ಪ್ರಶ್ನೆಗಳ ಅಡಗುತಾಣವಾದ ಉತ್ತರ ಪ್ರದೇಶ

Published : Jan 10, 2017, 10:59 AM ISTUpdated : Apr 11, 2018, 12:58 PM IST
ಪ್ರಶ್ನೆಗಳ ಅಡಗುತಾಣವಾದ ಉತ್ತರ ಪ್ರದೇಶ

ಸಾರಾಂಶ

ದೇಶದ ಅತ್ಯಂತ ದೊಡ್ಡ ರಾಜ್ಯ ಉತ್ತರ ಪ್ರದೇಶದ ಚುನಾವಣೆ ದೇಶದ ರಾಜಕೀಯ ಭವಿಷ್ಯದ ಭಾಷ್ಯ ಬರೆಯಲಿದೆ. ಮಿಕ್ಕ ನಾಲ್ಕು ರಾಜ್ಯಗಳ ಚುನಾ­ವಣಾ ಫಲಿತಾಂಶವು ರಾಜಕೀಯದ ಗಾಳಿ ಎತ್ತ ಕಡೆ ಬೀಸುತ್ತಿದೆ ಎಂಬುದರ ಸಂಕೇತಗಳನ್ನು ಕೊಡಲಿದ್ದು, ಈ ಪಂಚರಾಜ್ಯಗಳ ಫೈಟ್‌ ಯಾರನ್ನು ಪಂಕ್ಚರ್‌ ಮಾಡಲಿದೆ ಹಾಗೂ ಯಾರಿಗೆ ಆಮ್ಲಜನಕ ಪೂರೈಸಲಿದೆ ಎನ್ನುವುದು ಮಾರ್ಚ್ 11ಕ್ಕೆ ಸ್ಪಷ್ಟವಾಗಲಿದೆ.

ನರೇಂದ್ರ ಮೋದಿ ಸರ್ಕಾರ 2014ರಲ್ಲಿ ಅಧಿಕಾ​ರಕ್ಕೆ ಬಂದ ಮೇಲೆ ನಡೆಯಲಿರುವ ಅತ್ಯಂತ ವರ್ಣರಂಜಿತ ಚುನಾವಣೆಗಳಿಗೆ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದ್ದು, 2017ರ ಮೊದಲ ವಾರ­ದಿಂದಲೇ ದೇಶದಲ್ಲಿ ಚುನಾವಣಾ ಜ್ವರ ಶುರು­ವಾಗಿದೆ. ದೇಶದ ಅತ್ಯಂತ ದೊಡ್ಡ ರಾಜ್ಯ ಉತ್ತರ ಪ್ರದೇಶದ ಚುನಾವಣೆ ಬಹುತೇಕ ದೇಶದ ರಾಜಕೀಯ ಭವಿಷ್ಯದ ಭಾಷ್ಯ ಬರೆಯಲಿದ್ದು, ಇನ್ನುಳಿದಂತೆ ದೇವಭೂಮಿ ಉತ್ತರಾಖಂಡ, ಪಾಕ್‌ನೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯ ಪಂಜಾಬ್‌, ಕರಾವಳಿಯ ಗೋವಾ ಮತ್ತು ಈಶಾನ್ಯದ ಮಣಿಪುರದಲ್ಲಿ ಚುನಾ­ವಣೆಗಳ ಫಲಿತಾಂಶವು ರಾಜಕೀಯ ಗಾಳಿ ಎತ್ತ ಕಡೆ ಬೀಸುತ್ತಿದೆ ಎಂಬುದರ ಸಂಕೇತಗಳನ್ನು ಕೊಡಲಿದ್ದು, ನಿಶ್ಚಿತವಾಗಿ ಪಂಚ ಫೈಟ್‌ ಯಾರನ್ನು ಪಂಕ್ಚರ್‌ ಮಾಡಲಿದೆ ಹಾಗೂ ಯಾರಿಗೆ ಆಮ್ಲಜನಕ ಪೂರೈಸಲಿದೆ ಎನ್ನುವುದು ಮಾರ್ಚ್ 11ಕ್ಕೆ ಸ್ಪಷ್ಟವಾಗಲಿದೆ.

ಪಂಚರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಕುತೂಹಲ ಇರುವುದು ದೇಶದ ರಾಜಕಾರಣದ ಪ್ರಯೋಗಶಾಲೆ ಉತ್ತರ ಪ್ರದೇಶದ ಮೇಲೆ. ಹಿಂದಿ ಭಾಷಿಕ ರಾಜ್ಯಗಳ ಪೈಕಿ ದೆಹಲಿ ಮತ್ತು ಬಿಹಾರ­ಗಳಲ್ಲಿ ಸೋತ ನಂತರ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶತಾಯಗತಾಯ ಉತ್ತರ ಪ್ರದೇಶದಲ್ಲಿ ಗೆಲ್ಲಲೇಬೇಕಾದ ಅನಿವಾ­ರ್ಯತೆ ಸೃಷ್ಟಿಯಾಗಿದೆ.

