಗಕ್ಕೆ ಮುಖ್ಯಸ್ಥರಿರುತ್ತಾರೆ. ಪೊಲೀಸರು ಸಂಗ್ರಹಿಸಿಕೊಂಡು ಹೋಗುವ ವಸ್ತುಗಳನ್ನು ಪರೀಕ್ಷೆಗೊಳಪಡಿಸಿ ಬಂದ ಫಲಿತಾಂಶವನ್ನು ಸಂಬಂಧಪಟ್ಟಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸುತ್ತಾರೆ. ಆ ಫಲಿತಾಂಶದ ಆಧಾರದ ಮೇಲೆ ಕೆಲವೊಮ್ಮೆ ಪ್ರಕರಣಗಳು ನಿಂತಿರುತ್ತವೆ ಹಾಗೂ ಆರೋಪಿಗೆ ಶಿಕ್ಷೆಯಾಗುತ್ತದೆ.
ಎಫ್‌ಎಸ್‌ಎಲ್ ಉನ್ನತೀಕರಣ
ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಕೇಂದ್ರವನ್ನು ಉನ್ನತೀಕರಿಸಲಾಗುತ್ತಿದೆ. ಸಂಶೋಧನಾ ಕೇಂದ್ರಗಳ ಜತೆ, ಮತ್ತಷ್ಟುಹೊಸಸಂಶೋಧನಾ ಕೇಂದ್ರ ಗಳ ಪ್ರಾರಂಭಿಸಲು ಸರ್ಕಾರ ನಿರ್ಧ ರಿಸಿದೆ. ಧ್ವನಿ ಮತ್ತು ದೃಶ್ಯ ಮಾಧ್ಯಮ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರ ಮತ್ತು ಮೊಬೈಲ್ ತಂತ್ರಜ್ಞಾನಕ್ಕೆ ಕುರಿತ ತಂತ್ರಜ್ಞಾನ ಕೇಂದ್ರ ವನ್ನು ನೂತನವಾಗಿ ಪ್ರಾರಂಭಿಸಲಿದೆ ಎಂದು ವಿಧಿ ವಿಜ್ಞಾನ ಕೇಂದ್ರದ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.