ಶೀಘ್ರದಲ್ಲೇ ಬದಲಾಗಲಿದೆ ರಾಜ್ಯದ ಸಚಿವ ಸಂಪುಟ

By Web DeskFirst Published Aug 11, 2018, 8:26 AM IST
Highlights

ಕರ್ನಾಟಕದಲ್ಲಿ ಸದ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಶೀಘ್ರದಲ್ಲೆ ಸಂಪುಟ ಪುನಾರಚನೆ ಮಾಡಲಾಗುವುದು. ಲೋಕಸಭಾ ಚುನಾವಣೆಗೆ ಮುನ್ನಾ ಪುನಾರಚನೆ ಮಾಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ. 


ಹೊನ್ನಾವರ :  ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶ್ರೀಕ್ಷೇತ್ರ ಇಡಗುಂಜಿಯ ಶ್ರೀವಿನಾಯಕ ದೇವರ ದರ್ಶನಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ 6 ಸಚಿವರು ಹಾಗೂ ಜೆಡಿಎಸ್‌ನ ಒಬ್ಬರು ಸಚಿವರು ಸಚಿವ ಸಂಪುಟಕ್ಕೆ ಭರ್ತಿಯಾಗಬೇಕಿದೆ. ಯಾವುದೇ ಗೊಂದಲ ಇಲ್ಲದೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು.

ರಾಜ್ಯ ಸರ್ಕಾರ ರಚನೆಯಲ್ಲಿ ಮೈತ್ರಿ ಆಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಯಾವುದೇ ಮೈತ್ರಿ ಪ್ರಸ್ತಾಪವಿಲ್ಲ. ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಇರುವುದರಿಂದ ಕಾರ್ಯಕರ್ತರಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ಉಂಟಾಗುವುದು ಸಹಜ. ಆದರೆ, ಇದನ್ನು ನಿವಾರಿಸುತ್ತೇವೆ ಎಂದು ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಅಪರೇಷನ್‌ ಕಮಲ ಯಶಸ್ವಿಯಾಗದು. ಬಿಜೆಪಿಯ ಶಾಸಕರೆ ನಮ್ಮ ಸಂಪರ್ಕದಲ್ಲಿದ್ದಾರೆ. ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ತುದಿಗಾಲಿನ ಮೇಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಉಪ ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಇಡಗುಂಜಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.

click me!