ರಾಜಕೀಯದಲ್ಲಷ್ಟೇ ದೊಡ್ಡ ರಾಜ್ಯ:
ಯುಪಿ ದೇಶದ ಅತ್ಯಂತ ಹೆಚ್ಚು ಜನಸಾಂದ್ರತೆ ಇರುವ ರಾಜ್ಯ. 2011ರ ಜನಗಣತಿಯ ಪ್ರಕಾರ, ಉತ್ತರ ಪ್ರದೇಶದ ಜನಸಂಖ್ಯೆ 19 ಕೋಟಿ. ಉತ್ತರ ಪ್ರದೇಶದ ಜನಸಂಖ್ಯೆ ಪಾಕಿಸ್ತಾನದ ಜನಸಂ​ಖ್ಯೆ​ಗಿಂತ ಹೆಚ್ಚು! ಆದರೆ ಏಕೋ ಏನೋ ಇಲ್ಲಿಯವರೆಗೆ ಉತ್ತರ ಪ್ರದೇಶದ ಹೆಸರು ದೇಶದ ಅಭಿವೃದ್ಧಿ ಮಾನದಂಡಗಳಲ್ಲಿ ಕಾಣಿಸಿ​ಕೊಳ್ಳುವುದಿಲ್ಲ. ಬೀಮಾರು ರಾಜ್ಯಗಳ ಪಟ್ಟಿಯಲ್ಲಿ ಬಿಹಾರದ ನಂತರ ಕಾಣಿಸುವ ಎರಡನೇ ರಾಜ್ಯವೇ ಉತ್ತರ ಪ್ರದೇಶ. ಜಾತಿ ರಾಜಕಾರಣದ ಕಾರಣದಿಂದ ಉಂಟಾಗಿರುವ ರಾಜಕೀಯ ಅರಾಜಕತೆ ಭ್ರಷ್ಟಾಚಾರ ಮತ್ತು ಆಡಳಿತದಲ್ಲಿ ಪಾರದರ್ಶಕತೆಯ ಕೊರತೆಯಿಂದ ಉತ್ತರ ಪ್ರದೇಶದ ಬಹುತೇಕ ಪರಿಣತ ಕಾರ್ಮಿಕ ವರ್ಗ ಮುಂಬೈ, ದೆಹಲಿ, ಬೆಂಗಳೂರು ನಗರಗಳತ್ತ ವಲಸೆ ಹೋಗಿದ್ದು, ರಾಜಕಾರಣದ ದೃಷ್ಟಿಯಿಂದ ಎಷ್ಟೇ ಮಹತ್ವವಿದ್ದರೂ ಅಷ್ಟುಅಭಿವೃದ್ಧಿ ಮಾತ್ರ ಯುಪಿಯಲ್ಲಿ ಕಾಣಸಿಗುವುದಿಲ್ಲ.

ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ನಡೆದಿದ್ದು ಒಂದು ರೀತಿಯಲ್ಲಿ ಬ್ರಾಹ್ಮಣ ಬಾಹುಳ್ಯ ರಾಜಕೀಯ. ಉತ್ತರ ಪ್ರದೇಶದಲ್ಲಿ ಸುಮಾರು ಹತ್ತರಿಂದ ಹನ್ನೆರಡು ಪ್ರತಿಶತವಿರುವ ಬ್ರಾಹ್ಮಣರು ಪಂಡಿತ್‌ ನೆಹರು ಮತ್ತು ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್‌ ಪಕ್ಷದ ಕಟ್ಟಾಮತದಾರರಾಗಿದ್ದರು. ಬ್ರಾಹ್ಮಣರ ಮತ್ತು ದಲಿತರ ಮತಗಳ ಜೊತೆಗೆ ಅನಾಯಾಸವಾಗಿ ಯುಪಿಯಲ್ಲಿ ಅಧಿಕಾರವನ್ನು ಹಿಡಿದಿಟ್ಟುಕೊಂಡಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಮೊದಲ ಬಾರಿ ಹೊಡೆತ ಬಿದ್ದಿದ್ದು ಮಂಡಲ್‌ ವರದಿ ನಂತರ ಆರಂಭ­ವಾದ ಹಿಂದುಳಿದ ವರ್ಗಗಳ ಧ್ರುವೀಕರಣ ಮತ್ತು ಅಯೋಧ್ಯೆ ಕಾರಣ­ದಿಂದ ಶುರುವಾದ ಹಿಂದುತ್ವ ಧ್ರುವೀಕರಣ​ದಿಂದ. ಬದಲಾಗುತ್ತಿದ್ದ ಸಾಮಾಜಿಕ ಸಮೀಕರಣಗಳನ್ನು ಅರ್ಥ ಮಾಡಿಕೊಳ್ಳದೆ ಇದ್ದ ಕಾರಣದಿಂದ ಒಂದು ರೀತಿಯಲ್ಲಿ 1990ರ ನಂತರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ನಾಮಾವಶೇಷದ ಹಂತಕ್ಕೆ ತಲುಪಿತು.

1990ರ ನಂತರ, ಮುಲಾಯಂ ಸಿಂಗ್‌ ಅವರ ಸಮಾಜವಾದಿ ಪಕ್ಷ ಮತ್ತು ಮಾಯಾವತಿಯವರ ಬಹುಜನ ಸಮಾಜವಾದ ಪಕ್ಷದ ನಡುವಿನ ಹಗ್ಗಜಗ್ಗಾಟದಿಂದಾಗಿ ಸತತ 17 ವರ್ಷಗಳ ರಾಜಕೀಯ ಅಸ್ಥಿರತೆಯನ್ನು ಕಂಡ ಉತ್ತರ ಪ್ರದೇಶಕ್ಕೆ ಒಂದೇ ಪಕ್ಷದ ಸ್ಥಿರ ಅಧಿಕಾರ ಸಿಕ್ಕಿದ್ದು 2007ರಲ್ಲಿ. ಅದೂ ಕೂಡ ಮಾಯಾವತಿ ತನ್ನ ದಲಿತ ಮತಗಳನ್ನು ಆಧಾರವಾಗಿ ಇಟ್ಟು­ಕೊಂಡು, ಅದರ ಜೊತೆಗೆ ಹತ್ತು ಪ್ರತಿಶತ ಇರುವ ಬ್ರಾಹ್ಮಣರನ್ನು ಜೊತೆಗೆ ತರುವ ಮೂಲಕ, 17 ವರ್ಷಗಳ ನಂತರ ಮೊದಲ ಬಾರಿ ಏಕಾಂಗಿಯಾಗಿ ಅಧಿಕಾರದ ಗದ್ದುಗೆಯನ್ನು ಹಿಡಿಯುವಲ್ಲಿ ಸಫಲರಾದರು. 2012ರಲ್ಲಿ ಮುಲಾಯಂ ತನ್ನ ಪುತ್ರ ಅಖಿಲೇಶ್‌ ಯಾದವ್‌ರನ್ನು ಮುಂದೆ ಮಾಡಿ, ಆನೆಯನ್ನು ಹಿಂದಿಕ್ಕಿ, ಸೈಕಲ… ಮೇಲೆ ಕುಳಿತು ಮೊದಲ ಬಾರಿ ಅಧಿಕಾರದ ಗದ್ದುಗೆಯನ್ನು ತಾವೊಬ್ಬರೇ ಏರಿದ್ದು ಈಗ ಇತಿಹಾಸ. 2017ರಲ್ಲಿ ಈಗ ಪುನರಪಿ ಅಧಿಕಾರ ಯಾರಿಗೆ ಎಂಬ ಚರ್ಚೆ ಆರಂಭವಾಗಿದ್ದು ಒಂದೇ ಪಕ್ಷ ಅಧಿಕಾರ ಹಿಡಿಯುತ್ತದೋ ಅಥವಾ ಮತ್ತೊಮ್ಮೆ ಮೈತ್ರಿ ಸರ್ಕಾರ ಬರುತ್ತದೋ ಎಂಬುದನ್ನು ಈಗಲೇ ಹೇಳುವುದು ಕಷ್ಟ.

