ಸೊಹ್ರಾಬುದ್ದೀನ್‌ ಕೇಸಲ್ಲಿ ಅಮಿತ್‌ ಸಿಲುಕಿಸಲು ಯತ್ನ ನಡೆದಿತ್ತಾ?

By Web DeskFirst Published Dec 29, 2018, 10:45 AM IST
Highlights

ರಾಜಕೀಯ ನಾಯಕರನ್ನು ಸಿಲುಕಿಸಲು ಸಿಬಿಐ ಪ್ರಯತ್ನಿಸಿತ್ತು| ಸತ್ಯ ಶೋಧನೆ ಬಿಟ್ಟು, ಪೂರ್ವಯೋಜಿತ ನಿಲುವು ಸಾಬೀತಿಗೆ ಯತ್ನಿಸಿತ್ತು| ಸಿಬಿಐ ವಿಶೇಷ ನ್ಯಾಯಾಧೀಶರಿಂದಲೇ ತೀರ್ಪಿನಲ್ಲಿ ಉಲ್ಲೇಖ

ಮುಂಬೈ[ಡಿ.29]: ಪಾತಕಿ ಸೊಹ್ರಾಬುದ್ದೀನ್‌ ಶೇಖ್‌, ಆತನ ಪತ್ನಿ ಕೌಸರ್‌ ಬೀ ಹಾಗೂ ಸಹಚರ ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್‌ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಆ ಕೇಸಿನಲ್ಲಿ ರಾಜಕೀಯ ನಾಯಕರನ್ನು ಸಿಲುಕಿಸಲು ಯತ್ನಿಸಿತ್ತು. ಪೂರ್ವನಿರ್ಧರಿತ ಹಾಗೂ ಪೂರ್ವಯೋಜಿತ ಸಿದ್ಧಾಂತ ಇಟ್ಟುಕೊಂಡು ತನಿಖೆ ನಡೆಸಿತ್ತು ಎಂದು ತೀರ್ಪು ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಲಯ ತೀಕ್ಷ$್ಣ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೊಹ್ರಾಬುದ್ದೀನ್‌ ಪ್ರಕರಣದಲ್ಲಿ ಹಾಲಿ ಬಿಜೆಪಿ ಅಧ್ಯಕ್ಷರಾಗಿರುವ ಅಮಿತ್‌ ಶಾ ಅವರು ಕೂಡ ಆರೋಪಿಯಾಗಿದ್ದರು. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಂಡಿದ್ದರು. ಅವರನ್ನು ಸಿಬಿಐ ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿತ್ತೆ ಎಂಬ ಅನುಮಾನ ತೀರ್ಪಿನ ಬಳಿಕ ವ್ಯಕ್ತವಾಗಿದೆ.

ನಕಲಿ ಎನ್‌ಕೌಂಟರ್‌ ಪ್ರಕರಣದಿಂದ ಎಲ್ಲ 22 ಆರೋಪಿಗಳನ್ನು ಖುಲಾಸೆಗೊಳಿಸಿ ಡಿ.21ರಂದು 350 ಪುಟಗಳ ತೀರ್ಪನ್ನು ವಿಶೇಷ ನ್ಯಾಯಾಧೀಶ ಎಸ್‌.ಜೆ. ಶರ್ಮಾ ಪ್ರಕಟಿಸಿದ್ದರು. ಆ ತೀರ್ಪಿನ ಪ್ರತಿ ಲಭ್ಯವಾಗಿಲ್ಲವಾದರೂ, ಅದರ ಆಯ್ದ ಭಾಗ ಮಾಧ್ಯಮಗಳಿಗೆ ಸಿಕ್ಕಿದೆ.

ರಾಜಕೀಯ ಪ್ರೇರಿತ:

‘ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಹಿಂದಿನ ಜಡ್ಜ್‌ (ಎಂ.ಬಿ. ಗೋಸವಿ) ಅವರು 16ನೇ ಆರೋಪಿ (ಅಮಿತ್‌ ಶಾ) ಅವರನ್ನು ಖುಲಾಸೆಗೊಳಿಸುವ ಸಂದರ್ಭದಲ್ಲಿ ತನಿಖೆ ರಾಜಕೀಯ ಪ್ರೇರಿತವಾಗಿದೆ ಎಂದಿದ್ದರು. ನನ್ನ ಮುಂದಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ, ರಾಜಕೀಯ ನಾಯಕರನ್ನು ಪ್ರಕರಣದಲ್ಲಿ ಸಿಲುಕಿಸಲು ಸಿಬಿಐನಂತಹ ತನಿಖಾ ಸಂಸ್ಥೆ ಪೂರ್ವನಿರ್ಧರಿತ ಸಿದ್ಧಾಂತ ಹೊಂದಿತ್ತು ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಸತ್ಯ ಹುಡುಕುವ ಬದಲಿಗೆ ಪೂರ್ವನಿರ್ಧರಿತ ಹಾಗೂ ಪೂರ್ವಯೋಜಿತ ಸಿದ್ಧಾಂತವನ್ನೇ ಸಾಬೀತುಪಡಿಸಲು ಸಿಬಿಐ ಹೆಚ್ಚು ಮುತುವರ್ಜಿ ವಹಿಸಿತ್ತು. ಕಾನೂನು ಪ್ರಕಾರ ತನಿಖೆ ನಡೆಸದೇ ತನ್ನ ಗುರಿ ಸಾಧನೆಗೆ ಯತ್ನಿಸಿತ್ತು’ ಎಂದು ಶರ್ಮಾ ಅವರು ತಿಳಿಸಿದ್ದಾರೆ.

2010ರಲ್ಲಿ ಸೊಹ್ರಾಬುದ್ದೀನ್‌ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿತ್ತು. ಆಗ ಗುಜರಾತಿನ ಗೃಹ ಸಚಿವರಾಗಿದ್ದ ಅಮಿತ್‌ ಶಾ ಅವರನ್ನು ಸಿಬಿಐ ಬಂಧಿಸಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅಮಿತ್‌ ಶಾ, 2014ರಲ್ಲಿ ಖುಲಾಸೆಗೊಂಡಿದ್ದರು.

click me!