ಪಿವಿ ಕ್ಯಾಂಟೀನ್'ನಿಂದ ಸಿಎಂ ಪಟ್ಟದವರೆಗೆ ಥೇನಿ ಪನ್ನೀರ್'ಸೆಲ್ವಂಗೆ ವಿಧೇಯತೆಯೇ ಏಣಿ

Published : Dec 11, 2016, 10:27 AM ISTUpdated : Apr 11, 2018, 12:45 PM IST
ಪಿವಿ ಕ್ಯಾಂಟೀನ್'ನಿಂದ ಸಿಎಂ ಪಟ್ಟದವರೆಗೆ ಥೇನಿ ಪನ್ನೀರ್'ಸೆಲ್ವಂಗೆ ವಿಧೇಯತೆಯೇ ಏಣಿ

ಸಾರಾಂಶ

ರೈತನ ಮಗನಾಗಿ ಹುಟ್ಟಿದ ಪನ್ನೀರ್‌ಸೆಲ್ವಂ, ವರ್ಚಸ್ವಿ ಸಿನಿಮಾ ತಾರೆ ಎಂ ಜಿ ರಾಮಚಂದ್ರನ್‌ ಆಕರ್ಷಣೆಯ ಕಾರಣಕ್ಕೆ ಎಐಎಡಿಎಂಕೆ ಪಕ್ಷಕ್ಕೆ ಒಲಿದವರು. 1996ರಲ್ಲಿ ಪೆರಿಯಕುಲಂ ಪಾಲಿಕೆ ಅಧ್ಯಕ್ಷಗಿರಿಯಿಂದ ಸಿಎಂ ಪಟ್ಟದ ತನಕ ಅವರು ಬೆಳೆದದ್ದು ರೋಚಕ ಎನಿಸಿದರೂ, ಎಲ್ಲಿಯೂ ಅವಸರ ಮತ್ತು ಅಧಿಕಾರ ಲಾಲಸೆ ಕಂಡಿದ್ದಿಲ್ಲ. ನಂತರ ಜಯಲಲಿತಾ ಅವರ ಆಪ್ತನಾಗಿ ಎರಡು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿಯೂ ಮುಖ್ಯಮಂತ್ರಿ ಎನಿಸಿಕೊಳ್ಳಲು ಹಿಂದೇಟು ಹಾಕಿದ್ದು ಅವರ ರಾಜಕೀಯ ಜೀವನದ ಸೋಜಿಗ. ಈಗ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಆದೇಶ ನೀಡಲು ಅಮ್ಮ ಜೊತೆಗಿಲ್ಲ. ಹಾಗಾಗಿ ರಾಜ್ಯವನ್ನು ಮುನ್ನಡೆಸಲು, ಪಕ್ಷದೊಳಗಿನ ಸಂಕಷ್ಟಗಳನ್ನು ನಿಭಾಯಿಸಲು ಅವರಲ್ಲಿನ ವಿಧೇಯತೆ ಅವರಿಗೆ ನೆರವಾಗಲಿದೆಯೇ ಎಂಬುದು ಸದ್ಯದ ಕುತೂಹಲ.

