
ನಾರಾಯಣ ಹೆಗಡೆ
ಹಾವೇರಿ : ಪಾಕಿಸ್ತಾನದ ವಿರುದ್ಧ ಆಪರೇಶನ್ ವಿಜಯ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡು ಕಾರ್ಗಿಲ್ ಯುದ್ಧದಲ್ಲಿ ಗೆಲುವಿಗಾಗಿ ಗನ್ ಹಿಡಿದು ಹೋರಾಡಿದ ಕೈ ಇಂದು ನ್ಯಾಯಯುತವಾಗಿ ಸಿಗಬೇಕಿದ್ದ ಸೌಲಭ್ಯಕ್ಕಾಗಿ ಬೇಡುತ್ತಿದೆ. ಯುದ್ಧದಲ್ಲಿ ಗೆದ್ದು 19 ವರ್ಷಗಳೇ ಗತಿಸಿದರೂ ಹೆಮ್ಮೆ ಯ ಯೋಧನ ಅಲೆದಾಟಕ್ಕೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ.
ಕಾರ್ಗಿಲ್‌ನಲ್ಲಿ ಭಾರತ ಪಾಕಿಸ್ತಾನದ ನಡುವೆ 1999 ರಲ್ಲಿ ನಡೆದ ಆಪರೇಶನ್ ವಿಜಯ್‌ನಲ್ಲಿ ಪಾಲ್ಗೊಂಡು ಶತ್ರುಗಳ ಗುಂಡೇಟಿಗೂ ಜಗ್ಗದೇ ಹೋರಾಡಿದ ಹಾವೇರಿಯ ನಿವೃತ್ತ ಯೋಧ ಮಹ್ಮದ್ ಜಹಾಂಗೀರ್ ಖವಾಸ್ ಅವರ ನೋವಿನ ಕತೆಯಿದು. 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿ 2000 ರಲ್ಲಿ ನಿವೃತ್ತರಾದ ಖವಾಸ್, ಅಲ್ಲಿಂದ ಇಲ್ಲಿಯವರೆಗೂ ಸ್ವಂತ ಸೂರು ಹಾಗೂ ಸರ್ಕಾರದಿಂದ ಭೂಮಿ ಮಂಜೂರಿಗಾಗಿ ಕಚೇರಿ ಅಲೆದಾಟ ನಡೆಸುತ್ತಲೇ ಇದ್ದಾರೆ. ಸಂಬಂಧಪಟ್ಟ ಇಲಾಖೆಗಳಿಗೆ ನಿರಂತರವಾಗಿ ಪತ್ರ ಬರೆಯುತ್ತಲೇ ಇದ್ದಾರೆ. ಆದರೂ ಅವರ ಮನವಿಗೆ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಲೇ ಇಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ.
ಇಂದು ಕಾರ್ಗಿಲ್ ವಿಜಯ ದಿವಸ್: ಸಂಸಾರ ನಡೆಸಲು ಕಳೆದ ವರ್ಷದವರೆಗೂ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವಂತಾಯಿತು. ಕಾರ್ಗಿಲ್ ವಿಜಯ ದಿವಸಕ್ಕೆ ಜು. 26 ಕ್ಕೆ ಬರೋಬ್ಬರಿ 19 ವರ್ಷಗಳಾಗುತ್ತಿದ್ದು, ಜನಪ್ರತಿನಿಧಿಗಳು, ಸರ್ಕಾರ, ಅಧಿಕಾರಿಗಳು ಅವರಿಗೆ ನೀಡಿದ್ದ ಭರವಸೆ ಮಾತ್ರ ಇನ್ನೂ ಈಡೇರಿಲ್ಲ ಭರವಸೆಯ ಮಹಾಪೂರ: ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಚಾಲಕ, ಹವಾಲ್ದಾರ್ ಹುದ್ದೆಯಲ್ಲಿದ್ದು ಸಲ್ಲಿಸಿದ ಖವಾಸ್, ನಿವೃತ್ತಿಗೆ ಎರಡು ವರ್ಷ ಇರುವಾಗ ಕಾರ್ಗಿಲ್ ಯುದ್ಧ ಘೋಷಣೆಯಾಯಿತು. ಯುದ್ಧದ ಮೊದಲ ದಿನದಿಂದ ಹಿಡಿದು ವಿಜಯ ಪತಾಕೆ ಹಾರಿಸಿದ ದಿನದವರೆಗೂ ಸಕ್ರಿಯವಾಗಿ ಪಾಲ್ಗೊಂಡು ಶತ್ರು ಸೇನೆ ವಿರುದ್ಧ ಕೆಚ್ಚೆದೆಯಿಂದ ಕಾದಾಡಿದ್ದರು.
