
ಬೆಂಗಳೂರು(ಏ. 02): ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯನ್ನು ಹನಿಟ್ರ್ಯಾಪ್'ನಲ್ಲಿ ಸಿಲುಕಿಸಿ ರು.10 ಲಕ್ಷ ಹಣ ಸುಲಿಗೆ ಮಾಡಿದ್ದ ಇಬ್ಬರು ಮಹಿಳೆಯರು ಸೇರಿ ಆರು ಮಂದಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ ರುದ್ರಪ್ಪ ಗಾರ್ಡನ್ ನಿವಾಸಿ ಗಂಗಾಧರ್ ವಂಚನೆಗೊಳಗಾದವರು. ಪ್ರಕರಣದ ಪ್ರಮುಖ ಆರೋಪಿ ಚಲ್ಲಘಟ್ಟದ ಮಂಜುನಾಥ ಅಲಿಯಾಸ್ ಮಂಜ (32), ಮಹದೇವ (27), ನಾಯಂಡಹಳ್ಳಿ ನಿವಾಸಿ ಮಹೇಶ್ (24), ನಿತ್ಯಾನಂದನಗರದ ಸ್ವಾಮಿ (27), ಬ್ಯಾಂಕ್ ಕಾಲೋನಿಯ ಜಯಂತಿ (28), ಕೋಣನಕುಂಟೆ ಕ್ರಾಸ್‌ನ ರುಕ್ಮಿಣಿ (37) ಬಂಧಿತರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ 50 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಂಗಾಧರ್ ಆರ್ಥಿಕವಾಗಿ ಸ್ಥಿತಿವಂತರಾಗಿದ್ದು, ರಿಯಲ್ ಎಸ್ಟೇಟ್ ಹಾಗೂ ಇನ್ನಿತರ ವ್ಯವಹಾರ ನಡೆಸುತ್ತಿದ್ದರು. ಆರೋಪಿ ಮಂಜ, ಗಂಗಾಧರ್ ಅವರ ಬಳಿ ಹಣ ವಿರುವುದನ್ನು ತಿಳಿದು ಹೇಗಾದರೂ ಮಾಡಿ ಗಂಗಾಧರ್‌ನಿಂದ ಹಣ ಕೀಳಬೇಕೆಂದು ನಿರ್ಧರಿಸಿದ್ದ. ಅದಕ್ಕೆ ಹನಿಟ್ರ್ಯಾಪ್ ಸಂಚು ರೂಪಿಸಿದ್ದ. ತನ್ನ ಕೃತ್ಯಕ್ಕೆ ಜಯಂತಿ ಹಾಗೂ ಸ್ನೇಹಿತರನ್ನು ಬಳಸಿಕೊಂಡಿದ್ದ. ಜಯಂತಿಗೆ ಗಂಗಾಧರ್ ಅವರ ಮೊಬೈಲ್ ಸಂಖ್ಯೆ ನೀಡಿ ಕರೆ ಮಾಡಿಸಿದ್ದರು. ಗಂಗಾಧರ್'ಗೆ ಕರೆ ಮಾಡಿದ್ದ ಜಯಂತಿ ನಾನು ಬ್ಯಾಂಕ್'ವೊಂದರ ಮ್ಯಾನೇಜರ್, ನಮ್ಮ ಬ್ಯಾಂಕ್'ನಲ್ಲಿ ಖಾತೆ ತೆರೆಯಿರಿ ಎಂದು ಹಿಂದೆ ಬಿದ್ದಿದ್ದಳು. ಹೀಗೆ ಸುಮಾರು 15 ದಿನಗಳಿಂದ ಗಂಗಾಧರ್'ಗೆ ಕರೆ ಮಾಡುತ್ತಿದ್ದ ಜಯಂತಿ ಸಲುಗೆಯಿಂದ ಮಾತನಾಡುತ್ತಿದ್ದಳು. ಹೀಗಾಗಿ ಗಂಗಾಧರ್ ಕೂಡ ಆಕೆಯ ಜತೆ ಮೊಬೈಲ್'ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಮಾ.17ರಂದು ಗಂಗಾಧರ್'ಗೆ ಕರೆ ಮಾಡಿದ ಜಯಂತಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಅವಲಹಳ್ಳಿಯ ಬಾರ್'ವೊಂದರ ಬಳಿ ಹೇಳುವಂತೆ ಹೇಳಿದ್ದಳು. ಅದರಂತೆ ಗಂಗಾಧರ್ ದ್ವಿಚಕ್ರ ವಾಹನದಲ್ಲಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮಹಿಳೆ ಕರೆದ ಸ್ಥಳ್ಕಕೆ ತೆರಳಿದ್ದರು. ಅಲ್ಲಿ ಜಯಂತಿ, ಆರೋಪಿ ಮಂಜುನಾಥ್ ಸೇರಿ ಮೂವರು ಆರೋಪಿಗಳಿದ್ದರು. ಗಂಗಾಧರ್'ನನ್ನು ಇಂಡಿಕಾ ಕಾರಿನಲ್ಲಿ ಕೂರಿಸಿಕೊಂಡು ದುಷ್ಕರ್ಮಿಗಳು ಚಲ್ಲಘಟ್ಟದಲ್ಲಿರುವ ಆರೋಪಿ ಮಂಜನ ರೂಮ್'ಗೆ ಕರೆದೊಯ್ದು ಬಂಧನದಲ್ಲಿರಿಸಿದ್ದರು.