ವ್ಯಕ್ತಿ ವಿಶೇಷ

ತಮಿಳುನಾಡಿನ ಥೇನಿ ಜಿಲ್ಲೆಯ ಪೆರಿಯಕುಲಂನಲ್ಲಿರುವ ರೋಸಿ ಕ್ಯಾಂಟೀನ್‌ ಮೊದಲು ‘ಪಿವಿ ಕ್ಯಾಂಟೀನ್‌' ಎಂದೇ ಪ್ರಸಿದ್ಧ. ಇಲ್ಲಿ ಚಹಾದ ಜೊತೆಗೆ ಚರ್ಚೆಯಾಗುವುದು ರಾಜಕೀಯ ಮತ್ತು ಚುನಾವಣೆ­ಗಳು. ಏಕೆಂದರೆ ಇದು ಎಐಎಡಿಎಂಕೆಯ ರಾಜಕೀಯ ಪಡಸಾಲೆ. 1970ರಲ್ಲಿ ಆರಂಭವಾದ ಈ ಕ್ಯಾಂಟೀನ್‌ ಸಂಸ್ಥಾಪಕರು ಬಾಲ್ಯಸ್ನೇಹಿತರಾದ ಒ ಪನ್ನೀರ್‌ಸೆಲ್ವಂ ಮತ್ತು ವಿಜಯನ್‌. ಸುಮಾರು ಹತ್ತು ವರ್ಷಗಳ ಕಾಲ ಇವರಿಬ್ಬರೂ ಕ್ಯಾಂಟೀನ್‌'ನಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದರು. 1980ರಲ್ಲಿ ಪನ್ನೀರ್‌'ಸೆಲ್ವಂ ರಾಜಕೀಯದಲ್ಲಿ ಭವಿಷ್ಯ ಅರಸಲು ಆರಂಭಿಸಿದಾಗ ಕ್ಯಾಂಟೀನ್‌'ನನ್ನು ಸಹೋದರ ಒ ರಾಜ ಅವರಿಗೆ ಕೊಟ್ಟರೆ, ವಿಜಯನ್‌ ತಮ್ಮದೇ ಹೊಸ ಕ್ಯಾಂಟೀನ್‌ ಆರಂಭಿಸಿದರು. ಇದೇ ಪಿವಿ ಕ್ಯಾಂಟೀನ್‌ ಚರ್ಚೆಗಳು ಪನ್ನೀರ್‌ ಸೆಲ್ವಂ ಅವರಲ್ಲಿ ರಾಜಕೀಯದ ಕಡೆಗೆ ಒಲವು ಮೂಡಿಸಿತ್ತು ಎಂದು ಹಿರಿಯ ತಲೆಗಳು ಅಭಿಪ್ರಾಯಪಡುತ್ತವೆ. ರಾಜ ಅವರ ಮಗಳು ರೋಸಿ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಾಗ ಪಿವಿ ಕ್ಯಾಂಟೀನ್‌ ತನ್ನ ಹೆಸರನ್ನು ರೋಸಿ ಕ್ಯಾಂಟೀನ್‌ ಎಂದು ಬದಲಿಸಿಕೊಂಡಿತು. ಹೀಗೆ ಪಿವಿ ಕ್ಯಾಂಟೀನ್‌ನಿಂದ ಬದುಕು ಅರಸುತ್ತ ಕೊನೆಗೆ ಪನ್ನೀರ್‌ಸೆಲ್ವಂ, ಜಯಲಲಿತಾ ಅವರ ಆಪ್ತರಾಗಿ ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಕತೆ ಮಾತ್ರ ಬಹಳ ರೋಚಕ.

ತಮಿಳುನಾಡಿನ ದಕ್ಷಿಣದಲ್ಲಿ ಪ್ರಭಾವಿ ಜಾತಿಯಾಗಿರುವ ತೇವರ್‌ ಜನಾಂಗದ ಉಪಜಾತಿಯಾದ ಮಾರವಾರ್‌ ಜಾತಿಯಲ್ಲಿ ಜನಿಸಿದ ಪನ್ನೀರ್‌ಸೆಲ್ವಂ, ಚಿಕ್ಕಂದಿನಿಂದಲೇ ಶಾಂತ ಸ್ವಭಾವದ ವ್ಯಕ್ತಿ. ಅವರನ್ನು ಬಲ್ಲವರು ಎಂದೂ ಪನ್ನೀರ್‌'ಸೆಲ್ವಂ ದೊಡ್ಡ ಧ್ವನಿಯಲ್ಲಿ ಕಿರುಚಾಡಿದ್ದನ್ನು ಕೇಳಿಯೇ ಇಲ್ಲ. ಅವರ ಜನನ ಹೆಸರು ಕುಟುಂಬದ ದೇವತೆ ಪೇಚಿಯಮ್ಮನ್‌'ನಿಂದ ಬಂದ ‘ಪೇಚಿಮುತ್ತು.' ಆದರೆ ದೊಡ್ಡಪ್ಪನಿಗೂ ಅದೇ ಹೆಸರಿದ್ದ ಕಾರಣ ಪನ್ನೀರ್‌ಸೆಲ್ವಂ ಎಂದು ಬದಲಿಸಲು ಹಿರಿಯರು ನಿರ್ಧರಿಸಿದ್ದರು.

