ರೈತರಿಗೆ ಸಿಎಂ ಕುಮಾರಸ್ವಾಮಿ ಗುಡ್ ನ್ಯೂಸ್

By Web DeskFirst Published Dec 5, 2018, 7:51 AM IST
Highlights

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರೈತರಿಗೆ  ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಇದೇ 8 ರಿಂದ ಸಾಲಮನ್ನಾದ ಋಣಮುಕ್ತ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ. 

ಬೆಂಗಳೂರು :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ರೈತರ ಸಾಲ ಮನ್ನಾ ಯೋಜನೆಯನ್ನು ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ಡಿ.8ರಂದು ಋುಣಮುಕ್ತ ಪತ್ರ ನೀಡುವ ವಿಧ್ಯುಕ್ತವಾಗಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಸಾಲ ಮನ್ನಾ ಯೋಜನೆ ಜಾರಿಗೆ ಕಲಬುರ್ಗಿ ಜಿಲ್ಲೆಯ ಸೇಡಂ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕುಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿ, ಎಲ್ಲ ರೈತರ ಮಾಹಿತಿಯನ್ನು ಪಡೆಯಲಾಗಿದೆ. ಈ ರೈತರಿಗೆ ಡಿ.8ರಂದು ಋುಣಮುಕ್ತ ಪತ್ರ ವಿತರಿಸಲಾಗುವುದು. ಬರುವ ಜನವರಿ ತಿಂಗಳಲ್ಲಿ 10 ಲಕ್ಷ ರೈತರ ಬೃಹತ್‌ ಸಮಾವೇಶ ನಡೆಸಿ ಋುಣಪತ್ರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡುವ ಸಂಬಂಧ ಆಯವ್ಯಯದಲ್ಲಿ 6,500 ಕೋಟಿ ರು. ಹಣ ನಿಗದಿ ಮಾಡಲಾಗಿದೆ. ಹಣದ ಕೊರತೆ ಇಲ್ಲ. ನವೆಂಬರ್‌ ತಿಂಗಳಲ್ಲಿ ಸಹಕಾರ ಬ್ಯಾಂಕುಗಳಿಗೆ 1200ರಿಂದ 1300 ಕೋಟಿ ರು. ಬಿಡುಗಡೆ ಮಾಡಬೇಕಿತ್ತು. ಆದರೆ ಸಹಕಾರ ಬ್ಯಾಂಕುಗಳು ಸಹ ಪೂರ್ಣ ಪ್ರಮಾಣದಲ್ಲಿ ರೈತರ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕುಗಳಿಗೆ ಪೂರ್ಣ ಹಣ ಬಿಡುಗಡೆ ಮಾಡಲು ಆಗುತ್ತಿಲ್ಲ. ಸುಮಾರು 2.20 ಲಕ್ಷ ರೈತರು ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ 31ರೊಳಗೆ 350 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದರು.

ವಸೂಲಾಗದ ಸಾಲ ಕುರಿತು ಚರ್ಚೆ:

ವಾಣಿಜ್ಯ ಬ್ಯಾಂಕುಗಳಲ್ಲಿ ಸುಮಾರು 21 ಲಕ್ಷ ರೈತರು ಸಾಲ ಮಾಡಿದ್ದು, ಈ ಪೈಕಿ 2.24 ಲಕ್ಷ ರೈತರು ಬಹಳ ವರ್ಷಗಳಿಂದ ಸಾಲವನ್ನೇ ತೀರಿಸಿಲ್ಲ. ಇಂತಹ ಸಾಲಗಳ ಮೇಲಿನ ಬಡ್ಡಿ ಮನ್ನಾ ಹಾಗೂ ಶೇ.50ರಷ್ಟುಸಾಲ ಮನ್ನಾ ಮಾಡುವುದಾಗಿ ವಾಣಿಜ್ಯ ಬ್ಯಾಂಕುಗಳು ಕಳೆದ ಜೂನ್‌ ತಿಂಗಳಲ್ಲಿ ಘೋಷಿಸಿದ್ದವು. ಈ ಘೋಷಣೆ ಪ್ರಕಾರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ವಾಣಿಜ್ಯ ಬ್ಯಾಂಕುಗಳಿಗೆ ಮನವಿ ಮಾಡಿದ್ದೇವೆ, ಈ ಬಗ್ಗೆ ಮಾತುಕತೆ ಸಹ ನಡೆಯುತ್ತಿದೆ ಎಂದರು.

