
ಬೆಂಗಳೂರು(ಡಿ.22): ಕೆಪಿಎಸ್'ಸಿ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಸುಭೋದ್ ಯಾದವ್ ಅವರ ವರ್ಗಾವಣೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಕೆಪಿಎಸ್ಸಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿ ಸರ್ಕಾರ ಭ್ರಷ್ಟರಿಗೆ ರಕ್ಷಣೆ ನೀಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸರ್ಕಾರದ ನಡೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಸುಬೋದ್ ಯಾದವ್ ವರ್ಗಾವಣೆಗೆ ವ್ಯಾಪಕ ವಿರೋಧ
ರಾಜ್ಯದಲ್ಲಿ ಭ್ರಷ್ಟ ಸಂಸ್ಥೆ ಎಂದು ಹಣೆ ಪಟ್ಟಿ ಕಟ್ಟಿಕೊಂಡು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ ಮತ್ತೆ ಅಂತದೇ ಸುದ್ದಿಗೆ ಗ್ರಾಸವಾಗಿದೆ. ಇಲಾಖೆಯ ಕಾರ್ಯದರ್ಶಿ ಸುಭೋದ್ ಯಾದವ್ ಅವರನ್ನು ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಿರುವುದು ಪ್ರತಿಪಕ್ಷ ಮತ್ತು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.
ಸುಬೋದ್ ಯಾದವ್ ಅವರು ಕಾರ್ಯದರ್ಶಿಯಾಗಿ ಬಂದ ನಂತರ ಕೆಪಿಎಸ್ಸಿಯಲ್ಲಿ ಅನೇಕ ಸುಧಾರಣೆಗಳನ್ನು ತರಲು ಮುಂದಾಗಿದ್ದರು.
ಶೇ. 50 ರಷ್ಟು ಸಿಬ್ಬಂದಿ ವರ್ಗಾವಣೆಗೆ ಶಿಫಾರಸ್ಸು
ಎಲ್ಲರ ಮೇಲೆ ನಿಗಾ ಇಡಲು ಸಿಸಿಟಿವಿ ಅಳವಡಿಕೆ
ಪ್ರವೇಶ ದ್ವಾರದಲ್ಲಿ ತಪಾಸಣೆಗೆ ಭದ್ರತಾ ಸಿಬ್ಬಂದಿ ನೇಮಕ
ಐದು ತಿಂಗಳಲ್ಲಿ ಎಲ್ಲ ಕಡತಗಳ ವಿಲೇವಾರಿ
ಪರೀಕ್ಷಾ ಶುಲ್ಕ ಪಾವತಿಗೆ ಇ -ವ್ಯವಸ್ಥೆ
2017 ರಲ್ಲಿ 12 ಪರೀಕ್ಷೆ ನಡೆಸಲು ಈಗಲೇ ವೇಳಾ ಪಟ್ಟಿ ಸಿದ್ದ
ಸುಭೋದ್ ಯಾದವ್ ಜಾರಿಗೆ ತರಲು ಮುಂದಾಗಿದ್ದ ಈ ಬದಲಾವಣೆಗಳು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಈಗಿನ ಅಧ್ಯಕ್ಷ ಶಾಮ್ ಭಟ್ಟರ ಕೆಂಗಣ್ಣಿಗೆ ಕಾರಣವಾಗಿದೆ. ಅವರ ಲಾಬಿಗೆ ಸರ್ಕಾರ ಸುಬೋದ್ ಯಾದವ್ ಅವರನ್ನು ವರ್ಗಾವಣೆ ಮಾಡಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಸುಬೋಧ್ ಯಾದವ್ ಅವರ ವರ್ಗಾವಣೆಯನ್ನು ಆಪ್ ಮುಖಂಡ ರವಿ ಕೃಷ್ಣಾ ರೆಡ್ಡಿ ಕೂಡ ವಿರೋಧಿಸಿದ್ದಾರೆ.
ಒಟ್ನಲ್ಲಿ ಭ್ರಷ್ಟಾಚಾರ ತಡೆಗಟ್ಟುವುದಾಗಿ ಹೇಳುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟರನ್ನು ಪೋಷಿಸಲು ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸುಬೋದ್ ಯಾದವ್ ಅವರ 15 ವರ್ಷದ ಸೇವಾವಧಿಯಲ್ಲಿ 16 ಬಾರಿ ವರ್ಗಾವಣೆ ಮಾಡಿರೋದು, ಸರ್ಕಾರಿ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ ಎನ್ನುವುದನ್ನು ಎತ್ತಿ ತೋರಿಸುವಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.