ರೈತ ಒಟ್ಟಾಕಾರ ತೇವರ್‌ ಮತ್ತು ಪತ್ನಿ ಪಳನಿಯಮ್ಮರ ಎಂಟು ಮಕ್ಕಳಲ್ಲಿ ಒಬ್ಬರು ಪನ್ನೀರ್‌ಸೆಲ್ವಂ. ಮೂಲತಃ ವಿರುಧುನಗರ್‌ನ ಸ್ರೀವಿಲ್ಲಿಪುತುರ್‌ನವರಾದ ಒಟ್ಟಾಕಾರ ತೇವರ್‌, ನಂತರ ಫಲವತ್ತಾದ ಭೂಮಿಯನ್ನು ಅರಸಿಕೊಂಡು ಥೇನಿಗೆ ಬಂದು, ಪೆರಿಯಕುಲಂನಲ್ಲಿ ನೆಲೆಸಿದವರು. ಒಟ್ಟಾಕಾರ ತೇವರ್‌ ಯಶಸ್ವಿ ರೈತ ಮತ್ತು ಸಾಲದಾತನೂ ಆಗಿದ್ದವರು. ನೆರೆಹೊರೆಯವರಿಗೆ, ಸ್ನೇಹಿತರಿಗೆ ಸಾಲ ನೀಡಿ, ಅವರು ಬದುಕು ಕಟ್ಟಿಕೊಳ್ಳಲು ಹೇಗೆ ಒಟ್ಟಾಕಾರ ನೆರವಾಗಿದ್ದರು ಎಂಬ ಬಗ್ಗೆ ಮೂರು ದಶಕಗಳ ನಂತರವೂ ರೋಸಿ ಕ್ಯಾಂಟೀನ್‌ನಲ್ಲಿ ಮಾತುಕತೆ ನಡೆ­ಯುತ್ತದೆ. ಅವರು ಸಾಲ ನೀಡುತ್ತಿದ್ದ ಮುಸ್ಲಿಂ ಸಮುದಾಯದ ಕುಟುಂಬಗಳು ಈಗಲೂ ತೇವರ್‌ ಕುಟುಂಬಕ್ಕೆ ನಿಷ್ಠೆ ತೋರಿಸುತ್ತಾರೆ. ಈ ಸಹೃದಯ ಭಾವನೆಯೇ ಅವರ ಹಿರಿಯ ಮಗ ಪನ್ನೀರ್‌ಸೆಲ್ವಂಗೆ 1970 ಮತ್ತು 1980ರಲ್ಲಿ ತಂದೆಯಿಂದ ಪಡೆದ ಆಸ್ತಿಯನ್ನು ವಿಸ್ತರಿಸುವಲ್ಲಿ ನೆರವಾಗಿತ್ತು. ಹೊಲಗಳ ಖರೀದಿ ಜೊತೆಗೆ ಡೈರಿ ಫಾರಂಗಳನ್ನೂ ಅವರು ಆರಂಭಿಸಿದ್ದರು. ಹಾಲು ಉತ್ಪಾದನೆ ಹೆಚ್ಚಾಗುತ್ತಿದ್ದಂತೆ ಪಿವಿ ಕ್ಯಾಂಟೀನ್‌ ಸ್ಥಾಪಿಸುವ ಯೋಜ­ನೆ­ಯನ್ನೂ ಹಾಕಿದ್ದರು. 