
ಶಿವಮೊಗ್ಗ (ಸೆ.11): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಬಿಡಲು ಕಾರಣರಾಗಿದ್ದ, ಅವರ ಸುತ್ತಮುತ್ತಲು ಇರುವ ಕೆಲವು ವ್ಯಕ್ತಿಗಳೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಬಿಎಸ್ವೈಗೆ ಇಲ್ಲಸಲ್ಲದ್ದನ್ನು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸಂಜೆ ಬ್ರಿಗೇಡ್ ಆಯೋಜಿಸಿರುವ ಹಾವೇರಿ ಸಮಾವೇಶದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೂ, ಬ್ರಿಗೇಡ್‌ಗೂ ಸಂಬಂಧವಿಲ್ಲ. ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಆದ್ದರಿಂದ ಯಡಿಯೂರಪ್ಪಗೆ ಬ್ರಿಗೇಡ್ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸುತ್ತೇವೆ. ಹಾಗೂ ಸಮಾವೇಶಕ್ಕೂ ಅವರನ್ನು ಆಹ್ವಾನಿಸುತ್ತೇವೆ ಎಂದರು.
ಯಡಿಯೂರಪ್ಪ ಬಿಜೆಪಿ ಬಿಟ್ಟಿದ್ದರು. ಮತ್ತೆ ಪಕ್ಷ ಸೇರಬೇಕೆಂಬ ಇಚ್ಛೆ ಹೊಂದಿದ್ದಾರೆ ಎಂದು ಗೊತ್ತಾದಾಗ ನಗರದ ಡಿ.ಎಚ್. ಶಂಕರಮೂರ್ತಿ ನಿವಾಸದಲ್ಲಿ ಸಭೆ ಸೇರಿದ್ದೆವು. ಅವರನ್ನು ಮನಃಪೂರ್ವಕ ಬಿಜೆಪಿಗೆ ಆಹ್ವಾನಿಸಲು ನಿರ್ಧರಿಸಿದೆವು. ನಾನು ಹಾಗೂ ಶಂಕರಮೂರ್ತಿ ಬೆಂಗಳೂರಿಗೆ ಹೋಗಿ ಯಡಿಯೂರಪ್ಪರನ್ನು ಭೇಟಿ ಮಾಡಿದಾಗ ‘ನಾನೇನು ಬಿಜೆಪಿ ಬಿಡಬೇಕೆಂದಿದ್ದಿಲ್ಲ. ಆದರೆ ನನ್ನ ಸುತ್ತಮುತ್ತ ಇದ್ದವರು ಬಿಡುವಂತೆ ಮಾಡಿದರು’ ಎಂದು ಹೇಳಿದ್ದರು. ಅವರೇ ಈಗಲೂ ಬ್ರಿಗೇಡ್ ಬಗ್ಗೆ ಯಡಿಯೂರಪ್ಪ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದು ಪುನರುಚ್ಚರಿಸಿದರು.
ಲೋಕಸಭಾ ಚುನಾವಣೆ ವೇಳೆ ನನ್ನ ಮನೆಗೆ ಬಂದಿದ್ದ ಯಡಿಯೂರಪ್ಪ ನನ್ನನ್ನು ಸ್ಪರ್ಧಿಸುವಂತೆ ಕೇಳಿದ್ದರು. ಆಗ ನಾನು ರಾಷ್ಟ್ರ ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿ, ನೀವೇ ಸ್ಪರ್ಧಿಸಿ, ಎಲ್ಲರೂ ಸೇರಿ ಗೆಲ್ಲಿಸುತ್ತೇವೆ ಎಂದೆವು. ಕೇಸುಗಳು ಬೇರೆಯವರ ವಿರುದ್ಧ ಇದ್ದಿರಲಿಲ್ಲವೇ? ಚುನಾವಣೆ ನಡೆದಾಗ ಅತ್ಯಂತ ಬಹುಮತದಿಂದ ಗೆದ್ದರು. ಅವರು ಕೃಷಿ ಸಚಿವರಾಗಬೇಕೆಂಬ ಆಸೆ ನಮ್ಮದಾಗಿತ್ತು. ಬೇರೆ ಬೇರೆ ಕಾರಣದಿಂದ ಸಾಧ್ಯವಾಗಲಿಲ್ಲ ಎಂದರು.
