7 ಕೇಜಿ ಅಕ್ಕಿ ಕಡಿತ ಮಾಡದಂತೆ ಸಿದ್ದು ಎಚ್ಚರಿಕೆ!

By Web DeskFirst Published Aug 18, 2019, 11:25 AM IST
Highlights

7 ಕೇಜಿ ಅಕ್ಕಿ ಕಡಿತ ಮಾಡದಂತೆ ಸಿದ್ದು ಎಚ್ಚರಿಕೆ| ಇಂದಿರಾ ಕ್ಯಾಂಟೀನ್‌ಗೆ ಅನುದಾನ ಸ್ಥಗಿತಗೊಳಿಸಬೇಡಿ| ಬಡವರ ವಿರೋಧಿ ಕ್ರಮ ಅನುಸರಿಸಿದರೆ ಸರ್ಕಾರದ ವಿರುದ್ಧ ಹೋರಾಟ

ಬೆಂಗಳೂರು[ಆ.18]: ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ನೀಡುತ್ತಿರುವ ಏಳು ಕೆ.ಜಿ. ಅಕ್ಕಿ ಪ್ರಮಾಣ ಕಡಿತಗೊಳಿಸುವುದು ಹಾಗೂ ಇಂದಿರಾ ಕ್ಯಾಂಟೀನ್‌ಗೆ ಅನುದಾನ ಸ್ಥಗಿತಗೊಳಿಸುವಂತಹ ಬಡವರ ವಿರೋಧಿ ಕ್ರಮಗಳನ್ನು ಅನುಸರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಉಗ್ರ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ಇದೀಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅನ್ನಭಾಗ್ಯ ಯೋಜನೆಯ ಅಕ್ಕಿ ಕಡಿತಗೊಳಿಸಲು ಮುಂದಾದರೆ ಬಡವರ ಹೊಟ್ಟೆಮೇಲೆ ಹೊಡೆದಂತಾಗಲಿದೆ. ಯಡಿಯೂರಪ್ಪ ಇಂತಹ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್‌ ಪಕ್ಷದಿಂದ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಅಲ್ಲದೆ, ಸದನದ ಒಳಗೂ ಸರ್ಕಾರದ ಬಡವರ ವಿರೋಧಿ ಕ್ರಮವನ್ನು ಪ್ರತಿಭಟಿಸುತ್ತೇವೆ ಎಂದು ಹೇಳಿದರು.

ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ನಾಲ್ಕು ಕೋಟಿ ಜನರಿಗೆ ಪ್ರತಿಯೊಬ್ಬರಿಗೆ ಮಾಸಿಕ 7 ಕೆ.ಜಿ. ಅಕ್ಕಿ ಉಚಿತವಾಗಿ ನೀಡುತ್ತಿದ್ದೇವೆ. ಇದರಿಂದ ಗುಳೆ ಪದ್ಧತಿ ಕಡಿಮೆಯಾಗಿ ಬಡವರು ಎರಡು ಹೊತ್ತು ಹೊಟ್ಟೆತುಂಬಾ ಊಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಚನೆ ಆದ ಮೇಲೆ ಅನ್ನಭಾಗ್ಯ ಅಕ್ಕಿ ಪ್ರಮಾಣ ಕಡಿತಗೊಳಿಸಲು ಚರ್ಚೆ ನಡೆದಿದೆ ಎಂಬ ಮಾಹಿತಿ ಬಂದಿದೆ. ಈ ಹಣವನ್ನು ಕಿಸಾನ್‌ ಸಮ್ಮಾನ್‌ ಯೋಜನೆಗೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರಿಗೆ 4 ಸಾವಿರ ರು. ನೀಡುವುದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ ಬಡವರ ಅಕ್ಕಿ ಕಡಿತ ಮಾಡಿ ಹಣ ನೀಡುತ್ತೇವೆ ಎಂಬುದು ತಪ್ಪು. ಅಂತಹ ಯೋಚನೆ ಇದ್ದರೆ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಇಂದಿರಾ ಕ್ಯಾಂಟೀನ್‌ ವೆಚ್ಚ ಸರ್ಕಾರವೇ ಭರಿಸಬೇಕು:

ಇದೇ ವೇಳೆ ಇಂದಿರಾ ಕ್ಯಾಂಟೀನ್‌ಗೆ ಹಣ ಬಿಡುಗಡೆ ಮಾಡುವುದಿಲ್ಲ ಎಂಬ ಸರ್ಕಾರದ ನಿರ್ಧಾರವನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ. ಕ್ಯಾಂಟೀನ್‌ ನಿರಂತರವಾಗಿ ನಡೆದು ಗುಣಮಟ್ಟದ ಆಹಾರ ಬಡವರಿಗೆ ಸಿಗಬೇಕಾದರೆ ರಾಜ್ಯ ಸರ್ಕಾರ ಕ್ಯಾಂಟೀನ್‌ ವೆಚ್ಚ ಭರಿಸಬೇಕು. ಬಡವರಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂದು ನಮ್ಮ ಸರ್ಕಾರ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಆದ್ಯತೆಯ ಕಾರ್ಯಕ್ರಮವಾಗಿ ಹಮ್ಮಿಕೊಂಡಿತ್ತು ಎಂದು ಹೇಳಿದರು.

ಬಿಬಿಎಂಪಿ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಕಾಲೇಜು, ಆಸ್ಪತ್ರೆ, ಶಾಲೆಗಳಿರುವ ಸ್ಥಳದಲ್ಲೂ ಇಂದಿರಾ ಕ್ಯಾಂಟೀನ್‌ ಮಾಡಬೇಕು ಎಂದು ನಿರ್ಧರಿಸಿದ್ದೆವು. ಹೀಗಾಗಿ ಜನರಿಗೆ ಉಪಯೋಗವಾಗುವಂತಹ ಯೋಜನೆಗೆ ಹಣ ನಿಲ್ಲಿಸಬಾರದು ಎಂದು ಆಗ್ರಹಿಸಿದರು.

ದೂರವಾಣಿ ಕದ್ದಾಲಿಕೆ ತನಿಖೆಯಾಗಲಿ: ಸಿದ್ದು

ಬೆಂಗಳೂರು: ನನ್ನ ಆಪ್ತ ಸಹಾಯಕನ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ ಮಾಡಿದರು.

ದೂರವಾಣಿ ಕದ್ದಾಲಿಕೆ ಬಗ್ಗೆ ಚರ್ಚೆಗಳು ಆಗುತ್ತಿವೆ. ನಾನು ಹೆಚ್ಚಾಗಿ ಮೊಬೈಲ್‌ ಬಳಸುವುದಿಲ್ಲ. ಆದರೆ, ನನ್ನ ಆಪ್ತ ಸಹಾಯಕರ ಫೋನ್‌ ಕದ್ದಾಲಿಕೆ ಆಗಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ದೂರವಾಣಿ ಕದ್ದಾಲಿಕೆ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

click me!