1980ರಲ್ಲಿ ಒಟ್ಟಾಕಾರ ಮರಣದ ನಂತರ ಆಸ್ತಿ ಸಹೋದರರ ನಡುವೆ ಹಂಚಿ ಹೋಯಿತು. ಆದರೆ ಆ ಸಂದರ್ಭದಲ್ಲಿ ಪನ್ನೀರ್‌ಸೆಲ್ವಂ ವರ್ಚಸ್ವಿ ಸಿನಿಮಾ ತಾರೆ ಎಂ ಜಿ ರಾಮಚಂದ್ರನ್‌ ಮತ್ತು ಎಐಎಡಿಎಂಕೆ ಪಕ್ಷದ ಕಡೆಗೆ ಆಕರ್ಷಿತರಾಗಿದ್ದರು. ತಮ್ಮ ಪೂರ್ಣ ಸಮಯವನ್ನು ರಾಜಕೀಯಕ್ಕೆ ಅರ್ಪಿಸಿದರು. 1996ರಲ್ಲಿ ಅವರು ಪೆರಿಯಕುಲಂ ಪಾಲಿಕೆಯ ಅಧ್ಯಕ್ಷರಾಗಿಯೂ ಆಯ್ಕೆಯಾದರು.
ಪನ್ನೀರ್‌ಸೆಲ್ವಂ ಅವರನ್ನು ವ್ಯಾಖ್ಯಾನಿಸಲು ತಮಿಳರು ಬಳಸುವ ಪದ ‘ಪನಿವು', ಅಂದರೆ ವಿನಯ. ಪನ್ನೀರ್‌ಸೆಲ್ವಂ ಯಾವತ್ತೂ ಯಾರ ಮೇಲೂ ಎತ್ತರದ ಧ್ವನಿಯಿಂದ ಮಾತನಾಡಿದ್ದೇ ಇಲ್ಲ. ಗೌರವಯುತವಾಗಿ ವ್ಯವಹರಿಸುವುದು ಅವರ ಅಭ್ಯಾಸ. ತಂದೆಯಂತೆಯೇ ಪರೋಪಕಾರಿ. ರಾಜಕೀಯಕ್ಕೆ ತಮ್ಮ ಆಸ್ತಿಯ ಬಹುಭಾಗವನ್ನು ಮಾರಿದ್ದರು. ಪನ್ನೀರ್‌ಸೆಲ್ವಂ ತಮ್ಮ ಮತದಾರರಿಗೆ ಈ ಪ್ರಾಂತ್ಯದ ತೇವರ್‌ ಹಿರಿಮೆ ಮತ್ತು ಪ್ರಭಾವದ ಬಗ್ಗೆ ಹೇಳುತ್ತಾರೆ. ಅವರದೇ ಮಾರವಾರ್‌ ಜಾತಿಗೆ ಸೇರಿದವರೂ ಈ ಜನಪ್ರಿಯ ನಾಯಕರ ಜೊತೆಗೆ ಕೌಟುಂಬಿಕ ಸಂಬಂಧಗಳನ್ನು ಹುಡುಕಿ ಖುಷಿಪಡುತ್ತಾರೆ. ತಮ್ಮವರು ಎನ್ನುವ ಭಾವನೆ ಅವರಲ್ಲಿದೆ.