ಹೇಳಿಕೊಳ್ಳಲು ಮಾತ್ರ ಸಮಾಜವಾದ:
2012ರಲ್ಲಿ ಅಧಿಕಾರಕ್ಕೆ ಬಂದ ನಂತರ ಮುಲಾಯಂ ಸಿಂಗ ಯಾದವ್‌, ಜನರಿಗೆ ಬದಲಾವಣೆ ಬೇಕಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು, ಯುವಮುಖವಾಗಿದ್ದ ಪುತ್ರ ಅಖಿಲೇಶ್‌ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೂ ರಿಮೋಟ್‌ ಕಂಟ್ರೋಲ… ತನ್ನ ಬಳಿಯೇ ಇರಬೇಕು ಎಂದು ಪ್ರಯತ್ನಿಸಿದ್ದು, ಈಗ ಅಪ್ಪ-ಮಗನ ನಡುವಿನ ಯಾದವೀ ಕಲಹಕ್ಕೆ ಮುಖ್ಯ ಕಾರಣ. ಪಕ್ಷದ ನಾಯಕರ ಎದುರು, ಕಾರ್ಯಕರ್ತರ ಎದುರು ಮನಬಂದಂತೆ ಪುತ್ರನನ್ನು ಹೀಗಳೆಯುತ್ತಿದ್ದ ಮುಲಾಯಂ, ಈಗ ತಾನೇ ಕಟ್ಟಿಬೆಳೆಸಿದ ಪಕ್ಷದಲ್ಲಿ ಏಕಾಂಗಿಯಾಗಿದ್ದು, ಸಂಪೂರ್ಣ ಪಕ್ಷದ ಕೇಡರ್‌ ಮತ್ತು ನಾಯಕರು ಅಖಿಲೇಶ್‌ ಯಾದವ್‌ ಪರವಾಗಿ ನಿಂತಿದ್ದರೆ, ದೇಶದ ರಾಜಕಾರಣದಲ್ಲಿ ಚಾಣಾಕ್ಷ ಎಂದು ಹೇಳಲಾಗುತ್ತಿದ್ದ ಮುಲಾಯಂ ಸಿಂಗ್‌ ಯಾದವ್‌ ಭವಿಷ್ಯದ ದಾರಿ ಕಾಣದೆ ರಾಜಮಾರ್ಗದಿಂದ ಕವಲು ಒಡೆದ ದಾರಿಯಲ್ಲಿ ಸಪ್ಪೆ ಮೋರೆ ಹೊತ್ತು ಹೆಜ್ಜೆ ಹಾಕುತ್ತಿದ್ದಾರೆ.

ಚೌಧರಿ ಚರಣ ಸಿಂಗ್‌ ಅವರ ರಾಜಕೀಯ ವಾರಸುದಾರಿಕೆ ಮೇಲೆ ಉತ್ತರ ಪ್ರದೇಶದಲ್ಲಿ ಮಂಡಲ್‌ ಸೃಷ್ಟಿಸಿದ ಅಲೆ ಮತ್ತು ಕಮಂಡಲದ ವಿರೋಧದಿಂದಾಗಿ ಮುಸ್ಲಿಮರು ಕೊಟ್ಟಬೆಂಬಲದ ಕಾರಣದಿಂದ ಒಂದು ಪ್ರಬಲ ಯಾದವ ಶಕ್ತಿಯಾಗಿ ಬೆಳೆದ ಮುಲಾಯಂ ಸಿಂಗ್‌ ಯಾದವ್‌, ಹೆಸರಿಗೆ ಮಾತ್ರ ಸಮಾಜವಾ​ದವನ್ನು ಅಪ್ಪಿಕೊಂಡರಾದರೂ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣ ಅವರ ಸಿದ್ಧಾಂತಗಳನ್ನು ಅವಶ್ಯವಾಗಿ ಗಾಳಿಗೆ ತೂರಿದರು. ಪಕ್ಷವೆಂದರೆ ಪರಿವಾರವೇನೋ ಎಂಬಷ್ಟರ ಮಟ್ಟಿಗೆ ತನ್ನ ಕುಟುಂಬದ ಮೂವತ್ತಕ್ಕೂ ಹೆಚ್ಚು ಸದಸ್ಯರನ್ನು ರಾಜಕಾರಣಕ್ಕೆ ಎಳೆದುತಂದ ಮುಲಾಯಂ, ಇವತ್ತು ತನ್ನ ಜೀವನದ ಸಂಧ್ಯಾಕಾಲದಲ್ಲಿ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾಗಿ ರಾಜಕಾರಣದ ಅಂಚಿಗೆ ಬಂದು ನಿಂತಿದ್ದಾರೆ. ಕಳೆದ 30 ವರ್ಷಗಳಲ್ಲಿ ತಮ್ಮ ತಮ್ಮ ಅಧಿಕಾರದ ರಾಜಕಾರಣಕ್ಕೆ ಮುಲಾ​ಯಂರಿಗೆ ಬಹುಪರಾಕ್‌ ಹೇಳುತ್ತಿದ್ದ ಜನ ಇವತ್ತು ಉದಯಿಸುತ್ತಿರುವ ಹೊಸ ಸೂರ್ಯನಿಗೆ ಅಘ್ರ್ಯ ಸಲ್ಲಿಸುತ್ತಿದ್ದಾರೆ. ರಾಜಕಾರಣವೇ ಹಾಗೆ, ಇಲ್ಲಿ ಪಿತ, ಪುತ್ರ, ಅಣ್ಣ, ತಮ್ಮ, ಹೀಗೆ ಯಾವ ಸಂಬಂಧಕ್ಕೂ ಬೆಲೆಯೂ ಇಲ್ಲ ಬಾಳಿಕೆಯೂ ಇಲ್ಲ. ಒಮ್ಮೊಮ್ಮೆ ಅಧಿಕಾರಕ್ಕಾಗಿ ಮಹತ್ವಾಕಾಂಕ್ಷೆ, ಮಗದೊಮ್ಮೆ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಅಧಿಕಾರದ ವಿಚಿತ್ರ ಆಟಗಳು.

