ಮಾಜಿ ಸಿಎಂ ಕುಮಾರಸ್ವಾಮಿಗೆ 4 ಉರುಳು

By Suvarna Web DeskFirst Published May 18, 2017, 1:34 PM IST
Highlights

ಗಣಿ ಮಾಲೀಕರಿಂದ ಕುಮಾರಸ್ವಾಮಿ 150 ಕೋಟಿ ರೂ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೂ ನೋಟೀಸ್ ನೀಡಲು ಎಸ್'ಐಟಿ ನಿರ್ಧರಿಸಿದೆ. ಈ ಗಣಿಕಪ್ಪ ಹಗರಣವನ್ನು ಬಯಲಿಗೆಳೆದಿದ್ದ ಜನಾರ್ದನ ರೆಡ್ಡಿಯನ್ನು ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸಲು ಎಸ್'ಐಟಿ ತೀರ್ಮಾನಿಸಿದೆ.

ಬೆಂಗಳೂರು(ಮೇ 18): ಮಾಜಿ ಸಿಎಂ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಜಂತಕಲ್ ಮೈನಿಂಗ್ ಅಕ್ರಮ ಸೇರಿದಂತೆ ಎಲ್ಲಾ 4 ಪ್ರಕರಣಗಳಲ್ಲೂ ಎಸ್'ಐಟಿ ತನಿಖೆ ನಡೆಸಲಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ವಿಶೇಷ ತನಿಖಾ ತಂಡವು ನಾಲ್ಕು ಪ್ರಕರಣಗಳಲ್ಲಿ ಎಚ್'ಡಿಕೆಯವರ ವಿಚಾರಣೆ ನಡೆಸಲಿದೆ. ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಬೀಸೋ ದೊಣ್ಣೆಯಿಂದ ಪಾರಾಗಿದ್ದ ಕುಮಾರಣ್ಣನವರ ನೆತ್ತಿಯ ಮೇಲೆ ಈಗ ಎಲ್ಲಾ ನಾಲ್ಕು ಪ್ರಕರಣಗಳ ತೂಗುಗತ್ತಿ ತೂಗುತ್ತಿವೆ. ಸೋದರ ಬಾಲಕೃಷ್ಣರವರ ಹೆಸರಿನಲ್ಲಿ ಎಚ್'ಡಿಕೆ ಅಕ್ರಮ ಆಸ್ತಿ ಸಂಪಾದನೆ ಮಾಡಿದ ಪ್ರಕರಣವೂ ಇದರಲ್ಲಿ ಒಳಗೊಂಡಿದೆ.

ಎಚ್.ಡಿ.ಕೆ. ವಿರುದ್ಧದ 4 ಪ್ರಕರಣಗಳು:
1) ಜಂತಕಲ್ ಅಕ್ರಮ ಗಣಿಗಾರಿಕೆ
2) 150 ಕೋಟಿ ರೂ. ಗಣಿಕಪ್ಟ ಪ್ರಕರಣ
3) ಲಕ್ಷ್ಮೀ ವೆಂಕಟೇಶ್ವರ ಗಣಿ ಅಕ್ರಮ
4) ಸೋದರ ಬಾಲಕೃಷ್ಣ ಹೆಸರಿನಲ್ಲಿ ಅಕ್ರಮ ಆಸ್ತಿ ಸಂಪಾದನೆ

ಇದೇ ವೇಳೆ, ಗಣಿ ಮಾಲೀಕರಿಂದ ಕುಮಾರಸ್ವಾಮಿ 150 ಕೋಟಿ ರೂ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೂ ನೋಟೀಸ್ ನೀಡಲು ಎಸ್'ಐಟಿ ನಿರ್ಧರಿಸಿದೆ. ಈ ಗಣಿಕಪ್ಪ ಹಗರಣವನ್ನು ಬಯಲಿಗೆಳೆದಿದ್ದ ಜನಾರ್ದನ ರೆಡ್ಡಿಯನ್ನು ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸಲು ಎಸ್'ಐಟಿ ತೀರ್ಮಾನಿಸಿದೆ.

ಇನ್ನು, ಕುಮಾರಸ್ವಾಮಿಯವರು ಈ ಬೆಳವಣಿಗೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, ತಮ್ಮ ಹೆಸರಿಗೆ ಮಸಿ ಬಳಿಯುವ ಸಂಚಿದು ಎಂದು ವಿಷಾದಿಸಿದ್ದಾರೆ.

click me!