ಸಿಎಂ ಎಚ್ ಡಿಕೆ ವಿರುದ್ಧ ಸಿದ್ದರಾಮಯ್ಯ ಗರಂ

By Web DeskFirst Published Sep 22, 2018, 7:13 AM IST
Highlights

ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಬೆಂಗಳೂರು :  ‘ಆಪರೇಷನ್‌ ಕಮಲ’ ವಿಚಾರವನ್ನು ಇಟ್ಟುಕೊಂಡು ಬಿಜೆಪಿಗೆ ಡ್ಯಾಮೇಜ್‌ ಮಾಡಬಹುದಿತ್ತು. ಆದರೆ, ನಿಮ್ಮ ದಂಗೆಯೆಬ್ಬಿಸುವ ಹೇಳಿಕೆಯು ಇಂತಹ ಅವಕಾಶ ಕೈಚೆಲ್ಲಿ ಹೋಗುವಂತೆ ಮಾಡಿದೆ. ಬಿಜೆಪಿಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಡಲು ಅಸ್ತ್ರ ದೊರಕಿದೆ. ಇಂತಹ ಹೇಳಿಕೆ ನೀಡುವ ಮುನ್ನ ಎಚ್ಚರ ವಹಿಸಿ.

ಹೀಗೆಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಆಪರೇಷನ್‌ ಕಮಲದ ಭೀತಿಯಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರತೆಯಿಂದ ಕಾಪಾಡಲು ಜಂಟಿ ಕಾರ್ಯತಂತ್ರ ರೂಪಿಸುವ ಸಂಬಂಧ ಖುದ್ದು ಸಿಎಂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ತೆರಳಿದಾಗ ಈ ಕ್ಲಾಸ್‌ ನಡೆದಿದೆ.

ಕಾಂಗ್ರೆಸ್‌ ನಾಯಕರಾದ ದಿನೇಶ್‌ ಗುಂಡೂರಾವ್‌, ಈಶ್ವರ್‌ ಖಂಡ್ರೆ, ಡಿ.ಕೆ.ಶಿವಕುಮಾರ್‌ ಹಾಗೂ ಡಾ.ಜಿ.ಪರಮೇಶ್ವರ್‌ ಮತ್ತು ಕುಮಾರಸ್ವಾಮಿ ಅವರು ಹಾಜರಿದ್ದ ಈ ಸಭೆಯಲ್ಲಿ ತಮ್ಮ ಮಾಸ್ಟರ್‌ಗಿರಿ ತೋರಿದ ಸಿದ್ದರಾಮಯ್ಯ, ‘ನಿಮ್ಮ ದಂಗೆ ಏಳಿ ಎಂಬ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸಾರ್ವಜನಿಕ ವಲಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಡ್ಯಾಮೇಜ್‌ ಉಂಟುಮಾಡಲು ಬಿಜೆಪಿ ಮುಂದಾಗಿದೆ. ಇದರಿಂದಾಗಿ ಆಪರೇಷನ್‌ ಕಮಲದಿಂದ ಬಿಜೆಪಿಗೆ ಉಂಟಾಗಬೇಕಾಗಿದ್ದ ಮುಜುಗರ ತೆರೆಗೆ ಸರಿದಿದೆ. ನಿಮ್ಮ ಹೇಳಿಕೆಯೇ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಆಪರೇಷನ್‌ ಕಮಲ ವಿಚಾರವನ್ನು ಜನತೆಗೆ ತಿಳಿಸಿ ಬಿಜೆಪಿಗೆ ಡ್ಯಾಮೇಜ್‌ ಮಾಡಬಹುದಿತ್ತು ಎಂದರು.

ಅಲ್ಲದೆ, ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು ಇಂತಹ ಹೇಳಿಕೆ ನೀಡಿದರೆ ಅದನ್ನು ರಾಜ್ಯಪಾಲರು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬಹುದು. ಇದರ ಆಧಾರದ ಮೇಲೆ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ರಕ್ಷಣೆಯಿಲ್ಲ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸಬಹುದು. ಇದು ಸರ್ಕಾರಕ್ಕೆ ಅತ್ಯಂತ ಮುಜುಗರ ತರುವ ಸಾಧ್ಯತೆಯಿದೆ. ನಮ್ಮ ಹೇಳಿಕೆಗಳು ನಮಗೆ ಬೂಮ್‌ರಾಂಗ್‌ ಆಗದಂತೆ ಇರಬೇಕು ಎಂದು ತಿಳಿಹೇಳಿದರು ಎನ್ನಲಾಗಿದೆ.