ಮುಲಾಯಂ ಸ್ಥಿತಿಗೆ ಅವರೇ ಕಾರಣ!
ಈ ಎಲ್ಲದರ ಮಧ್ಯೆ, ಮುಲಾಯಂ ಸಿಂಗ್‌ ಯಾದವ್‌, ಪರಿವಾ​ರ​ವನ್ನು, ಪಕ್ಷವನ್ನು, ಅಧಿಕಾರವನ್ನು ಕಳೆದುಕೊಂಡಿದ್ದಲ್ಲದೆ, ಯಕಶ್ಚಿತ್‌ ಸೈಕಲ್'ಗಾಗಿ ಚುನಾವಣಾ ಆಯೋಗಕ್ಕೆ ಎಡತಾಕುತ್ತಿದ್ದಾರೆ. ದೆಹಲಿ ವಲಯದಲ್ಲಿ ದಲ್ಲಾಳಿ ಎಂದೇ ಹೆಸರಾಗಿರುವ, ಮಿತ್ರ ಅಮರ್‌ ಸಿಂಗ್‌, ಸಹೋದರ ಶಿವಪಾಲ್‌ ಯಾದವ್‌ ಮತ್ತು ಚಿತ್ರ ನಟಿ ಜಯಪ್ರದಾ ಬಿಟ್ಟರೆ ‘ನೇತಾಜಿ' ಎಂದು ದೇಶದ ರಾಜಕಾರ​ಣಿಗಳು ಕರೆಯುವ ಮುಲಾಯಂ ಬಳಿ ಈಗ ಯಾರೂ ಇಲ್ಲ! ಇಳಿವಯಸ್ಸಿನಲ್ಲಿ ಪುತ್ರನೇ, ತಂದೆ ಮಾನಸಿಕ­ವಾಗಿ ಅಸ್ಥಿರರಾಗಿದ್ದಾರೆ ಎಂದು ಬಹಿರಂಗವಾಗಿ ಹೇಳುತ್ತಿದ್ದು, ತಾನು ಚೆನ್ನಾಗಿದ್ದೇನೆ ಎಂದು ಹೇಳಿಕೊಂಡು ತಿರುಗಾಡಬೇಕಾದ ವಿಚಿತ್ರ ಪರಿಸ್ಥಿತಿಗೆ ತಲುಪಿದ್ದಾರೆ ಮುಲಾಯಂ.

ಮುಲಾಯಂ ಅವರ ಈಗಿನ ಸ್ಥಿತಿಗೆ ಮುಖ್ಯ ಕಾರಣ, ಅವರ ರಾಜಕಾರಣದ ರಾಜಿ ಮಾಡಿಕೊಳ್ಳುವ ಚಂಚಲ ನಿರ್ಧಾರಗಳು. ಒಮ್ಮೆ ಕಾಂಗ್ರೆಸ್‌, ಇನ್ನೊಮ್ಮೆ ಬಿಜೆಪಿ, ಒಮ್ಮೆ ಎಡಪಕ್ಷಗಳು, ಇನ್ನೊಮ್ಮೆ ಮಮತಾ ಬ್ಯಾನರ್ಜಿ ಹೀಗೆ... ಎಲ್ಲರನ್ನೂ, ಎಲ್ಲ ಪಕ್ಷಗಳನ್ನೂ ಮನಬಂದಂತೆ ಆಟ ಆಡಿಸಿದ ಮುಲಾಯಂ, ಇವತ್ತು ರಾಜಕೀಯ ಪಕ್ಷಗಳು ಒತ್ತಟ್ಟಿಗಿರಲಿ, ಸ್ವಂತ ಮಗನನ್ನೇ ನಂಬದೆ ಇರುವಂಥ ವಿಷಮ ಪರಿಸ್ಥಿತಿ ತಲುಪಿದ್ದಾರೆ. ಮಂಡಲದ ಲಾಭ ಮತ್ತು ಕಮಂಡಲದ ವಿರೋಧದ ಮೂಲಕ ಸಿಕ್ಕ ಅಧಿಕಾರದ ಔನ್ನತ್ಯ ಉಪಯೋಗಿಸಿಕೊಂಡು, ಹೊಸ ರೀತಿಯ ರಾಜಕಾರ​ಣವನ್ನು ಮಾಡಲು ಮುಲಾಯಂರಿಗೆ ಸಾಧ್ಯವಾಗಲೇ ಇಲ್ಲ. ಯಾದವರು ಮತ್ತು ಮುಸ್ಲಿಮರ ಮತ ಸಮೀಕರಣದ ಆಚೆಗೆ ಯಾವತ್ತೂ ಯೋಚಿಸದ ಮುಲಾಯಂ, ಲೋಹಿಯಾರ ಹೆಸರು ಹೇಳಿದರಾದರೂ ಸಮಾಜವಾದದ ಚಿಂತನೆಯ ಲವಲೇಶವನ್ನೂ ತೋರಿಸದೆ, ಇವತ್ತು ಅಮರ್‌ ಸಿಂಗ್‌ ಹಾಗೂ ಶಿವಪಾಲ… ಯಾದವ್‌ ಅವರನ್ನು ರಕ್ಷಿಸುವುದೇ ಸಮಾಜವಾದ ಎಂಬ ಸ್ಥಿತಿಗೆ ತಲುಪಿದ್ದು, ಸೈಕಲ್ ಸೀಟ್‌ ಮೇಲಿಂದ ಇಳಿದು, ಹ್ಯಾಂಡಲ್ ಕೂಡ ಹಿಡಿಯಲು ಮಗ ಅವಕಾಶ ಕೊಡದ ಪೊಲಿಟಿಕಲ್ ಸುಸೈಡ್‌ ಹಂತಕ್ಕೆ ತಲುಪಿದ್ದಾರೆ. ಕೆಲವರ ಪ್ರಕಾರ, ಪುತ್ರ ಅಖಿಲೇಶ್‌ ಯಾದವ್‌'ರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಮುಲಾ​ಯಂ ತನ್ನ ರಾಜಕೀಯ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು.