ಟೀಕಾಕಾರರು ಜಯಲಲಿತಾ ಕುರಿತ ಅವರ ವಿಧೇಯತೆಯನ್ನು ಅವಕಾಶವಾದಿತನ ಎಂದರೂ ಪನ್ನೀರ್‌ಸೆಲ್ವಂ ಮಾತ್ರ ಅತಿಯಾಗಿಯೇ ಅಮ್ಮನ ಆಪ್ತ. ಸಾರ್ವಜನಿಕ ರಾರ‍ಯಲಿಗಳಲ್ಲಿ ಬಹಿರಂಗವಾಗಿಯೇ ಅಮ್ಮನ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಜಯಲಲಿತಾ ಅವರಿದ್ದ ಹೆಲಿಕಾಪ್ಟರ್‌ ನೆಲವನ್ನು ಮುಟ್ಟುವ ಮೊದಲೇ ನಡುಬಾಗಿಸಿ ನಿಂತಿದ್ದುಂಟು. 2014ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೂ ಅವರು ಶಬರಿಮಲೆಗೆ ಯಾತ್ರೆ ಹೋಗಿ ಜಯಲಲಿತಾರಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು.

ಹಾಗೆಂದು ಆರಂಭದಲ್ಲಿಯೇ ಪನ್ನೀರ್‌ಸೆಲ್ವಂ ಅಮ್ಮಾ ಭಕ್ತರೇನೂ ಆಗಿರಲಿಲ್ಲ. ಎಂಜಿಆರ್‌ ಮೇಲಿನ ಅಭಿಮಾ­ನವೇ ಅವರು ರಾಜಕೀಯ ಪ್ರವೇಶಿಸಲು ಕಾರಣ. 1987ರಲ್ಲಿ ಎಂಜಿಆರ್‌ ಮಡಿದಾಗ ಎಐಎಡಿಎಂಕೆ ಎರಡು ಭಾಗಗಳಾಗಿ ವಿಭಜನೆಯಾದಾಗ, ಅವರು ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಕಡೆಗಿದ್ದರೇ ವಿನಾ ವರ್ಚಸ್ವಿ ನಾಯಕಿ ಜಯಲಲಿತಾರ ಪರವಾಗಿಯಲ್ಲ. ಆದರೆ ಜಯಲಲಿತಾ, ಎಂಜಿಆರ್‌ ಅವರ ನಂತರದ ಅನಭಿಷಿಕ್ತ ಉತ್ತರಾಧಿಕಾರಿ ಆಗುತ್ತಾರೆ ಎನ್ನುವಾಗ ಅವರು ತಮ್ಮ ಸಂಪೂರ್ಣ ವಿಧೇಯತೆಯನ್ನು ಅವರಿಗೆ ತೋರಿಸಿದರು. ಜಯಲಲಿತಾ ಥೇನಿಯಲ್ಲಿ ಅಂಡಿಪಟ್ಟಿಗ್ರಾಮಕ್ಕೆ ಭೇಟಿ ನೀಡಿದಾಗ ಮೊದಲ ಬಾರಿ ಅವರ ಗಮನ ಸೆಳೆದಿದ್ದರು ಪನ್ನೀರ್‌ಸೆಲ್ವಂ. 2006ರ ಏಪ್ರಿಲ್‌ನಲ್ಲಿ ಜಯಲಲಿತಾ ಕಾಲಿಡಬೇಕಿದ್ದ ಕಾರ್ಪೆಟ್‌ ಮೇಲೆ ತಮ್ಮ ಪಾಕೆಟ್‌ ಒಳಗಿನಿಂದ ತೆಗೆದ ಸ್ವಚ್ಛ ಬಿಳಿ ವಸ್ತ್ರದಿಂದ ಒರೆಸಿದಾಗ ತಮ್ಮ ನಾಯಕಿಯ ನಂಬಿಕೆಯನ್ನು ಗಳಿಸಿಕೊಂಡಿದ್ದರು.