ಬಿಎಸ್‌ವೈ ಪಕ್ಷದ ರಾಜ್ಯಾಧ್ಯಕ್ಷರಾಗಬೇಕೆಂದು ಮೊದಲು ಹೇಳಿದ್ದೇ ನಾನು. ರಾಜ್ಯದ ಜನರ ಭಾವನೆಗಳನ್ನು ಪರಿಗಣಿಸಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಮುಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರಬೇಕು. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗ ಬೇಕು ಎಂಬುದು ಬ್ರಿಗೇಡ್ ಉದ್ದೇಶ ಎಂದು ನುಡಿದರು.
ಬ್ರಿಗೇಡ್ ಏಕೆ ಬೇಕು:
ಪಕ್ಷದಲ್ಲಿಯೇ ಎಸ್‌ಸಿ ಎಸ್‌ಟಿ ಮೋರ್ಚಾ, ಓಬಿಸಿ ಮೋರ್ಚಾ ಇದ್ದಾಗ ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಸಮಾಜದ ಬೇರೆ ಬೇರೆ ಮುಖಂಡರು ಮೋರ್ಚಾಕ್ಕೆ ಬರಲು ಆಗುವುದಿಲ್ಲ. ಅಧಿಕಾರಿಗಳು, ಸ್ವಾಮೀಜಿಗಳು ಈ ಸಭೆಗೆ ಬರುವುದಿಲ್ಲ. ಹಾಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಲಾಗಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಬ್ರಿಗೇಡ್ ಸ್ಥಾಪನೆಗೆ ರಾಷ್ಟ್ರಮಟ್ಟದ ಯಾವ ನಾಯಕರ ವಿರೋಧವೂ ಇಲ್ಲ. ಕೋರ್ ಕಮಿಟಿ ಸಭೆಯಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ. ಯಡಿಯೂರಪ್ಪ ಸ್ವಲ್ಪ ಬೇರೆ ರೀತಿ ಹೇಳುತ್ತಿರಬಹುದು. ಅವರನ್ನೂ ಒಪ್ಪಿಸುವ ವಿಶ್ವಾಸವಿದೆ ಎಂತಲೂ ಹೇಳಿದರು.
ಸಮಾವೇಶ - ಸಭೆ ನಿರ್ಣಯ:
ವಿಪ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾರ್ಗದರ್ಶನದಲ್ಲಿ ಆರಂಭವಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೊದಲ ಸಮಾವೇಶ ಅ.1ರಂದು ಹಾವೇರಿಯಲ್ಲಿ ನಡೆಯಲಿದೆ. ಈಶ್ವರಪ್ಪ ತಮ್ಮ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಮಾವೇಶ ಸಿದ್ಧತಾ ಸಭೆಯಲ್ಲಿ ಈ ದಿನಾಂಕ ಘೋಷಿಸಿದರು.
ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿ 6ರಂದು ಸಂಗೊಳ್ಳಿ ರಾಯಣ್ಣ ಅವರನ್ನು ನೇಣಿಗೆ ಹಾಕಿದ ಸ್ಥಳವಾದ ಬೆಳಗಾವಿ ಜಿಲ್ಲೆ ನಂದಗಡದಲ್ಲಿ ಜಿಲ್ಲಾ ಸಂಚಾಲಕರುಗಳ ಪ್ರತಿಜ್ಞಾ ಸಮಾವೇಶ ನಡೆಯುವುದು. ಸಂಗೊಳ್ಳಿ ರಾಯಣ್ಣ ಜನ್ಮದಿನವೂ ಆಗಿರುವ ಗಣರಾಜ್ಯೋತ್ಸವ ದಿನದಂದು ಕೂಡಲ ಸಂಗಮದಲ್ಲಿ 10 ಜಿಲ್ಲೆ ವ್ಯಾಪ್ತಿಯ ಸಮಾವೇಶ ನಡೆಯುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.