ಎಚ್ ಡಿಕೆ, ಸಿದ್ದರಾಮಯ್ಯ ನಡುವೆ ಮತ್ತೆ ತಿಕ್ಕಾಟ

By Web DeskFirst Published Sep 1, 2018, 10:44 AM IST
Highlights

ಸಮನ್ವಯ ಸಮಿತಿಗೆ ವಿಶ್ವನಾಥ್‌ ಸೇರ್ಪಡೆ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಕುರಿತಂತೆ ಸಿದ್ದರಾಮಯ್ಯ ಅವರು ಪಟ್ಟು ಹಿಡಿದು ತಮ್ಮ ಮಾತು ನಡೆಯುವಂತೆ ನೋಡಿಕೊಂಡಿದ್ದರೆ, ಕುಮಾರಸ್ವಾಮಿ ಅವರು ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನಿರ್ಧಾರದ ಅನಂತರವೇ ಮುಂದಿನ ಹೆಜ್ಜೆ ಇಡಬೇಕು ಎಂಬ ನಿಲುವಿಗೆ ಕಟ್ಟುಬಿದ್ದಿದ್ದು, ಇಬ್ಬರ ನಡುವೆ ಮತ್ತೊಮ್ಮೆ ತಿಕ್ಕಾಟ ನಡೆಯಲು ಕಾರಣವಾಯಿತು. 

ಬೆಂಗಳೂರು :  ಸಮನ್ವಯ ಸಮಿತಿಯ ಮೂರನೇ ಸಭೆಯಲ್ಲಿ ಉಭಯ ಪಕ್ಷಗಳ ನಾಯಕರ ನಡುವಿನ ಚರ್ಚೆ ಬಹುತೇಕ ಸಾವಧಾನದಿಂದ ನಡೆದಿದ್ದರೂ, ಕೆಲ ಪ್ರಮುಖ ವಿಚಾರಗಳ ಬಗ್ಗೆ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಮಾತೇ ನಡೆಯಬೇಕು ಎಂದು ಪಟ್ಟು ಹಿಡಿದು ಸಾಧಿಸಿಕೊಂಡರು ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಸಿದ್ದರಾಮಯ್ಯ ಅವರ ಬೇಡಿಕೆಗಳೇ ಹೆಚ್ಚು ಈಡೇರಿದವು ಎನ್ನಲಾಗಿದೆ.

ಸಮನ್ವಯ ಸಮಿತಿಗೆ ವಿಶ್ವನಾಥ್‌ ಸೇರ್ಪಡೆ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಕುರಿತಂತೆ ಸಿದ್ದರಾಮಯ್ಯ ಅವರು ಪಟ್ಟು ಹಿಡಿದು ತಮ್ಮ ಮಾತು ನಡೆಯುವಂತೆ ನೋಡಿಕೊಂಡಿದ್ದರೆ, ಕುಮಾರಸ್ವಾಮಿ ಅವರು ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನಿರ್ಧಾರದ ಅನಂತರವೇ ಮುಂದಿನ ಹೆಜ್ಜೆ ಇಡಬೇಕು ಎಂಬ ನಿಲುವಿಗೆ ಕಟ್ಟುಬಿದ್ದು ಅದಕ್ಕೆ ಸಭೆ ಒಪ್ಪುವಂತೆ ನೋಡಿಕೊಂಡರು ಎಂದು ತಿಳಿದುಬಂದಿದೆ.

ಆದರೆ, ಅತ್ಯಂತ ಪ್ರಮುಖ ವಿಚಾರವೆನಿಸಿದ ಅಧಿಕಾರಿಗಳ ​​- ಪ್ರಮುಖವಾಗಿ ಐಎಎಸ್‌ ಹಾಗೂ ಐಪಿಎಸ್‌ - ವರ್ಗಾವಣೆ ವಿಚಾರ ಮಾತ್ರ ಸ್ಪಷ್ಟವಾಗಿ ಇತ್ಯರ್ಥವಾದಂತೆ ಕಂಡು ಬಂದಿಲ್ಲ. ಈ ಹುದ್ದೆಗಳ ವರ್ಗಾವಣೆ ವೇಳೆ ಇಲಾಖೆಯ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರ ವಾದವಾಗಿತ್ತು. ಆದರೆ, ಐಎಎಸ್‌ ಹಾಗೂ ಐಪಿಎಸ್‌ ವರ್ಗಾವಣೆ ಮುಖ್ಯಮಂತ್ರಿ ವಿವೇಚನೆಗೆ ಸೇರಿದ್ದು. ಇದು ಸಂಪ್ರದಾಯ. ಈ ಸಂಪ್ರದಾಯವನ್ನು ಮುರಿಯಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಪಟ್ಟು ಹಿಡಿದರು ಎನ್ನಲಾಗಿದೆ.