ಕಾರಿನಲ್ಲಿ ಕರೆದೊಯ್ಯುವಾಗ ಮಾರ್ಗ ತಿಳಿಯಬಾರದೆಂಬ ಕಾರಣಕ್ಕೆ ಗಂಗಾಧರ್ ಕಣ್ಣಿಗೆ ದುಷ್ಕರ್ಮಿಗಳು ಬಟ್ಟೆಕಟ್ಟಿದ್ದರು. ಈ ವೇಳೆ ಇನ್ನಿಬ್ಬರು ದುಷ್ಕರ್ಮಿಗಳು ಗಂಗಾಧರ್ ದ್ವಿಚಕ್ರ ವಾಹನದೊಂದಿಗೆ ಕಾರು ಹಿಂಬಾಲಿಸಿದ್ದರು.
ಬೆತ್ತಲೆಯಾಗಿ ಹಲ್ಲೆ: ಗಂಗಾಧರ್'ನನ್ನು ರೂಮ್'ಗೆ ಕರೆದೊಯ್ಯದ ಆರೋಪಿಗಳು ತೀವ್ರವಾಗಿ ಹಲ್ಲೆ ನಡೆಸಿ ಬೆತ್ತಲೆಯಾಗಿ ಅಕ್ರಮ ಬಂಧನದಲ್ಲಿಟ್ಟಿದ್ದರು. ಜಯಂತಿ ಜತೆ ಸಲುಗೆಯಿಂದ ಮಾತನಾಡಿರುವ ವೀಡಿಯೋವನ್ನು ಮನೆಯವರಿಗೆ ತೋರಿಸುವುದಾಗಿ ಬೆದರಿಸಿ ರು. 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಗಂಗಾಧರ್ ಮೊಬೈಲ್‌ನಿಂದ ಅವರ ಸ್ನೇಹಿತನಿಗೆ ಕರೆ ಮಾಡಿಸಿ ಮರು ದಿನ ಬೆಳಗ್ಗೆ ಬಿಡದಿ ಸಮೀಪ 10 ಲಕ್ಷ ಹಣ ತರುವಂತೆ ಹೇಳಿದ್ದಾರೆ. ಇದಕ್ಕೊಪ್ಪಿದ ಗಂಗಾಧರ್ ಸ್ನೇಹಿತ ಆರೋಪಿಗಳಗೆ 10 ಲಕ್ಷ ಹಣ ನೀಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ತನ್ನ ಘನತೆಗೆ ಧಕ್ಕೆ ಉಂಟಾಗುತ್ತದೆ ಎಂದುಕೊಂಡು ಗಂಗಾಧರ್ ಆರಂಭದಲ್ಲಿ ಸುಮ್ಮನಾಗಿದ್ದರು. ಬಳಿಕ ಸ್ನೇಹಿತರ ಒತ್ತಾಯಕ್ಕೆ ಮಣಿದು ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಪಹರಣ ಯಾರಿಗೂ ತಿಳಿಯಬಾರದೆಂದು ದುಷ್ಕರ್ಮಿಗಳು ಗಂಗಾಧರನ ಮೊಬೈಲ್'ನಿಂದ ಮನೆಯವರಿಗೆ ಕರೆ ಮಾಡಿಸಿ ಸ್ನೇಹಿತರ ಮನೆಗೆ ಹೋಗಿರುವುದಾಗಿ ಹೇಳಿಸಿದ್ದರು.
ಗೋವಾ, ಧರ್ಮಸ್ಥಳ ಪ್ರವಾಸ:
ಹಣ ಸಿಕ್ಕ ಕೂಡಲೇ ಆರೋಪಿ ಮಂಜುನಾಥ್ ಸೇರಿ ಐದು ಮಂದಿ ಗೋವಾ, ಪಾಂಡಿಚೆರಿ, ಧರ್ಮಸ್ಥಳ ಇನ್ನಿತರ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳಿದ್ದರು. 10 ಲಕ್ಷ ಹಣದಲ್ಲಿ ಮಂಜ, ಮಹದೇವಗೆ 1.3 ಲಕ್ಷ, ಮಹೇಶ್‌ಗೆ 70 ಸಾವಿರ, ಜಯಂತಿಗೆ 1.20 ಲಕ್ಷ, ರುಕ್ಷ್ಮಿಣಿಗೆ 50 ಸಾವಿರ ನೀಡಿದ್ದ. ಆರೋಪಿಗಳನ್ನು ಕೃತ್ಯಕ್ಕೆ ಬಳಸಿದ ಮೊಬೈಲ್‌ನ ಸಿಡಿಆರ್ ಕರೆಗಳ ಮೂಲಕ ಪತ್ತೆ ಹಚ್ಚಿ ಬಂಧಿಸಲಾಯಿತು. ಮಂಜುನಾಥ್ ಯಾರು ಎಂಬುದು ಗಂಗಾಧರ್‌ಗೆ ತಿಳಿದಿರಲಿಲ್ಲ. ಗಂಗಾಧರ್ ಬಗ್ಗೆ ತಿಳಿದಿದ್ದ ಮಂಜುನಾಥ್ ಹಣಕ್ಕಾಗಿ ಕೃತ್ಯವೆಸಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೌಡಿಶೀಟರ್ ಆಗಿರುವ ಮಂಜ, ಹುಳಿಮಾವು ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಆರು ತಿಂಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಹೊಂದಿದ್ದ ಎಂದು ಅಧಿಕಾರಿ ಹೇಳಿದ್ದಾರೆ.
ಬ್ಯಾಟರಾಯನಪುರ ಪೊಲೀಸರು ಬಂಧಿಸಿರುವ ಆರೋಪಿಗಳು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.