24 ಗಂಟೆಯಲ್ಲಿ ಭಾರೀ ಮಳೆ : ಎಲ್ಲೆಲ್ಲಿ?

By Web DeskFirst Published Aug 18, 2019, 11:13 AM IST
Highlights

ತಮಿಳುನಾಡಿನಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ದಕ್ಷಿಣ ಒಳನಾಡು ಹಾಗೂ ಮಲೆನಾಡು, ಕರಾವಳಿಯಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಬೆಂಗಳೂರು [ಆ.18]:  ತಮಿಳುನಾಡಿನಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ದಕ್ಷಿಣ ಕರ್ನಾಟಕ ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ಮುಂದಿನ ಎರಡು ಅಥವಾ ಮೂರು ದಿನಗಳ ಕಾಲ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಉಳಿದಂತೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಯಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದ್ದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮುಂಗಾರು ದುರ್ಬಲವಾಗಿದ್ದು, ಉಳಿದಂತೆ ರಾಜ್ಯಾದ್ಯಂತ ಸಾಧಾರಣ ಮಳೆಯಾಗಲಿದೆ. ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಮಾಹಿತಿ ನೀಡಿದೆ.

24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ:  ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಮಳೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 65 ಮಿ.ಮೀ.ನಿಂದ 115 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ನಿನ್ನೆ ಹೆಚ್ಚು ಮಳೆಯಾದ ಪ್ರದೇಶ:  ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿಯ ಕಾರ್ಕಳದಲ್ಲಿ ಅತಿ ಹೆಚ್ಚು 8 ಸೆಂ.ಮೀ. ಮಳೆಯಾದ ವರದಿಯಾಗಿದೆ. ಉಳಿದಂತೆ ಉತ್ತರ ಕನ್ನಡದ ಗೇರುಸೊಪ್ಪ, ಮಂಡ್ಯದ ಬೇಳೂರಿನಲ್ಲಿ ತಲಾ 7, ದಾವಣಗೆರೆಯ ತೆಲಗಿಯಲ್ಲಿ 6, ಉತ್ತರ ಕನ್ನಡದ ಗೋಕರ್ಣ, ಮಂಗಳೂರು, ತುಮಕೂರಿನ ಹುಲಿಯೂರು ದುರ್ಗ, ಶಿವಮೊಗ್ಗದ ಲಿಂಗನಮಕ್ಕಿ, ಆಗುಂಬೆಯಲ್ಲಿ ತಲಾ 5, ಉತ್ತರ ಕನ್ನಡದ ಮಂಕಿ, ದಕ್ಷಿಣ ಕನ್ನಡದ ಪಣಂಬೂರು, ಮೂಡುಬಿದರೆ, ಮಡಿಕೇರಿಯಲ್ಲಿ ತಲಾ 4, ಉತ್ತರ ಕನ್ನಡದ ಹೊನ್ನಾವರ, ದಕ್ಷಿಣ ಕನ್ನಡದ ಸುಬ್ರಮಣ್ಯ, ಉಡುಪಿಯ ಕುಂದಾಪುರ, ಕೋಟಾ, ಉತ್ತರ ಕನ್ನಡದ ಭಟ್ಕಳ, ಶಿರಾಲಿ ಸೇರಿದಂತೆ ಹಲವಡೆ ತಲಾ 3 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!