ಜಯಲಲಿತಾ ಅವರಿಗಾಗಿ ಪನ್ನೀರ್‌'ಸೆಲ್ವಂ ತಲೆಬಾಗಿದ್ದಾರೆ, ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ, ಅವರಿಗಾಗಿ ಅತ್ತಿದ್ದಾರೆ, ಮರುಮಾತನಾಡದೆ ಆದೇಶಗಳನ್ನು ಪಾಲಿಸಿದ್ದಾರೆ. ಆಡಳಿತಶಾಹಿ ಜೊತೆಗೆ ಅತ್ಯುತ್ತಮವಾಗಿ ಸಂಯೋ­ಜನೆ ನಡೆಸಿದ್ದಾರೆ. ಪ್ರಬುದ್ಧ ಸಾಂಘಿಕ ನಾಯಕ ಮತ್ತು ಸಾಂಘಿಕ ನಡವಳಿಕೆ ತೋರುವವರು ಎಂದು ಸಾಬೀತು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಈ ಮೃದುಮಾತಿನ, ನಿಗರ್ವಿ ದಳವಾಯಿ ಜಯಲಲಿತಾರ ಆದೇಶದಂತೆ ಎರಡು ಬಾರಿ ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದರು. ಮೊದಲಿಗೆ 2001ರ ಸೆಪ್ಟೆಂಬರ್‌ನಲ್ಲಿ ತಾನ್ಸಿ ಭ್ರಷ್ಟಾಚಾರ ಪ್ರಕರ­ಣದಲ್ಲಿ ಜಯಲಲಿತಾ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಮತ್ತು ಇನ್ನೊಮ್ಮೆ 2014ರಲ್ಲಿ ಕರ್ನಾಟಕದ ನ್ಯಾಯಾಲಯದಲ್ಲಿ ಆಸ್ತಿ ದುರುಪಯೋಗ ಪ್ರಕರಣ ಸಂಬಂಧ ಜಯಲಲಿತಾ ಆರೋಪಿ ಎಂದು ಸಾಬೀತಾದಾಗ ಪನ್ನೀರ್‌ಸೆಲ್ವಂ ಅವರು ಉಸ್ತುವಾರಿ ಮುಖ್ಯಮಂತ್ರಿಯಾದರು. ಹೆಚ್ಚು ದೀರ್ಘ ಅವಧಿ­ಯೇನೂ ಇರದ ಉಸ್ತುವಾರಿ ಮುಖ್ಯಮಂತ್ರಿ ಸ್ಥಾನದಲ್ಲಿ, ವಿಪಕ್ಷಗಳ ಕೆಲ ಟೀಕೆಗಳ ಹೊರತಾಗಿ ಬಹುತೇಕ ವಿವಾದ­ರಹಿತವಾಗಿಯೇ ಇದ್ದರು. ವಿಪಕ್ಷಗಳು ಅವರನ್ನು ಕೈಗೊಂಬೆ ಎಂದು ಕರೆದು, ಮೇಲಿನಿಂದ ಬಂದ ಆದೇಶಗಳನ್ನು ಪಾಲಿಸುವ ಹೊರತಾಗಿ ಸ್ವಂತಿಕೆಯಿಂದ ಏನೂ ಮಾಡುತ್ತಿಲ್ಲ ಎಂದು ಆರೋಪಿಸಿದ್ದವು. ಮೊದಲ ಬಾರಿ ಆರು ತಿಂಗಳ ಕಾಲ ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದ ಪನ್ನೀರ್‌ಸೆಲ್ವಂ, ನಂತರ ಕಂದಾಯ ಖಾತೆಯನ್ನೂ ವಹಿಸಿ­ಕೊಂಡಿದ್ದರು. 2006ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಸೋತಾಗ, ಪನ್ನೀರ್‌ಸೆಲ್ವಂ ವಿಧಾನಸಭೆ­ಯಲ್ಲಿ ವಿರೋಧಪಕ್ಷದ ಮುಖ್ಯಸ್ಥರಾಗಿದ್ದರು. ಎಐಎಡಿಎಂಕೆ ಶಾಸಕರನ್ನು ಸಭಾಪತಿಯವರು ಸಭೆಯಿಂದ ಅಮಾನತುಗೊಳಿಸಿದಾಗ ಜಯಲಲಿತಾ ಮತ್ತೆಂದೂ ವಿಪಕ್ಷದ ನಾಯಕಿಯಾಗಿ ಸದನದೊಳಗೆ ಕಾಲಿಡುವುದಿಲ್ಲ ಎಂದು ಶಪಥಗೈದಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿಪಕ್ಷ ನಾಯಕಿಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸದನದ ವ್ಯವಹಾರಗಳ ಹೊರೆಯನ್ನು ಪನ್ನೀರ್‌ಸೆಲ್ವಂ ಹೆಗಲಿಗೆ ಹಾಕಿದ್ದರು. 2011ರಲ್ಲಿ ಪನ್ನೀರ್‌ಸೆಲ್ವಂ ಬೊಡಿನಯಕನ್ನೂರ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು, ಜಯಲಲಿತಾ ಅವರ ಸಂಪುಟದಲ್ಲಿ ಹಣಕಾಸು ಸಚಿವರಾದರು.