ಆಪರೇಷನ್‌ ಕಮಲ ವಿಚಾರದಲ್ಲಿ ನೀವು ಇಷ್ಟೊಂದು ಆತಂಕಪಡುವ ಅಗತ್ಯವಿರಲಿಲ್ಲ. ಆಪರೇಷನ್‌ ಕಮಲದ ಬಗ್ಗೆ ತುಂಬಾ ಆತಂಕ ಉಂಟಾಗಿದ್ದರಿಂದಲೇ ನೀವು ಈ ರೀತಿಯ ಹೇಳಿಕೆ ನೀಡಿದ್ದೀರಿ. ಬಿಜೆಪಿಗೆ ಸರ್ಕಾರ ರಚಿಸಲು ಬೇಕಾದಷ್ಟುಶಾಸಕರು ಕಾಂಗ್ರೆಸ್‌ನಿಂದ ಹೋಗುವುದಿಲ್ಲ. ಈ ಬಗ್ಗೆ ಅನಗತ್ಯವಾಗಿ ಆತಂಕ ಪಟ್ಟು ತೊಂದರೆಗೆ ಸಿಲುಕಿಕೊಳ್ಳಬಾರದು. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಎಲ್ಲವನ್ನೂ ಒಟ್ಟಾಗಿದ್ದು ಮಾಡೋಣ ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ಸಿಗರಿಗೂ ಪಾಠ:

ಇದೇ ವೇಳೆ ಯಡಿಯೂರಪ್ಪ ಅವರ ನಿವಾಸದ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೂ ತರಾಟೆ ತೆಗೆದುಕೊಂಡರು ಎನ್ನಲಾಗಿದೆ.

ಪ್ರತಿಪಕ್ಷ ನಾಯಕನ ಮನೆ ಮುಂದೆ ಯಾರಾದರೂ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಳುಹಿಸಿ ಮುತ್ತಿಗೆ ಹಾಕಿಸುತ್ತಾರಾ? ಅವರು ಬರೀ ಯಡಿಯೂರಪ್ಪ ಅಲ್ಲ. ಮಾಜಿ ಮುಖ್ಯಮಂತ್ರಿ ಅಷ್ಟೇ ಅಲ್ಲ. ಹಾಲಿ ವಿಪಕ್ಷ ನಾಯಕ ಎನ್ನುವ ಪರಿಜ್ಞಾನ ಇರಬೇಕಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಜತೆಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರಿಗೂ ಬುದ್ಧಿವಾದ ಹೇಳಿದ ಅವರು, ಪ್ರತಿಪಕ್ಷ ನಾಯಕರ ಮನೆ ಮುಂದೆ ಒಬ್ಬ ಪೊಲೀಸ್‌ ಕೂಡ ಇರಬಾರದೇನ್ರಿ? ಒಬ್ಬ ಪೊಲೀಸ್‌ ಕೂಡ ಇರಲಿಲ್ಲ ಎಂದು ಬಿಜೆಪಿಯವರು ದೂರುತ್ತಿದ್ದಾರೆ. ಹೀಗಾದರೆ ಆಡಳಿತ ಮಾಡುವವರಿಗೆ ಒಳ್ಳೆಯ ಹೆಸರು ಬರುತ್ತದೆಯೇ ಎಂದು ಪ್ರಶ್ನಿಸಿದರು.

ಜಿಲ್ಲಾ ರಾಜಕಾರಣಕ್ಕೆ ಕಾಲಿಡದಂತೆ ಶಿವಕುಮಾರ್‌ಗೆ ಸಲಹೆ:

ಇದಕ್ಕೂ ಮೊದಲು ತಮ್ಮ ನಿವಾಸಕ್ಕೆ ಭೇಟಿ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸಿದ್ದರಾಮಯ್ಯ ರಾಜಕೀಯ ಬುದ್ಧಿವಾದ ಹೇಳಿದರು. ಅನಗತ್ಯವಾಗಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿ ವಿವಾದ ಸೃಷ್ಟಿಮಾಡಿದ್ದಕ್ಕಾಗಿ ಬೇಸರ ವ್ಯಕ್ತಪಡಿಸಿದ ಅವರು, ನೀವಿರುವ ಮಟ್ಟಕ್ಕೆ ಬೆಳಗಾವಿ ರಾಜಕಾರಣವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವಿರಲಿಲ್ಲ ಎಂದರು ಎನ್ನಲಾಗಿದೆ.

ರಾಜ್ಯಮಟ್ಟದ ರಾಜಕಾರಣದ ಬಗ್ಗೆ ಗಮನ ನೀಡಿ. ಜಿಲ್ಲಾ ಮಟ್ಟದ ರಾಜಕಾರಣವನ್ನು ಹತೋಟಿಗೆ ತೆಗೆದುಕೊಳ್ಳಲು ಹೋದರೆ ವಿರೋಧ ಎದುರಿಸಬೇಕಾಗಿ ಬರುತ್ತದೆ. ಜಾರಕಿಹೊಳಿ ಸಹೋದರರ ವಿಚಾರದಲ್ಲಿ ನೀವು ನಡೆದುಕೊಂಡ ರೀತಿ ಹಾಗೂ ನೀಡಿದ ಹೇಳಿಕೆಗಳಿಂದ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಹೈಕಮಾಂಡ್‌ ಸಮ್ಮಿಶ್ರ ಸರ್ಕಾರ ಉಳಿಸುವ ಮಾತು ಕೊಟ್ಟಿದೆ. ಇದೀಗ ನಮ್ಮ ನಾಯಕರಲ್ಲೇ ಭಿನ್ನಾಭಿಪ್ರಾಯ ಮೂಡಿ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದರು ಎನ್ನಲಾಗಿದೆ.

click me!
Last Updated Sep 22, 2018, 7:13 AM IST
click me!