
ಬೆಂಗಳೂರು(ಜ. 10): ರಾಯಣ್ಣ ಬ್ರಿಗೇಡ್ ಸಂಘಟನೆ ಬಿಜೆಪಿಗೆ ಬೆಂಬಲ ಕೊಡೋದಿಲ್ಲ ಎಂದು ಕೆಎಸ್ ಈಶ್ವರಪ್ಪ ಬಹಿರಂಗವಾಗಿ ಹೇಳಿಕೆ ಕೊಟ್ಟ ಬೆನ್ನಲ್ಲೇ ಈಗ ಆಪರೇಷನ್ ಕ್ಲೀನಪ್ ಶುರುವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯಲ್ಲಿ ಈಗ ಮೊದಲ ಬಲಿಯಾಗಿದೆ. ಬ್ರಿಗೇಡ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ವೆಂಕಟೇಶ್ ಮೂರ್ತಿಯವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಪಿ.ಎ.ಸದಾಶಿವ್ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ವೆಂಕಟೇಶ್'ಮೂರ್ತಿ ಖುದ್ದು ಈ ವಿಷಯವನ್ನು ನಿಜವೆಂದು ಸ್ಪಷ್ಟಪಡಿಸಿದ್ದಾರೆ.
"ಪಕ್ಷವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದೇನೆಂಬ ಕಾರಣಕ್ಕೆ ನನ್ನನ್ನು ಅಮಾನತುಗೊಳಿಸಲಾಗಿದೆ. ಆದರೆ, ಈ ಮುಂಚೆ ಯಾವೊಬ್ಬ ಬಿಜೆಪಿ ಮುಖಂಡರೂ ಪಕ್ಷವಿರೋಧಿ ಚಟುವಟಿಕೆ ಕುರಿತು ಯಾಕೆ ಮಾತನಾಡಿರಲಿಲ್ಲ ಎಂದು ವೆಂಕಟೇಶ್ ಮೂರ್ತಿ ಪ್ರಶ್ನಿಸಿದ್ದಾರೆ.
"ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಹತ್ತು ವರ್ಷದಿಂದ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ನಡೆಸುತ್ತಿದ್ದೇವೆ. ಈಗ ಏಕಾಏಕಿ ಇಂಥ ಕ್ರಮ ಕೈಗೊಂಡಿರುವುದು ಯಾಕೆ ಎಂಬುದು ಗೊತ್ತಾಗುತ್ತಿಲ್ಲ. ನಾನು ಬಿಜೆಪಿಗೆ ಧಕ್ಕೆ ತರುವ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಮಹಾನಗರ ಬಿಜೆಪಿ ಅಧ್ಯಕ್ಷರಿಗೆ ಈ ಬಗ್ಗೆ ಸೂಕ್ತ ಉತ್ತರ ನೀಡಿ, ಅಮಾನತು ಆದೇಶವನ್ನು ಹಿಂಪಡೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ" ಎಂದವರು ತಿಳಿಸಿದ್ದಾರೆ.
ವೆಂಕಟೇಶ್'ಮೂರ್ತಿಯ ಬಲಿಯೇ ಯಾಕೆ?
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯಾದ್ಯಂತ ಸುದ್ದಿಯಾಗಲು ಕಾರಣವಾಗಿದ್ದೇ ಕೆಎಸ್ ಈಶ್ವರಪ್ಪ. ಆದರೆ, ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಲಾಗುತ್ತದೆ. ಈಶ್ವರಪ್ಪನವರು ಬ್ರಿಗೇಡ್'ನ ಪೋಷಕರಷ್ಟೇ ಆಗಿದ್ದಾರೆ. ಸದ್ಯ, ಬ್ರಿಗೇಡ್'ನ ಪದಾಧಿಕಾರಿಗಳನ್ನು ಟಾರ್ಗೆಟ್ ಮಾಡಲು ಬಿಜೆಪಿ ಯೋಜಿಸಿರಬಹುದೆನ್ನಲಾಗಿದೆ. ಬ್ರಿಗೇಡ್'ನ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿಯಾಗಿರುವ ವೆಂಕಟೇಶ್ ಮೂರ್ತಿ ಅವರು ನಗರದಲ್ಲಿ ಸಂಘಟನೆಯನ್ನು ಬೆಳೆಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಹೀಗಾಗಿ, ಅವರನ್ನೇ ಮೊದಲು ಟಾರ್ಗೆಟ್ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.