ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಗರಂ : ಯಾರ ಪರವೂ ಇಲ್ಲ ಎಂದ ಸಚಿವ

By Web DeskFirst Published Oct 21, 2018, 7:59 AM IST
Highlights

ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದರೂ ಕೂಡ ತಾವು ತಮ್ಮ ಹೇಳಿಕೆಗೆ ಬದ್ಧ ಎಂದು ಸಚಿವ ಡಿಕೆಶಿ ಹೇಳಿದ್ದಾರೆ. 

ಬೆಂಗಳೂರು : ಧರ್ಮ ವಿಭಜನೆಗೆ ಕೈಹಾಕಿದ್ದು ತಪ್ಪು ಎಂಬ ಹೇಳಿಕೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರೂ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆಯನ್ನು ಇನ್ನೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ‘ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ನಾನು ಯಾರ ಪರವೂ ಇಲ್ಲ ವಿರುದ್ಧವೂ ಇಲ್ಲ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ಹೇಳಿಕೆ ನೀಡಿದ್ದೇನೆ. ಕ್ಷಮೆ ಕೇಳುವ ಮಾತೇ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಿಜೆಪಿ, ಕಾಂಗ್ರೆಸ್, ಮಠಾಧೀಶರ ಬೆಂಬಲ ಮುಖ್ಯವಲ್ಲ. ಯಾರೋ ಬೆಂಬಲ ನೀಡುತ್ತಾರೆ ಎಂದು  ನಾನು ಹೇಳಿಕೆ ನೀಡಿಲ್ಲ. ಬಹಳ ಸುದೀರ್ಘವಾಗಿ ಯೋಚನೆ ಮಾಡಿ ಹೇಳಿದ್ದೇನೆ.  ಸಂಪ್ರದಾಯ, ಸಂಸ್ಕೃತಿಯಲ್ಲಿ ರಾಜಕಾರಣಿಗಳು ಭಾಗಿಯಾಗಬಾರದು. ಒಕ್ಕಲಿಗರ ಸಂಘದ ವಿಚಾರದಲ್ಲಿ ರಾಜಿ ಮಾಡೋಕೆ ಹೋಗಿದ್ದೆ. ಆದರೆ ಕೊನೆಗೆ ಬೇಡ ಎಂದು ನಾನೇ ಸುಮ್ಮನಾದೆ. ಅದಕ್ಕಾಗಿಯೇ ಹಿರಿಯರು, ಮಠಾಧೀಶರು ಇದ್ದಾರೆ. ಮುಂದೆ ಯಾರೂ ಕೂಡ ಮಧ್ಯಪ್ರವೇಶ ಮಾಡುವುದು ಸರಿಯಲ್ಲ ಎಂದು
ಹೇಳಿದರು. 

ತಮ್ಮ ಹೇಳಿಕೆಗೆ ಮಾತೆ ಮಹಾದೇವಿ ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವ ಸ್ಟಾರ್‌ಗಳು ಬೇಡ. ಪರ, ವಿರೋಧ ಇರುವವರು ಇರುತ್ತಾರೆ. ಆದರೆ ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ. ಯಾರು ಏನು ಬೇಕಾದರೂ ಹೇಳಲಿ. ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

click me!