
ಬೆಂಗಳೂರು, [ಅ.14]: ಮೈತ್ರಿ ಸಚಿವ ಸಂಪುಟದಿಂದ ರಮೇಶ್ ಜಾರಕಿಹೊಳಿ ಅವರನ್ನು ವಜಾ ಮಾಡಬೇಕೆಂದು ದೂರು ಕೇಳಿಬಂದಿದೆ.
ಸಚಿವ ಸಂಪುಟದ ಪ್ರಮುಖ ಖಾತೆ ಹೊಂದಿದ್ದರೂ ಕಳೆದ ಐದು ಸಚಿವ ಸಂಪುಟ ಸಭೆಗಳಿಗೆ ಗೈರು ಹಾಜರಾಗಿರುವ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ದೀರ್ಘಕಾಲದ ಅನಾರೋಗ್ಯ, ವಿದೇಶ ಪ್ರವಾಸದಂತಹ ಸನ್ನಿವೇಶಗಳಲ್ಲಿ ಸಚಿವರು ಸಚಿವ ಸಂಪುಟ ಸಭೆಗೆ ಗೈರು ಹಾಜರಾದ ಉದಾಹರಣೆ ಇದೆ. ಆದರೆ, ರಮೇಶ್ ಜಾರಕಿಹೊಳಿ ಅವರು ನಗರದಲ್ಲೇ ಇದ್ದರೂ ಉದ್ದೇಶಪೂರ್ವಕವಾಗಿ ಸಚಿವ ಸಂಪುಟ ಸಭೆಗೆ ಗೈರುಹಾಜರಾಗುತ್ತಿದ್ದಾರೆ.
ಜತೆಗೆ ನನಗೆ ಸಚಿವ ಸ್ಥಾನಕ್ಕಿಂತಲೂ ದೇವರು ದೊಡ್ಡವನು. ನಾನು ದೇವರಲ್ಲಿ ಬೇಡಿಕೊಂಡಿರುವುದು ಆಗುವವರೆಗೂ ಸಂಪುಟ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಭೀಮಪ್ಪ ದೂರಿದ್ದಾರೆ.
ಪೌರಾಡಳಿತ ಇಲಾಖೆಯಲ್ಲಿ ಆಗಬೇಕಾದ ಕೆಲಸಗಳು, ಪೌರಕಾರ್ಮಿಕರ ಸಮಸ್ಯೆಗಳು ಸೇರಿದಂತೆ ನೂರಾರು ಸಮಸ್ಯೆಗಳಿವೆ. ಆದರೆ, ಇಲಾಖೆಗೆ ತಮಗೂ ಸಂಬಂಧವೇ ಇಲ್ಲವೆಂಬಂತೆ ಸಚಿವ ರಮೇಶ್ ಜಾರಕಿಹೊಳಿ ಅವರು ಸಚಿವ ಸಂಪುಟ ಸಭೆಗೆ ಗೈರು ಹಾಜರಾಗುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ನಡವಳಿಕೆ ಹಾಗೂ ನಿಯಮಾವಳಿಗಳ ಪ್ರಕಾರ ಯಾವುದೇ ಸಮಿತಿ ಅಧ್ಯಕ್ಷ ರ ಅಪ್ಪಣೆ ಇಲ್ಲದೆ, ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಮಿತಿ ಸಭೆಗಳಿಗೆ ಗೈರಾಗಿದ್ದರೆ ಅವರನ್ನು ಸದಸ್ಯತ್ವದಿಂದ ತೆಗೆದು ಹಾಕಲು ಅವಕಾಶ ಇದೆ. ಹೀಗಾಗಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.