2014ರಲ್ಲಿ ಮತ್ತೆ ಉಸ್ತುವಾರಿ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಬಂತು. ಜಯಲಲಿತಾ ಅವರ ಮೇಲಿನ ಆಸ್ತಿ ಅಕ್ರಮ ಆರೋಪ ಸಾಬೀತಾಗಿ ಜೈಲಿಗೆ ಹೋಗುವ ಪ್ರಸಂಗ ಬಂತು. ಅವರ ಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ತಮ್ಮ ನಾಯಕಿಯ ಫೋಟೋವನ್ನು ಮುಂದಿಟ್ಟುಕೊಂಡು ಕಣ್ಣೀರಿನ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು. ಪನ್ನೀರ್‌ಸೆಲ್ವಂ ಅವರು ಜಯಲಲಿತಾರ ರಾಜಕೀಯ ಹಾದಿಯಲ್ಲಿ ದೃಢವಾಗಿ ತಮ್ಮ ಹೆಸರು ಬರೆದು ಎರಡು ದಶಕಗಳ ಕಾಲ ಅವರಿಗೆ ವಿಧೇಯರಾಗಿದ್ದವರು. ಆದರೆ ತಮ್ಮ ಪ್ರಭಾವಿ ನಾಯಕರ ವರ್ಚಸ್ಸಿಗೆ ಹಾನಿಯಾಗುವಂತೆ ಮುಖ್ಯಮಂತ್ರಿಯ ಸ್ಥಾನದಲ್ಲಿ ಕೂರುವ ಪ್ರಯತ್ನವನ್ನು ಅವರೆಂದೂ ಮಾಡಲಿಲ್ಲ. ಅಮ್ಮನ ನೆರಳಲ್ಲಿಯೇ ಇದ್ದುಕೊಂಡು, ಅತಿ ಕನಿಷ್ಠ ಮಾಧ್ಯಮ ಪ್ರಚಾರ ತಮಗೆ ಸಿಗುವಂತೆ ವ್ಯವಹರಿಸಿದರು. ಇತ್ತೀಚೆಗೆ, ಅಕ್ಟೋಬರ್‌ 12ರಿಂದ ಜಯಲಲಿತಾ ಆಸ್ಪತ್ರೆ ವಾಸದಲ್ಲಿದ್ದಲ್ಲಿಂದ ಪನ್ನೀರ್‌ಸೆಲ್ವಂ ಅವರಿಗೆ ಮತ್ತೆ ಅವರ ಖಾತೆಗಳನ್ನು ನಿಭಾಯಿಸುವ ಹೊಣೆಯನ್ನು ರಾಜ್ಯಪಾಲರು ಹೊರಿಸಿದ್ದರು. ಜೊತೆಗೆ ಸಚಿವ ಸಂಪುಟದ ಸಭೆಗಳನ್ನೂ ಅವರೇ ನಿಭಾಯಿಸಿದರು.