ಅಪ್ಪನ ತಾಕೀತು ಮೀರಿದ ಅಖಿಲೇಶ್‌:
ಸದ್ಯದ, ಉತ್ತರ ಪ್ರದೇಶದ ಚುನಾವಣೆಯ ಅತ್ಯಂತ ದೊಡ್ಡ ಫ್ಯಾಕ್ಟರ್‌ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ಗೆ ಇರುವ ಇಮೇಜ್‌. ಮೂವತ್ತು ವರ್ಷಗಳಿಂದಲೂ ಅಪ್ಪ ಮುಲಾಯಂ ಅವರಿಗೆ ಯಾದವರು ಮತ್ತು ಮುಸ್ಲಿಮರು ಮತ ನೀಡುತ್ತಿದ್ದ​ರಾದರೂ ಎಂದಿಗೂ ಕೂಡ ಸಮಾಜವಾದಿ ಪಕ್ಷದ ಅಧಿಕಾರಾವಧಿ​ಯಲ್ಲಿ ಆಡಳಿತ ಚುರುಕಾಗಿ ಇರುತ್ತಿರಲಿಲ್ಲ, ಅಂದುಕೊಂಡಂತೆ ಅಭಿವೃದ್ಧಿ ಆಗುತ್ತಿರಲಿಲ್ಲ ಮತ್ತು ಗೂಂಡಾಗಿರಿ ಜಾಸ್ತಿ ಇತ್ತು ಎನ್ನುವುದು ಒಪ್ಪಲೇಬೇಕಾದ ಸತ್ಯ. ಇವೆಲ್ಲವೂ ಮಿತಿಮೀರಿದ್ದರಿಂ​ದಾಗಿಯೇ ಜನಸಾಮಾನ್ಯರು 2014ರಲ್ಲಿ ಮೋದಿಯತ್ತ ಮುಖ ಮಾಡಿದ್ದರು. ಆದರೆ 2014ರ ಸೋಲಿನ ನಂತರ ಅಖಿಲೇಶ್‌, ಸಮಾಜವಾದಿ ಪಕ್ಷದ ಇಮೇಜ್‌ ಮೇಕ್‌ಓವರ್‌ ಮಾಡಲು ಸಾಕಷ್ಟುಬೆವರು ಸುರಿಸಿದ್ದಾರೆ. ಮೊಟ್ಟಮೊದಲಿಗೆ ಗೂಂಡಾಗಿರಿಯಲ್ಲಿ ಭಾಗಿಯಾಗಿದ್ದ ಪಕ್ಷದ ಮಂತ್ರಿಗಳನ್ನು ಉಚ್ಚಾಟಿಸಿದ ಅಖಿಲೇಶ್‌, ತಕ್ಕಮಟ್ಟಿಗೆ ಪೊಲೀಸರಿಗೂ ಸ್ವಾತಂತ್ರ್ಯ ನೀಡಿ, ಸ್ಥಳೀಯ ಮಟ್ಟದಲ್ಲಿ ಮುಲಾಯಂ ಹೆಸರಿನ ಮೇಲೆ ಯಾದವ ಸಮಾಜಕ್ಕೆ ಸೇರಿದ ಗೂಂಡಾಗಳ ಉಪಟಳವನ್ನು ನಿಯಂತ್ರಿಸಿದ್ದರು. ಅಷ್ಟೇ ಅಲ್ಲ, ಕಂಪ್ಯೂಟರ್‌, ಟ್ರಾಕ್ಟರ್‌ ಇವೆಲ್ಲ ಯಾಕೆ ಬೇಕು ಎಂದು ಕೇಳುತ್ತಿದ್ದ ಮುಲಾ​ಯಂರಿಗೆ ವ್ಯತಿರಿಕ್ತವಾಗಿ ಪುತ್ರ ಅಖಿಲೇಶ್‌ ಯಾದವ್‌, ಕಾಲೇಜು ಕಲಿಯುವ ಹೆಣ್ಣುಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ ಸೇರಿದಂತೆ ಆಧುನಿಕ ಶಿಕ್ಷಣದ ಕೆಲವು ಸಾಧನಗಳನ್ನು ನೀಡಲು ಚಾಲನೆ ನೀಡಿದ್ದರಿಂದ ಅಖಿಲೇಶ್‌ರಿಗೆ ಯುವ ಜನರಲ್ಲಿ ಒಳ್ಳೆಯ ಹೆಸರು ಬಂದಿದೆ.

ಕೆಲವರು ಹೇಳುವ ಪ್ರಕಾರ ರಸ್ತೆ, ವಿದ್ಯುತ್‌ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಮಾಡಿದ್ದನ್ನೇ ಉತ್ತರ ಪ್ರದೇಶದಲ್ಲಿ ಮಾಡುವ ಮೂಲಕ ಅಖಿಲೇಶ್‌ ಕಳೆದ ಎರಡೂವರೆ ವರ್ಷಗಳಲ್ಲಿ ಪಕ್ಷ ಮತ್ತು ಸರ್ಕಾರದ ಜೊತೆಗೆ ಸ್ವಂತ ವರ್ಚಸ್ಸನ್ನೂ ಬದಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಲಖನೌದಿಂದ ಬಲಿಯಾವರೆಗೆ ಎಕ್ಸ್‌ಪ್ರೆಸ್‌ ಹೈವೇ ರಚಿಸಿರುವ ಅಖಿಲೇಶ್‌ ಯಾದವ್‌, ಮೊಟ್ಟಮೊದಲ ಬಾರಿಗೆ ಪಕ್ಷವನ್ನು ಯಾದವ-​ಮುಸ್ಲಿಂ ಸಮಾಜದ ಆಚೆಗೂ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು. ಹೀಗಾಗಿಯೇ ಮುಲಾಯಂರನ್ನು ಪಕ್ಕಕ್ಕೆ ತಳ್ಳಿ, ಪಕ್ಷದ ನಾಯಕರು ಅಖಿಲೇಶ್‌ ಯಾದವ್‌ ಬೆನ್ನು ಹತ್ತಿದ್ದಾರೆ.

