1 ನಿಮಿಷ ಶುದ್ಧ ಗಾಳಿ ಉಸಿರಾಡಬೇಕೆ? 3 ಸಾವಿರ ಕೊಡಿ!

By Web DeskFirst Published Dec 6, 2018, 12:58 PM IST
Highlights

ದೆಹಲಿ ಸೇರಿದಂತೆ ದೇಶದ ಹಲವೆಡೆ ವಾಯುಮಾಲಿನ್ಯ ಮಿತಿ ಮೀರಿದೆ. ಇದರಿಂದಾಗಿ ಉಸಿರಾಡುವುದಕ್ಕೂ ಶುದ್ಧ ಗಾಳಿ ಸಿಗದಂತಾಗಿದೆ. ಹೀಗಾಗಿ ಚೀನಾದಂತೆ ನಮ್ಮ ದೇಶದಲ್ಲೂ ಈಗ ಬಾಟಲಿಯಲ್ಲಿ ಶುದ್ಧ ಗಾಳಿ ಮಾರಾಟ ಮಾಡುವ ಉದ್ಯಮ ಜೋರಾಗಿಯೇ ಆರಂಭವಾಗಿದೆ. 

ಬೆಂಗಳೂರು (ಡಿ. 06):  ಮಿತಿಮೀರಿದ ವಾಯು ಮಾಲಿನ್ಯದಿಂದಾಗಿ ದೆಹಲಿಯಲ್ಲಿ ಜನರು ಉಸಿರಾಡುವುದೇ ಕಷ್ಟವಾಗಿದೆ. 2016 ರಿಂದಲೂ ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸರ್ಕಾರ ಮಾಲಿನ್ಯ ನಿಯಂತ್ರಣಕ್ಕಾಗಿ ಏನೆಲ್ಲಾ ಕ್ರಮ ಕೈಗೊಳ್ಳುತ್ತಿದ್ದರೂ ಯಾವುದೇ ಬದಲಾವಣೆ ಸಾಧ್ಯವಾಗುತ್ತಿಲ್ಲ.

ಹೀಗಾಗಿ 2016 ರಲ್ಲಿ ಸರ್ಕಾರಿ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೇಲ್) ಯುಟ್ಯೂಬ್ ವಿಡಿಯೋ ಒಂದರಿಂದ ಪ್ರೇರೇಪಣೆಗೊಂಡು ಶುದ್ಧ ಗಾಳಿಯನ್ನು ತಯಾರಿಸುವ ಯೋಜನೆಯೊಂದಕ್ಕೆ ಪ್ರಾಯೋಜಕತ್ವ ನೀಡಿತ್ತು. ಅದು,ದೆಹಲಿಯಲ್ಲಿ ಶುದ್ಧ ಗಾಳಿಯನ್ನು ಜನರು ಉಸಿರಾಡುವಂತಾಗಬೇಕು ಎಂಬ ಯೋಜನೆಯ ಭಾಗವಾಗಿತ್ತು. 

ನಂತರ ಒಂದಷ್ಟು ಉತ್ಸಾಹಿಗಳು ಸೇರಿ ವೆನ್‌ಚ್ಯೂರ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಆರಂಭಿಸಿ ಶುದ್ಧ ಗಾಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಆಗ ಒಂದು ಪ್ರಯೋಗವಾಗಿ ಆರಂಭಗೊಂಡ ಈ ಆಂದೋಲನ ಈಗ ಉದ್ದಿಮೆಯಾಗಿ ಮಾರ್ಪಾಟಾಗಿದೆ. ಹಲವಾರು ಕಂಪನಿಗಳು ಶುದ್ಧ ಗಾಳಿಯನ್ನು ಬಾಟಲಿಯಲ್ಲಿ ತುಂಬಿ ದುಬಾರಿ ಬೆಲೆಗೆ ಶಾಪಿಂಗ್ ವೆಬ್‌ಸೈಟ್ ಹಾಗೂ ಮಾಲ್‌ಗಳಲ್ಲಿ ಮಾರಾಟಕ್ಕಿಟ್ಟಿವೆ.

ಪ್ರಾರಂಭವಾಗಿದ್ದು ಚೀನಾದಲ್ಲಿ

ಶುದ್ಧ ಗಾಳಿಯ ಮಾರಾಟ ಎಂಬ ಪರಿಕಲ್ಪನೆ ಪ್ರಾರಂಭವಾಗಿದ್ದು ಚೀನಾದಲ್ಲಿ. ಅನಂತರ ಅದು ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ವಿಸ್ತರಿಸಿದೆ. ೨೦೧೫ರಲ್ಲಿ ‘ವೈಟಾಲಿಟಿ ಏರ್’ ಎಂಬ ಕಂಪನಿ ಶುದ್ಧ ಗಾಳಿ ಮಾರಾಟ ಮಾಡಿ ಯಶಸ್ವಿಯಾದ ಬಳಿಕ ಕೆನಡಾ ಮೂಲದ ಸ್ಟಾರ್ಟ್ ಅಪ್ ಕಂಪನಿ ಭಾರತೀಯರಿಗೆ ಶುದ್ಧ ಗಾಳಿ ಮಾರಾಟ ಮಾಡಲು ಆರಂಭಿಸಿತು. ಅನಂತರ ಒಂದರ ಹಿಂದೆ ಒಂದರಂತೆ ಮತ್ತಷ್ಟು ಕಂಪನಿಗಳು ತಲೆ ಎತ್ತಿವೆ.
 
