
ಬೆಳ್ತಂಗಡಿ : ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಕಾರ್ಯ ಶೀಘ್ರದಲ್ಲಿಯೇ ನಡೆಯಲಿದೆ. ಈ ಬಗ್ಗೆ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಭಾನುವಾರ ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಸರಕಾರದ ಎಲ್ಲ ತೀರ್ಮಾನಗಳನ್ನೂ ಸಮನ್ವಯ ಸಮಿತಿಯಲ್ಲಿ ಉಭಯ ಪಕ್ಷದವರೊಂದಿಗೆ ಸಮಾಲೋಚನೆ ನಡೆಸಿಯೇ ತೆಗೆದುಕೊಳ್ಳಲಾಗುತ್ತಿದೆ. ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಸಾಲಮನ್ನಾವನ್ನು ವಿರೋಧಿಸುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಯಾರೂ ಸಾಲಮನ್ನಾಗೆ ವಿರೋಧ ವ್ಯಕ್ತಪಡಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ 50 ಸಾವಿರ ರು. ವರೆಗೆ ಸಾಲಮನ್ನಾ ಮಾಡಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಾಲಮನ್ನಾಕ್ಕಾಗಿ ರಾಜ್ಯಕ್ಕೆ 50 ಸಾವಿರ ಕೋಟಿ ರು. ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಾಲ ಮನ್ನಾ ವಿರೋಧಿಸುತ್ತದೆ ಎಂಬುದು ಊಹಾಪೋಹ ಅಷ್ಟೇ ಎಂದರು.
ಇದೇ ವೇಳೆ ನಿಗಮ ಮಂಡಳಿಗಳ ಪಟ್ಟಿ ತಂದಿರುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ, ನಿಗಮ ಮಂಡಳಿಗಳ ಆಕಾಂಕ್ಷಿಗಳ ಪಟ್ಟಿ ಪುಸ್ತಕದಲ್ಲಿಲ್ಲ, ಎಲ್ಲಾ ಮಸ್ತಕದಲ್ಲಿದೆ ಎಂದು ಮುಗುಳ್ನಗೆ ಬೀರಿದರು. ಈ ಮೂಲಕ ನಿಗಮ-ಮಂಡಳಿಗಳ ನೇಮಕದ ವಿಚಾರ ಸಿದ್ದರಾಮಯ್ಯ ಅವರೊಂದಿಗಿನ ಪ್ರಮುಖ ಚರ್ಚೆಯ ಅಂಶ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು. ಡಾ.ವೀರೇಂದ್ರ ಹೆಗ್ಗಡೆ ಅವರೊಡನೆ ದೂರವಾಣಿ ಮೂಲಕವೇ ಮಾತನಾಡಿ ಪರಮೇಶ್ವರ್ ಆಶೀರ್ವಾದ ಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.