ಕಾಂಗ್ರೆಸ್‌ ಮೈತ್ರಿಗೆ ಕಾರಣಗಳಿವೆ:
ಆದರೆ ಎಷ್ಟೇ ಜನಪ್ರಿಯತೆ ಇದ್ದರೂ ಏಕಾಂಗಿಯಾಗಿ ಚುನಾ­ವಣೆಗೆ ಹೋದರೆ ಆಡಳಿತ ವಿರೋಧಿ ಅಲೆ ಮತ್ತು ಮುಸ್ಲಿಂ ಮತಗಳ ವಿಭಜನೆ ಕಾರಣದಿಂದ ಎಲ್ಲಿ ಮರಳಿ ಬಿಜೆಪಿಗೆ ಲಾಭವಾಗಿಬಿಡುತ್ತದೋ ಎಂಬ ಚಿಂತೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮೈತ್ರಿಗಾಗಿ ಹತ್ತಿರ ಕರೆಯುತ್ತಿದ್ದು, ಇದು ಕೂಡ ಅಪ್ಪ-ಮಗನ ನಡುವೆ ಜಗಳಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಮುಲಾಯಂ ಪ್ರಕಾರ, ಉತ್ತರ ಪ್ರದೇಶದಲ್ಲಿ ಹೆಚ್ಚೂಕಡಿಮೆ ಸಾಯುವ ಸ್ಥಿತಿಯಲ್ಲಿರುವ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಕೂಡ ಮೈತ್ರಿ ಮಾಡಿಕೊಂಡು ಆಮ್ಲಜನಕ ಪೂರೈಸ​ಬಾರದು, ಹಾಗೆ ಮಾಡಿದರೆ ಅದು ಮುಂದೆ ತಮ್ಮನ್ನೇ ನುಂಗುತ್ತದೆ ಎನ್ನುವುದು ಪರಂಪರಾಗತವಾಗಿ ಮುಲಾಯಂ ತಿಳಿದುಕೊಂಡಿ​ರುವ ರಾಜಕೀಯ. ಏಕೆಂದರೆ, ಒಮ್ಮೆ ಮುಸ್ಲಿಮರು ಕಾಂಗ್ರೆಸ್‌ ಪಕ್ಷದತ್ತ ಮರಳಿ ಬಹುಪಾಲು ಅತ್ತಲೇ ವಾಲಿದರೆ, ಸಮಾಜವಾದಿ ಪಕ್ಷವು ಶಾಶ್ವತವಾಗಿ ಸಣ್ಣ ಪಕ್ಷವಾಗಿಯೇ ಉಳಿಯಬೇಕಾಗುತ್ತದೆ ಎನ್ನುವ ಆತಂಕದ ಕಾರಣದಿಂದಲೇ ಮುಲಾಯಂ, ದೆಹಲಿಯಲ್ಲಿ ಮೈತ್ರಿ-ಲಖನೌದಲ್ಲಿ ದೂರ ದೂರ ಎನ್ನುವ ರೀತಿಯಲ್ಲಿ ವಿಚಿತ್ರ ರಾಜಕಾರಣ ಮಾಡುತ್ತಿದ್ದರು. ಆದರೆ ಹೊಸ ರೀತಿ ಯೋಚಿಸುತ್ತಿ​ರುವ ಅಖಿಲೇಶ್‌ ಯಾದವ್‌, ಬಿಹಾರ ಮಾದರಿಯಲ್ಲಿಯೇ ಕಾಂಗ್ರೆಸ್‌ ಮೈತ್ರಿಯಿಂದ ಮತ ವಿಭಜನೆ ತಡೆಯಬೇಕು ಎನ್ನುವ ನಿರ್ಣಯಕ್ಕೆ ಬಂದಂತಿದ್ದಾರೆ. ಅಖಿಲೇಶ್‌ ಆಪ್ತರು ಹೇಳುವ ಪ್ರಕಾರ, ಅಖಿಲೇಶ್‌ ಯಾದವ್‌ ಮತ್ತು ರಾಹುಲ್ ಗಾಂಧಿ ನಡುವೆ ಈ ಕುರಿತು ಮಾತುಕತೆಗಳು ಕೂಡ ನಡೆದಿವೆ. ಚುನಾವಣೆಗೆ ಆರು ತಿಂಗಳ ಮುಂಚೆ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್‌ ಅವರನ್ನು ಘೋಷಿಸಿದ್ದ ಕಾಂಗ್ರೆಸ್‌ ಪಕ್ಷವು, ಬಿಜೆಪಿ ಗೆಲ್ಲಬಾರದು ಎನ್ನುವ ಏಕಮಾತ್ರ ಕಾರಣಕ್ಕಾಗಿ ಐದು ವರ್ಷಗಳ ಕಾಲ ತಾನೇ ಸಿಕ್ಕಾಪಟ್ಟೆಟೀಕಿಸಿದ ಅಖಿಲೇಶ್‌ ಯಾದವ್‌ ಜೊತೆಗೆ ಮೈತ್ರಿಗೆ ತಯಾರಾಗುತ್ತಿದೆ. ತನ್ನ ಅಸ್ತಿತ್ವ ಮುಂದೆ ನೋಡಿಕೊಂ​ಡರಾಯ್ತು, ಆದರೆ ಎದುರಾಳಿಯ ಆಮ್ಲಜನಕ ಪೂರೈಕೆ ಮೊದಲು ನಿಲ್ಲಬೇಕು, ಅದಕ್ಕಾಗಿ ಶತ್ರುವಿನೊಂದಿಗೆ ತಾತ್ಕಾಲಿಕ ಮೈತ್ರಿ ರಾಜಕೀಯದಲ್ಲಿ ತಪ್ಪಲ್ಲ ಬಿಡಿ ಎಂಬುದು ಅಖಿಲೇಶ್‌ ಧೋರಣೆ. 2019ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣಬೇಕಾದರೆ ಮೊದಲು ಯುಪಿಯಲ್ಲಿ ಮೋದಿ ಸಾಹೇಬರನ್ನು ತಡೆಯಬೇಕು ಎಂದು ಕಾಂಗ್ರೆಸ್‌ ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ. ಹಾಗಾಗಿಯೇ ಅದು ಈ ಮೈತ್ರಿಯತ್ತ ಒಲವು ತೋರುತ್ತಿದೆ.