ಪ್ರಧಾನಿಗೆ ಮನವಿ ಮಾಡಲಿ:

ರೈತರು ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡಿರುವ ಸಾಲದ ಪೈಕಿ ಶೇ.50ರಷ್ಟುಹೊರೆಯನ್ನು ಭರಿಸುವಂತೆ ಪ್ರಧಾನಿ ಮೋದಿ ಅವರ ಬಳಿ ಎರಡು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಲಿಲ್ಲ. ಹಾಗೆಂದು ಸಾಲ ಮನ್ನಾ ವಿಷಯದಲ್ಲಿ ಕೇಂದ್ರದ ಅವಲಂಬನೆಯನ್ನು ರಾಜ್ಯ ಸರ್ಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಲ ಮನ್ನಾ ಮಾಡಿಲ್ಲ ಎಂದೆಲ್ಲ ಟೀಕೆ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕಟಬಾಕಿ ರೈತರ ಶೇ.50ರಷ್ಟುಸಾಲ ಮನ್ನಾ, ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದ ವಾಣಿಜ್ಯ ಬ್ಯಾಂಕುಗಳು ಯಾಕೆ ಹಿಂದೆ ಸರಿದಿವೆ ಎಂದು ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.

ಸಾಲಕ್ಕೆ ಠೇವಣಿ ಜಮಾ ಮಾಡುವಂತಿಲ್ಲ:

ಯಾವುದೇ ಸಹಕಾರ ಬ್ಯಾಂಕುಗಳು ರೈತರು ತಮ್ಮಲ್ಲಿಟ್ಟಠೇವಣಿಯನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದರೆ, ಇಲ್ಲವೇ ಠೇವಣಿ ಹಣ ವಾಪಸು ನೀಡದೇ ಇದ್ದರೆ ಅಂತಹ ಬ್ಯಾಂಕುಗಳಿಗೆ ಆ ರೀತಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್‌ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮೊದಲಿಗೆ 50000 ರು. ಒಳಗಿನ ಸಾಲ ಮನ್ನಾ

ಮೊದಲ ಕಂತಿನಲ್ಲಿ 50 ಸಾವಿರ ರು. ಒಳಗೆ ಇರುವ ರೈತರ ಸಾಲ ಮನ್ನಾ ಮಾಡಲು ಹಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ವಾಣಿಜ್ಯ ಬ್ಯಾಂಕುಗಳಲ್ಲಿ ಸುಸ್ತಿದಾರರಾಗಿರುವ ರೈತರನ್ನು ಹೊರತುಪಡಿಸಿ ಸುಮಾರು 16-17 ಲಕ್ಷ ರೈತರ ಸಾಲ ಮನ್ನಾ ಮಾಡಲಾಗುವುದು. ಬ್ಯಾಂಕುಗಳಲ್ಲಿ ಎರಡು ಲಕ್ಷ ರು.ವರೆಗೆ ರೈತರ ಸಾಲ ಇದೆ. ಹೀಗಾಗಿ ಮೊದಲ ಕಂತಿನಲ್ಲಿ 50 ಸಾವಿರ ರು. ಒಳಗೆ ಇರುವ ರೈತರ ಸಾಲ ಮನ್ನಾ ಮಾಡಲು ಹಣ ಬಿಡುಗಡೆ ಮಾಡಲಾಗುವುದು. ಇಷ್ಟೇ ಅಲ್ಲ ಸಾಲವನ್ನು ಸರಿಯಾಗಿ ಮರುಪಾವತಿಸಿದ ರೈತರಿಗೆ ಪ್ರೋತ್ಸಾಹ ಧನವಾಗಿ 25 ಸಾವಿರ ರು.ಗಳನ್ನು ಕೊಡುವ ಬಗ್ಗೆ ಸಹ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಬರುವ ದಿನಗಳಲ್ಲಿ ಈ ಹಣ ಸಹ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

click me!