ಈ ವಿಚಾರವಾಗಿ ಸಭೆಯಲ್ಲಿ ತುಸು ಕಾವೇರಿದ ಚರ್ಚೆಯೂ ನಡೆದಿದೆ. ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಸಂಪ್ರದಾಯಗಳು ಇಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಎಂದು ಪಟ್ಟು ಹಿಡಿಯಲು ಸಾಧ್ಯವಿಲ್ಲ. ಇಲಾಖೆಯ ಸಚಿವರಿಗೆ ವರ್ಗಾವಣೆ ವಿಚಾರದಲ್ಲಿ ಸ್ವಾತಂತ್ರ್ಯವಿಲ್ಲದಿದ್ದರೆ ಇಲಾಖೆಯು ಹಿಡಿತಕ್ಕೆ ದೊರೆಯುವುದಿಲ್ಲ. ಹೀಗಾಗಿ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ವರ್ಗಾವಣೆ ನಡೆಸಬೇಕು ಎಂಬುದು ಕಾಂಗ್ರೆಸ್‌ ನಾಯಕರ ವಾದವಾಗಿತ್ತು. ಇದನ್ನು ಸಂಪೂರ್ಣವಾಗಿ ಒಪ್ಪದ ಕುಮಾರಸ್ವಾಮಿ, ಆಯ್ತು ನೋಡೋಣ ಎಂದು ಅಡ್ಡಗೋಡೆ ಮೇಲೆ ದೀಪವಿಡುವ ಮೂಲಕ ವಿಷಯಕ್ಕೆ ತೆರೆ ಎಳೆದರು ಎಂದು ಮೂಲಗಳು ತಿಳಿಸಿವೆ.

ವಿಶ್ವನಾಥ್‌ ಸೇರ್ಪಡೆಗೆ ವಿರೋಧ:

ಅಧಿಕಾರಿಗಳ ವರ್ಗಾವಣೆ ಬಳಿಕ ಸಭೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸದ ವಿಚಾರ ವಿಶ್ವನಾಥ್‌ ಅವರನ್ನು ಸಮಿತಿಗೆ ಸೇರ್ಪಡೆ ಮಾಡುವುದು. ಜೆಡಿಎಸ್‌ನ ಡ್ಯಾನಿಶ್‌ ಅಲಿ ಅವರು ಜೆಡಿಎಸ್‌ ಅಧ್ಯಕ್ಷ ವಿಶ್ವನಾಥ್‌ ಅವರನ್ನು ಸಮಿತಿಗೆ ಸೇರ್ಪಡೆ ಮಾಡಬೇಕು ಎಂದು ಕೋರಿದ್ದಾರೆ. ಆಗ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಸ್ಪಷ್ಟವಾಗಿ ನಿರಾಕರಿಸಿದ್ದು, ಸಮನ್ವಯ ಸಮಿತಿಯ ಸ್ವರೂಪವನ್ನು ಬದಲಾಯಿಸುವುದು ಬೇಡ. ಇದಕ್ಕೆ ಯಾವುದೇ ಹೊಸ ಸದಸ್ಯರ ನೇಮಕವನ್ನು ಒಪ್ಪುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದರು ಎನ್ನಲಾಗಿದೆ. ಕಾಂಗ್ರೆಸ್‌ ನಾಯಕರು ಪೂರ್ವ ನಿರ್ಧಾರ ಮಾಡಿದಂತೆ ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ತಮ್ಮ ನಿಲುವು ವ್ಯಕ್ತಪಡಿಸಿದ ನಂತರ ಈ ವಿಚಾರವನ್ನು ಅಲ್ಲಿಗೆ ಕೈ ಬಿಡಲಾಯಿತು ಎಂದು ಮೂಲಗಳು ಹೇಳಿವೆ.

ಇದೇ ರೀತಿ ಅನ್ನಭಾಗ್ಯ ಯೋಜನೆಯ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಅಕ್ಕಿ ಪ್ರಮಾಣ ಇಳಿಯಬಾರದು. ಸಾಲ ಮನ್ನಾ ಯೋಜನೆಯ ಹೊರೆಯಿಂದಾಗಿ ಅಕ್ಕಿ ಪ್ರಮಾಣ ಕಡಿಮೆ ಮಾಡಲಾಗುತ್ತಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಎರಡು ಕೆ.ಜಿ. ಅಕ್ಕಿ ಹೆಚ್ಚುವರಿಯಾಗಿ ನೀಡುವುದು ಸರ್ಕಾರಕ್ಕೆ ದೊಡ್ಡ ಹೊರೆಯೇನೂ ಅಲ್ಲ ಎಂದು ಪಟ್ಟು ಹಿಡಿದಾಗ, ಕುಮಾರಸ್ವಾಮಿ ಅವರು ಅಕ್ಕಿ ಪ್ರಮಾಣದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

ಇನ್ನು ಬಡ್ತಿ ಮೀಸಲಾತಿ ಜಾರಿಗೊಳಿಸುವಂತೆ ಸಿದ್ದರಾಮಯ್ಯ ಕೋರಿದಾಗ ಕುಮಾರಸ್ವಾಮಿ ಸುತರಾಂ ಒಪ್ಪಿಲ್ಲ. ಶೀಘ್ರವೇ ಸುಪ್ರೀಂಕೋರ್ಟ್‌ನಲ್ಲಿ ಈ ವಿಚಾರದ ಬಗ್ಗೆ ತೀರ್ಪು ಬರಲಿದೆ. ಒಂದು ವೇಳೆ ನಾವು ಬಡ್ತಿ ಮೀಸಲಾತಿ ನೀತಿ ಜಾರಿಗೊಳಿಸಿ ಸುಪ್ರೀಂಕೋರ್ಟ್‌ ತೀರ್ಪು ನಮ್ಮ ನಿಲುವಿನ ವಿರುದ್ಧವಾದರೆ ಮುಖಭಂಗವಾಗುತ್ತದೆ. ಹೀಗಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೋಡಿಕೊಂಡು ಅನಂತರ ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ವಾದಿಸಿದಾಗ ಸಭೆ ಇದಕ್ಕೆ ಒಪ್ಪಿಗೆ ನೀಡಿತು ಎಂದು ಮೂಲಗಳು ಹೇಳಿವೆ.

click me!