ಅಲ್ಲದೇ ಆ ಯುದ್ಧದಲ್ಲಿ ಪಾಲ್ಗೊಂಡ ಹಾವೇರಿ ಜಿಲ್ಲೆಯ ಏಕೈಕ ಯೋಧ ಎಂಬ ಹೆಗ್ಗಳಿಕೆ ಕೂಡ ಅವರಿಗೆ ಸಂದಿದೆ. ಯುದ್ಧದಲ್ಲಿ ಪಾಲ್ಗೊಂಡು ಜಿಲ್ಲೆಗೆ ವಾಪಸಾದ ಸಂದರ್ಭದಲ್ಲಿ ಅವರಿಗೆ ಸಿಕ್ಕ ಸನ್ಮಾನ, ಗೌರವಗಳಿಗೆ ಲೆಕ್ಕವಿಲ್ಲ. ಜನಪ್ರತಿನಿಧಿಗಳು, ಜಿಲ್ಲಾಡಳಿತದಿಂದ ಭರವಸೆಯ ಮಹಾಪೂರವೇ ಹರಿದುಬಂದಿತ್ತು. ಸರ್ಕಾರದಿಂದ 5 ಎಕರೆ ಜಮೀನು ಕೊಡುವ ಭರವಸೆ ಸಿಕ್ಕಿತ್ತು. ಆದರೆ, ಅವೆಲ್ಲಾ ಇನ್ನೂ ಮಾತಿನಲ್ಲೇ ಉಳಿದಿದೆ.
ಇನ್ನೂ ಸಿಗದ ಜಮೀನು: ಮಾಜಿ ಸೈನಿಕರಿಗೆ ನೀಡಲೆಂದು ನೆಗಳೂರು ಗ್ರಾಮದಲ್ಲಿ ಜಿಲ್ಲಾಡಳಿತ ಭೂಮಿ ಗುರುತಿಸಿದ್ದು, ಅದರಲ್ಲಿ 5ಎಕರೆ ಜಮೀನನ್ನು ನೀಡುವಂತೆ ಮಹ್ಮದ್ ಖವಾಸ್ ಅನೇಕ ಬಾರಿ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರಿ ಕಚೇರಿಗೆ ಅಲೆದಾಡಿ, ಅಧಿಕಾರಿಗಳಿಗೆ ದಾಖಲೆಪತ್ರ ನೀಡಿದ್ದರೂ ಇನ್ನೂ ಜಮೀನು ಸಿಕ್ಕಿಲ್ಲ. ತಹಸೀಲ್ದಾರ ಕಚೇರಿ, ಜಿಲ್ಲಾಡಳಿತ, ಪ್ರಾದೇಶಿಕ ಆಯುಕ್ತರ ಕಚೇರಿಗೆ ಪತ್ರ ಬರೆದು ಸುಸ್ತಾಗಿದ್ದಾರೆ. ಮನೆ ನೀಡುವುದಾಗಿ ಹೇಳಿದ್ದ ನಗರಸಭೆ ನಿವೇಶನ ನೀಡಿದ್ದರೂ ಕಾಯಂ ಹಕ್ಕುಪತ್ರ ನೀಡಿಲ್ಲ. ಖವಾಸ್ ಅವರು ತಂದೆ, ಪತ್ನಿ, ನಾಲ್ವರು ಮಕ್ಕಳ ತುಂಬು ಸಂಸಾರ ಸಾಗಿಸುತ್ತಿದ್ದು, ಕಳೆದ 18 ವರ್ಷಗಳಿಂದಲೂ ಸರ್ಕಾರದ ಜಮೀನಿಗಾಗಿ ಅಲೆದಾಡುವುದು ತಪ್ಪಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.