ಜನರಿಗೆ ನೀರು ಕೊಡುತ್ತೇವೆಂದು ನಾವೆಲ್ಲರೂ ಮಾತು ಕೊಟ್ಟಿದ್ದೇವೆ

By Internet DeskFirst Published Sep 23, 2016, 1:37 PM IST
Highlights

ಬೆಂಗಳೂರು(ಸೆ.23): ರೈತರ ಹಾಗೂ ಜನರ ಹಿತ ಕಾಪಾಡುತ್ತೇವೆಂದು ಸರ್ಕಾರ ಸೇರಿದಂತೆ ನಾವೆಲ್ಲರೂ ಮಾತು ಕೊಟ್ಟಿದ್ದೇವೆ' ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾವೇರಿ ನೀರು ಹಂಚಿಕೆಯ ಬಗ್ಗೆ ವಿಧಾನಸಭೆಯಲ್ಲಿ ನಡೆದ ತುರ್ತು ಅಧಿವೇಶನದಲ್ಲಿ ಮಾತನಾಡಿದ ಅವರು, ಸದನ ತೆಗೆದುಕೊಳ್ಳುವ ನಿರ್ಣಯಕ್ಕೆ ಸರ್ಕಾರ ಬದ್ಧವಾಗಿದೆ. ರೈತರಿಗೆ,ಕುಡಿಯಲು ಒಟ್ಟು 90 ಟಿಎಂಸಿ ಬೇಕು. ಕಳೆದ ಬಾರಿಗಿಂತ ಈ ಬಾರಿ ಮಳೆ ತೀರ ಕಡಿಮೆಯಾಗಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಜಲಾಶಯಗಳಲ್ಲಿ ಒಟ್ಟು 254 ಟಿಎಂಸಿ ನೀರು ಬರಬೇಕಿತ್ತು. ಆದರೆ ಈವರೆಗೂ 4 ಜಲಾಶಯಗಳಿಗೆ 148 ಟಿಎಂಸಿ ನೀರು ಬಂದಿದೆ. ಕಾವೇರಿ ಕೊಳ್ಳದ ರೈತರ ಬೆಳೆಗಳು ನಾಶವಾಗುತ್ತಿವೆ. ಸದ್ಯ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ 27.6 ಟಿಎಂಸಿ ಲಭ್ಯವಿದೆ. ಈ ನೀರು ಇನ್ನೂ ಮೂರು ತಿಂಗಳು ಕುಡಿಯುವ ನೀರಿಗೆ ಬೇಕಾಗುತ್ತದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

Latest Videos

ನಮ್ಮ ರೈತರು ತ್ಯಾಗ ಮಾಡುತ್ತಿದ್ದಾರೆ. ಆದರೆ ತಮಿಳುನಾಡಿನಲ್ಲಿ ಈ ಪರಿಸ್ಥಿತಿ ಇಲ್ಲ. ಮೆಟ್ಟೂರಿನಲ್ಲಿ 52 ಟಿಎಂಸಿ ನೀರು ಸಂಗ್ರಹವಿದೆ. ಜಲ ನೀತಿ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ.ನಂತರ ನೀರಾವರಿಗೆ ಬಳಸಬೇಕು ಎಂದು ಜಲ ನೀತಿ ಹೇಳುತ್ತೆ ಎಂದು ತಿಳಿಸಿದರು.

ನೆಲ, ಜಲ, ಭಾಷೆ ವಿಚಾರದಲ್ಲಿ ಎಂದೂ ನಾವು ಒಂದಾಗುತ್ತೇವೆ. ಈ ವಿಚಾರದಲ್ಲಿ ಎಂದೂ ನಾವು ರಾಜಕೀಯ ಮಾಡಬಾರದು. ಕಾವೇರಿ ವಿಚಾರದಲ್ಲಿ ನಾರಿಮನ್​ ಸಮರ್ಥ ವಾದ ಮಂಡಿಸುತ್ತಿದ್ದಾರೆ. ಕಳೆದ 32 ವರ್ಷಗಳಿಂದ ಕಾವೇರಿ ವಿಚಾರದಲ್ಲಿ ವಾದಿಸುತ್ತಿದ್ದಾರೆ' ಎಂದು ಹೇಳಿದರು.

ಮತ್ತಷ್ಟು ನೀರು ಬಿಡಲು ಸುಪ್ರೀಂಕೋರ್ಟ್​ ಆದೇಶ ನೀಡಿದೆ. ಸುಪ್ರೀಂಕೋರ್ಟ್​ ಆದೇಶ ಪಾಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. ಹೀಗಾಗಿ ವಿಶೇಷ ಅಧಿವೇಶನ ಕರೆದು ಎಲ್ಲರ ಅಭಿಪ್ರಾಯ ಕೇಳಿದ್ದೇವೆ. ಸದನದ ನಿರ್ಣಯದಂತೆ ನಾವು ನಡೆದುಕೊಳ್ಳುತ್ತೇವೆ. ಜನಸೇವೆ ಮಾಡಲು ನಮ್ಮನ್ನು ಆಯ್ಕೆ ಮಾಡಲಾಗಿದೆ. ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಕರ್ತವ್ಯ ಲೋಪ ಮಾಡಿದಂತೆ ಆಗುತ್ತದೆ. ಈ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಪಡೆದಿದ್ದೆ ಜೊತೆಗೆ ಮಾಜಿ ಸಿಎಂ ಎಸ್​​.ಎಂ.ಕೃಷ್ಣ ಸಲಹೆಯನ್ನು ಪಡೆದಿದ್ದೇನೆ' ಎಂದು ತಿಳಿಸಿದರು.

click me!