ಈ ಚಹಾ ಅಂಗಡಿ ಮಾಲೀಕ, ಜಯಲಲಿತಾರ ರಾಜಕೀಯ ಭವಿಷ್ಯವಾಗುವ ಸಾಧ್ಯತೆಯಿದ್ದ ಶಶಿಕಲಾ ಅವರ ವಿಶ್ವಾಸವನ್ನೂ ಗಳಿಸಿಕೊಂಡವರು. ತೇವರ್‌ ಸಮುದಾಯದಿಂದಲೇ ಬಂದಿರುವ ಶಶಿಕಲಾ ಗಮನವನ್ನು ಅವರು ಸೆಳೆದದ್ದು ಸಹಜವೇ. ಪೆರಿಯಕುಲಂ ಕ್ಷೇತ್ರದಲ್ಲಿ ಶಶಿಕಲಾ ಅವರ ಸೋದರಸಂಬಂಧಿ ಟಿಟಿವಿ ದಿನಕರನ್‌ ಅವರಿಗೆ ಲೋಕಸಭೆ ಪ್ರಚಾರದ ಸಂದರ್ಭದಲ್ಲಿ ನೆರವಾಗುವ ಮೂಲಕ ಈ ವಿಶ್ವಾಸವನ್ನು ಅವರು ಗಳಿಸಿಕೊಂಡಿದ್ದರು.

ಪನ್ನೀರ್‌ಸೆಲ್ವಂ ವೇಗವಾಗಿ ರಾಜಕೀಯ ಮೆಟ್ಟಿಲುಗಳನ್ನು ಏರಿದವರು. ಆದರೆ ತಮ್ಮ ಉಸ್ತುವಾರಿ ಮುಖ್ಯಮಂತ್ರಿಯ ಅವಧಿಯಲ್ಲಿ ತಾತ್ಕಾಲಿಕವಾಗಿ ಕಚೇರಿ ಕೆಲಸ ನಿಭಾಯಿಸುತ್ತಿದ್ದೇನೆ ಎಂಬುದನ್ನು ಬಿಂಬಿಸಲು ಮರೆಯಲೇ ಇಲ್ಲ. ಇದೇ ವರ್ಷದ ಫೆಬ್ರವರಿಯಲ್ಲಿ ಪನ್ನೀರ್‌ಸೆಲ್ವಂ ಅವರ ರಹಸ್ಯ ಉದ್ಯಮ ಮತ್ತು ಅವರ ಸಹೋದರರ ಪ್ರಭಾವ ಹೆಚ್ಚಾಗುತ್ತಿರುವ ಬಗ್ಗೆ ಸುದ್ದಿಗಳು ಹರಡಿದ್ದವು. ಆದರೆ ಇವು ಅಲ್ಪಾವಧಿಯ ಊಹಾಪೋಹಗಳಾಗಿಯೇ ಉಳಿದವು. ಅವರ ವ್ಯಕ್ತಿ ನಿಷ್ಠೆ ಮತ್ತು ರಾಜಕೀಯ ನಿಷ್ಠೆ ಮತ್ತೆ ಅವರಿಗೆ ಉನ್ನತ ಸ್ಥಾನವನ್ನು ಕೊಟ್ಟಿದೆ. ನಿಜ ಅರ್ಥದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಬಾರಿಯೂ ಜಯಲಲಿತಾರ ಚಿತ್ರವನ್ನು ಜೇಬಿನಲ್ಲಿಟ್ಟುಕೊಂಡೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಈಗ ಆದೇಶ ನೀಡಲು ಅಮ್ಮ ಜೊತೆಗಿಲ್ಲ. ಜಯಲಲಿತಾ ಅವರ ವರ್ಚಸ್ಸಿನ ಪ್ರಭಾವದ ನಡುವೆ ಅವರು ಹೇಗೆ ತಮಿಳುನಾಡಿನ ಆಡಳಿತ ನಡೆಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