ಲೆಕ್ಕಾಚಾರ ಬದಲಿಸಿದ ಬಿಎಸ್‌'ಪಿ:
ಅಖಿಲೇಶ್‌ ಯಾದವ್‌ ಮತ್ತು ರಾಹುಲ್ ಗಾಂಧಿ ನಡುವೆ ಏನಕೇನ ಮೈತ್ರಿ ಆಗಬಾರದು ಎಂದು ಬಿಜೆಪಿ ಜೊತೆಗೆ ಪ್ರಯತ್ನ ನಡೆಸಿರುವುದು ಬೆಹೆನ್‌ ಮಾಯಾವತಿ. 2014ರಲ್ಲಿ ಮೋದಿ ಕೊಟ್ಟಹೊಡೆತಕ್ಕೆ ಲೋಕಸಭೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲದಿರುವ ಸ್ಥಿತಿ ತಲುಪಿದ್ದ ಮಾಯಾವತಿ, ಈ ಬಾರಿಯೂ ಅಧಿಕಾರಕ್ಕೆ ಬರದೆಹೋ​ದರೆ ಅಧಿಕಾರ ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿ­ಕೊಳ್ಳುವುದು ತುಂಬಾನೇ ಕಷ್ಟಕರ. 21.5 ಪ್ರತಿಶತ ದಲಿತ ಮತಗಳನ್ನು ನಿಶ್ಚಿತವಾಗಿ ಪಡೆಯುವ ಮಾಯಾವತಿಗೆ, ಅಧಿಕಾರಕ್ಕೆ ಬರಬೇಕಾ​ದರೆ ಕನಿಷ್ಠ ಹತ್ತು ಪ್ರತಿಶತ ಇತರ ಸಮುದಾಯದ ಮತಗಳೂ ಬೇಕು. ಹೀಗಾಗಿ 2007ರಲ್ಲಿ ಬ್ರಾಹ್ಮಣರನ್ನು ಓಲೈಸಿದ್ದ ಮಾಯಾ​ವತಿ, ಈ ಬಾರಿ ಸಮಾಜವಾದಿ ಪಕ್ಷದ ಒಡಕಿನ ಲಾಭ ಪಡೆದು ಮುಸ್ಲಿಮರನ್ನು ಸೆಳೆದುಕೊಳ್ಳುವ ಪ್ಲಾನ್‌ ಮಾಡುತ್ತಿದ್ದಾರೆ. ಒಂದು ವೇಳೆ, ಅಖಿಲೇಶ್‌ ಯಾದವ್‌ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿ​ಕೊಂ​ಡರೆ ಮುಸ್ಲಿಮರು ಮಾಯಾವತಿ ಬದಲಾಗಿ ಅಖಿಲೇಶ್‌ ಜೊತೆಗೆ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಮುಸ್ಲಿಮರಿಗೆ ಮಾಯಾ​ವತಿ ಬಗ್ಗೆ ಇರುವ ದೊಡ್ಡ ಆತಂಕ ಎಂದರೆ, ಹಿಂದೆ ಮೂರು ಬಾರಿ ಅಧಿಕಾರಕ್ಕಾಗಿ ಮಾಡಿಕೊಂಡ ಬಿಜೆಪಿ ಜೊತೆಗಿನ ಮೈತ್ರಿ. ಹೀಗಾಗಿ ಬಿಜೆಪಿ ವಿರುದ್ಧದ ಧ್ರುವದಲ್ಲಿರುವ ಕಾಂಗ್ರೆಸ್‌ ಜೊತೆಗೆ ಅಖಿಲೇಶ್‌ ಮೈತ್ರಿ ಮಾಡಿಕೊಂಡರೆ ಮುಸ್ಲಿಮರು ದಂಡಿ​ಯಾಗಿ ಘಟಬಂಧನ ಜೊತೆಗೆ ನಿಲ್ಲಲಿದ್ದಾರೆ. ಆದರೆ ತನ್ನ ರಾಜಕೀಯ ಜೀವನದ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿರುವ ಮಾಯಾವತಿ, ಗೆಲ್ಲಲು ಆಕಾಶ-ಪಾತಾಳ ಒಂದು ಮಾಡುತ್ತಿದ್ದಾರೆ.

ಬಿಜೆಪಿಗೆ ಮೋದಿ ಮಾತ್ರವೇ ದೋಣಿ:
ಇನ್ನು, ಉತ್ತರ ಪ್ರದೇಶದ ಚುನಾವಣೆಯಲ್ಲಿ ಪ್ರಧಾನಿ ಮೋದಿ ಜನಪ್ರಿಯತೆಯು ಕೂಡ ಪಣಕ್ಕಿದ್ದು, ದೆಹಲಿಯಲ್ಲಿ ಗಟ್ಟಿಯಾಗಿ ಉಳಿಯಬೇಕಾದರೆ ಮೋದಿ ಮತ್ತವರ ಪಕ್ಷ ಬಿಜೆಪಿಯು ಇಲ್ಲಿ ಗೆಲ್ಲಲೇಬೇಕು ಎಂಬಂತಾಗಿದೆ. 2014ರಲ್ಲಿ ಮೋದಿ ಅಲೆಗೆ ತೇಲಿ ಹೋಗಿದ್ದ ಉತ್ತರ ಪ್ರದೇಶದ ಮತದಾರ, 2017ರಲ್ಲಿ ಮೋದಿಯ ದೋಣಿಯನ್ನು ಗಂಗೆಯ ದಡಕ್ಕೆ ಗಟ್ಟಿಯಾಗಿ ಕಟ್ಟಿನಿಲ್ಲಿಸುತ್ತಾನೋ ಅಥವಾ ನದಿಯ ಮಧ್ಯದಲ್ಲಿ ಅಲುಗಾಡಿಸುತ್ತಾನೋ ಎನ್ನುವ ಕುತೂಹಲ ಮಾ.11ರವರೆಗಂತೂ ಖಂಡಿತ ಇರಲಿದೆ. ನೋಟು ರದ್ದತಿ ನಂತರ ಉತ್ತರ ಪ್ರದೇಶದಲ್ಲಿ ಮೋದಿ ಜನಪ್ರಿಯತೆ ಜಾಸ್ತಿಯಾಗಿದೆ ಎನ್ನುವುದು ಸತ್ಯ. ಆದರೆ ವೋಟು ಪಡೆದರೂ ಸೀಟು ಪಡೆಯದೆ ಮತ್ತೆ ಬಿಹಾರದಂತೆ ಆದರೆ ಕತೆಯೇನು ಎನ್ನುವ ಆತಂಕ ಬಿಜೆಪಿ ವಲಯಗಳಿಂದಲೇ ವ್ಯಕ್ತವಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ, ರಜಪೂತ, ಬನಿಯಾ ಮತಗಳ ಜೊತೆಗೆ ಯಾದವೇತರ ಹಿಂದುಳಿದ ಮತದಾರರನ್ನು ದೃಷ್ಟಿಯಲ್ಲಿ­ಟು­್ಟಕೊಂಡು ಮೋದಿ ಮತ್ತು ಅಮಿತ್‌ ಶಾ ರಣತಂತ್ರ ರೂಪಿಸು­ತ್ತಿದ್ದಾರೆ. ಲಖನೌದಲ್ಲಿ ಮೋದಿ ನಡೆಸಿದ ಪರಿವರ್ತನಾ ಯಾತ್ರೆಗೆ ಹತ್ತು ಲಕ್ಷ ಜನ ಭಾಗವಹಿಸಿದ್ದು ಬಿಜೆಪಿ ನಾಯಕರನ್ನು ಎದೆಯು­ಬ್ಬಿಸುವಂತೆ ಮಾಡಿದೆಯಾದರೂ, ಮುಸ್ಲಿಂ ಮತಗಳು ವಿಭಜನೆ ಆಗದೆ ಹೋದರೆ ಬಿಜೆಪಿಗೆ ಬಿಹಾರದಂತೆ ಕಷ್ಟವಾಗ​ಬಹುದು ಎನ್ನುವುದೂ ಅಷ್ಟೇ ಸತ್ಯ. ಹೀಗಾಗಿ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅಖಿಲೇಶ್‌ ನಡುವಿನ ತಿಕ್ಕಾಟದಿಂದಾಗಿ ಖುಷಿ­ಯಾಗಿದ್ದ ಬಿಜೆಪಿ ನಾಯಕರು ಈಗ, ಅಖಿಲೇಶ್‌ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಕೇಳಿ ಚಿಂತಿತರಾಗಿ­ದ್ದಾರೆ. ಬಿಜೆಪಿಗಿರುವ ಇನ್ನೊಂದು ಆತಂಕ; ಒಂದು ಕಡೆ ಅಖಿಲೇಶ್‌, ಇನ್ನೊಂದು ಕಡೆ ಮಾಯಾವತಿ ಇರುವ ಹಾಗೆ ಬಿಜೆಪಿ ಬತ್ತಳಿಕೆಯಲ್ಲಿ ನಾಯಕರು ಇರದಿರುವುದು. ಹೀಗಾಗಿ ಬಿಜೆಪಿಗೆ ಮೋದಿ ಪ್ರಭಾವವೊಂದೇ ಶ್ರೀರಕ್ಷೆ.

