
ಲಕ್ನೋ(ಮೇ 18): ಯಾವುದೇ ಮಸಾಲಾ ಸಿನಿಮಾ ಥ್ರಿಲ್ಲರ್ ಕಥೆಗೆ ಕಡಿಮೆ ಇಲ್ಲದಂಥ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು ಗ್ಯಾಂಗ್ ಕಟ್ಟಿಕೊಂಡು ಮದುವೆ ಮನೆಗೆ ನುಗ್ಗಿ ತನ್ನ ಮಾಜಿ ಪ್ರಿಯಕರನನ್ನು ಕಿಡ್ನಾಪ್ ಮಾಡಿದ ಘಟನೆ ವರದಿಯಾಗಿದೆ. ಮದುವೆಯಾಗಬೇಕಿದ್ದ ವರ ಅಶೋಕ್ ಯಾದವ್ ಈಗ ಮಾಜಿ ಪ್ರೇಯಸಿಯ ಬಂಧನಕ್ಕೆ ಸಿಲುಕಿದ್ದಾನೆ. ಕಣ್ಮುಂದೆಯೇ ಹುಡುಗಿಯೊಬ್ಬಳು ಮದುವೆ ಮನೆಗೆ ನುಗ್ಗಿ ಗನ್ ಹಿಡಿದು ವರನನ್ನು ಕಿಡ್ನಾಪ್ ಮಾಡಿದ ದೃಶ್ಯ ಕಂಡು ನೂರಾರು ಜನರು ಸ್ತಂಬೀಭೂತರಾದರು.
ಉತ್ತರಪ್ರದೇಶದ ಬಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಮೋಹನ್'ಪೂರ್ವಾ ಗ್ರಾಮದ ಅಶೋಕ್ ಯಾದವ್ ಮತ್ತು ಹಮೀರ್'ಪುರ್ ಜಿಲ್ಲೆಯ ಮೌದಾಹಾ ಪಟ್ಟಣದ ಹುಡುಗಿಯೊಂದಿಗೆ ಮೇ 15ರಂದು ವಿವಾಹ ನಡೆಯುತ್ತಿತ್ತು. ಟಿಕಾ(ಅರಿಶಿಣ-ಕುಂಕಮ) ಆಚರಣೆ ನಡೆಯುತ್ತಿರುವಂತೆಯೇ ವರನ ಮಾಜಿ ಪ್ರಿಯತಮೆ ಮದುವೆ ಸಭಾಂಗಣಕ್ಕೆ ಆಗಮಿಸುತ್ತಾಳೆ. ರಿವಾಲ್ವರ್ ಹಿಡಿದುಕೊಂಡಿದ್ದ ಆಕೆಯ ಜೊತೆ ಐದಾರು ಗನ್'ಧಾರಿ ವ್ಯಕ್ತಿಗಳು ಇರುತ್ತಾರೆ. ಸೀದಾ ವೇದಿಕೆಗೆ ನುಗ್ಗುವ ಆ ವ್ಯಕ್ತಿಗಳು ವರನನ್ನು ಕೆಳಗೆ ಇಳಿಯುವಂತೆ ಹೇಳುತ್ತಾರೆ. ಮದುವೆಗೆ ಬಂದಿದ್ದ ಅತಿಥಿಗಳಿಗೆ ಇದೊಂದು ದರೋಡೆ ಪ್ರಕರಣವಿರಬಹುದೆಂದು ಭಾವಿಸುತ್ತಾರೆ. ಅತಿಥಿಗಳು ನೋಡನೋಡುತ್ತಿದ್ದಂತೆಯೇ ಅಶೋಕ್ ಯಾದವ್'ನನ್ನು ಆ ಮಹಿಳೆ ಮತ್ತವಳ ಗ್ಯಾಂಗ್ ಹೊರಗೆ ಕರೆದುಕೊಂಡುಹೋಗುತ್ತದೆ. ಆಚೆ ಕಾರಿನ ಹಿಂಬದಿ ಸೀಟಿಗೆ ಅಶೋಕ್'ನನ್ನು ಹಾಕಿ ಅವರು ಕರೆದೊಯ್ಯುತ್ತಾರೆ.
ಯಾರಾಕೆ?
ಈ "ರಿವಾಲ್ವರ್ ರಾಣಿ" ಬಾಂದ್ ಜಿಲ್ಲೆಯವಳೇ. ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿರುವ ಅಶೋಕ್ ಯಾದವ್ ಮತ್ತು ಈ ಹುಡುಗಿ ಇಬ್ಬರೂ ಪ್ರೇಮಿಗಳಾಗಿದ್ದವರು. ಹಲವು ತಿಂಗಳ ಕಾಲ ಆ ಹುಡುಗಿ ಜೊತೆ ಅಶೋಕ್ ಡೇಟಿಂಗ್ ಮಾಡಿರುತ್ತಾನೆ. ಆದರೆ, ಇದ್ದಕ್ಕಿದ್ದಂತೆ ಅಫೇರ್'ಗೆ ಬ್ರೇಕ್ ಹಾಕುವ ಅಶೋಕ್ ಬೇರೊಂದು ಹುಡುಗಿ ಜೊತೆ ವಿವಾಹಕ್ಕೆ ಮುಂದಾಗುತ್ತಾನೆ. ಹಲವು ಬಾರಿ ಆಕೆ ಅಶೋಕ್ ಯಾದವ್ ಜೊತೆ ಈ ಬಗ್ಗೆ ವಾಗ್ವಾದ ನಡೆಸುತ್ತಾಳೆ. ಆತನ ಮನೆಗೆ ಬಂದು ಅಶೋಕ್'ನ ಪೋಷಕರ ಜೊತೆಯೂ ಮಾತನಾಡುತ್ತಾಳೆ. ಆದರೆ, ಏನೂ ಪ್ರಯೋಜನವಾಗುವುದಿಲ್ಲ. ಇದರಿಂದ ಕುಪಿತಗೊಳ್ಳುವ ಪ್ರಿಯತಮೆ ಕಿಡ್ನಾಪ್ ಮಾಡಲು ನಿರ್ಧರಿಸುತ್ತಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.