3 ಲೀ. ಗಾಳಿಗೆ ₹1500 !

ಮೊಟ್ಟ ಮೊದಲ ಬಾರಿಗೆ ಶುದ್ಧ ಗಾಳಿಯನ್ನು ಮಾರಾಟ ಮಾಡಿದ ‘ವೈಟಾಲಿಟಿ ಏರ್’ ೩ ಅಥವಾ ೮ ಲೀಟರ್ ಕ್ಯಾನ್‌ಗೆ 1,450 ಮತ್ತು 2800 ರು. ನಿಗದಿಪಡಿಸಿ ಭಾರತದಲ್ಲಿ ಮಾರಾಟ ಮಾಡಿತ್ತು. ಒಬ್ಬ ವಯಸ್ಕನ ಒಂದು ನಿಮಿಷದ ಉಸಿರಾಟಕ್ಕೆ7-8 ಲೀಟರ್ ಗಾಳಿ ಬೇಕು. ಅಂದರೆ ಒಂದು ದಿನಕ್ಕೆ 11,000 ಲೀಟರ್ ಶುದ್ಧಗಾಳಿ ಬೇಕಾಗುತ್ತದೆ.

ಗಾಳಿ ಮಾರಾಟ

ಕಂಪನಿಗಳ ಪೈಪೋಟಿ ಒಂದರ ಹಿಂದೆ ಒಂದರಂತೆ ಶುದ್ಧಗಾಳಿ ಮಾರಾಟ ಮಾಡುವುದಾಗಿ ಹಲವು ಕಂಪನಿಗಳು ಇಂದು ತಲೆಯೆತ್ತಿವೆ. ಉತ್ತರಾಖಂಡದ ಚಮೋಲಿಯ ಹಿಮಾಲಯ ಪರ್ವತದಿಂದ ತಂದ ಶುದ್ಧ ಗಾಳಿಯನ್ನು ಮಾರಾಟ
ಮಾಡುವುದಾಗಿ ಹೇಳಿ ಕಂಪನಿಯೊಂದು ಅಸ್ತಿತ್ವಕ್ಕೆ ಬಂದಿದೆ. ಅದು ಇತರೆಲ್ಲಾ ಶುದ್ಧಗಾಳಿ ಮಾರಾಟ ಮಾಡುವ ಕಂಪನಿಗಳಿಗಿಂತ ತನ್ನ ಕಂಪನಿಯ ಉತ್ಪನ್ನ ಹೇಗೆ ಗುಣಮಟ್ಟದ್ದು ಎಂದು ವಿವರಿಸಿದೆ.

ಅದರ ಬೆಲೆ 10 ಲೀ. ಬಾಟಲ್‌ಗೆ ಕೇವಲ 550 ರು. ಇದನ್ನು ಬಳಸಿ 160 ಬಾರಿ ಉಸಿರಾಡಬಹುದು. ಇನ್ನು, ಶುದ್ಧ ಗಾಳಿಯ ಮಾರಾಟ ಎರಡೇ ಕಂಪನಿಗಳಿಗೇ ನಿಂತಿಲ್ಲ. ಆಸ್ಟ್ರೇಲಿಯಾ ಮೂಲದ ಅಜೈರ್ ಎಂಬ ಕಂಪನಿ ಆಸ್ಟ್ರೇಲಿಯಾದ ‘ಮಾಲಿನ್ಯಮುಕ್ತ ಶುದ್ಧ ಗಾಳಿ’ ಎಂದು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇದು 15 ಲೀಟರ್ ಬಾಟಲ್ ಗೆ 2,352ರು.ಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ.

ದೆಹಲಿಯಲ್ಲಿ ಪ್ರತಿ ಅಂಗಡಿಯಲ್ಲೂ ಲಭ್ಯ!

ದೆಹಲಿಯಲ್ಲಿ ವಾಯುಮಾಲಿನ್ಯ ಎಷ್ಟರಮಟ್ಟಿಗೆ ವಿಕೋಪಕ್ಕೆ ಏರಿದೆ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ಇಲ್ಲಿ ಶುದ್ಧ ಗಾಳಿ ಕೊಳ್ಳುವಿಕೆ ಹೆಚ್ಚು ಚಾಲ್ತಿಯಲ್ಲಿದೆ. ಹಲವಾರು ರೆಸ್ಟೊರೆಂಟ್‌ಗಳಲ್ಲಿ, ಸಿನಿಮಾ ಹಾಲ್‌ಗಳಲ್ಲಿ ಶುದ್ಧ ಗಾಳಿ
ಮಾರಾಟವಾಗುತ್ತಿದೆ.

ಅತಿ ಹೆಚ್ಚು ವಾಯಮಾಲಿನ್ಯ ಇರುವ ಪ್ರಮುಖ ನಗರಗಳು

ಕಾನ್ಪುರ, ಫರೀದಾಬಾದ್, ವಾರಾಣಸಿ, ಗಯಾ, ಪಟನಾ, ದೆಹಲಿ, ಲಖನೌ. 

click me!