ದೇಶದೆಲ್ಲೆಡೆ ಉತ್ತರ ಪ್ರದೇಶದ ಚುನಾವಣೆಯನ್ನು ನೋಟು ರದ್ದತಿಯ ಜನಮತಗಣನೆ ಎನ್ನುವ ರೀತಿಯಲ್ಲಿ ನೋಡುತ್ತಿದ್ದಾರೆ. ಆದರೆ ಉತ್ತರ ಪ್ರದೇಶದ ಮತದಾರ ಕೇವಲ ನೋಟು ರದ್ದತಿ­ಯನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ಮತದಾನ ಮಾಡು­ತ್ತಾ­ನೆಯೇ ಎನ್ನುವುದು ಪ್ರಶ್ನಾರ್ಥಕ.

ನನ್ನ ಹಾಗೂ ನನ್ನ ಮಗ ಅಖಿಲೇಶ್‌ ಯಾದವ್‌ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಖಂಡಿತವಾಗಿಯೂ ಇಲ್ಲ. ಆದರೆ ಪಕ್ಷದಲ್ಲಿ ಇಂಥದ್ದೊಂದು ಬಿರುಕು ಇರುವುದು ನಿಜ. ಈ ಬಿರುಕು ಉಂಟಾಗಲು ಒಬ್ಬ ವ್ಯಕ್ತಿಯೇ ಕಾರಣ. ಹಾಗಾಗಿ ಈ ಭಿನ್ನಮತ ಸದ್ಯದಲ್ಲೇ ಶಮನವಾಗಲಿದೆ. ಅಖಿಲೇಶ್‌ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಅಖಿಲೇಶ್‌ರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆಯೇ ವಿನಾ ನನ್ನನ್ನು ಪದಚ್ಯುತಿ ಮಾಡುವ ನಿರ್ಧಾರ ಕೈಗೊಂಡಿಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಈಗಲೂ ನಾನೇ ಅಧ್ಯಕ್ಷ.
- ಮುಲಾಯಂ ಸಿಂಗ್ ಯಾದವ್

ನಾನು ನಮ್ಮ ಪಕ್ಷದ ನೇತಾರರಾದ ನಮ್ಮ ತಂದೆಯವರನ್ನು ಗೌರವಿಸುತ್ತೇನೆ ಎಂಬುದು ಇಡೀ ದೇಶದ ಜನರಿಗೆ ಚೆನ್ನಾಗಿ ಗೊತ್ತು. ಪಕ್ಷದೊಳಗೇ ಕೆಲವರು ನೇತಾಜಿ (ಮುಲಾಯಂ) ವಿರುದ್ಧ ಸಂಚು ಹೂಡುತ್ತಿದ್ದರೆ ನಾನು ನೋಡಿಕೊಂಡು ಸುಮ್ಮನಿರಲಾದೀತೇ? ಅದಕ್ಕೇ ಅಂಥವರನ್ನೆಲ್ಲ ವಜಾ ಮಾಡಲು ಮುಂದಾದೆ, ಮಾಡಿದೆ ಕೂಡ. ಸಮಾಜವಾದಿ ಪಕ್ಷಕ್ಕಾಗಿ ನಾನು ಯಾವ ತ್ಯಾಗಕ್ಕೆ ಬೇಕಾದರೂ ಸಿದ್ಧ. ಜನರಿಗೆ ನೀಡಿದ ಮಾತು ಉಳಿಸಿಕೊಳ್ಳಲು ನಾನು ಈಗಲೂ ಬದ್ಧನಾಗಿದ್ದೇನೆ.
- ಅಖಿಲೇಶ್ ಯಾದವ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!
ರಾಜ್ಯಾದ್ಯಂತ ಎಲ್‌ಕೆಜಿ ಯಿಂದ ಪಿಯುಸಿವರೆಗೆ ಕಲಿಕಾ ಸಮಯದ ಅವಧಿ ಬದಲಾಯಿಸುವಂತೆ ಶಿಕ್ಷಣ ಇಲಾಖೆಗೆ ಮಕ್ಕಳ ಆಯೋಗ ಪತ್ರ