ಇಂದಿನಿಂದ ಸಿದ್ದರಾಮಯ್ಯ ವಿದೇಶ ಪ್ರವಾಸ

By Web DeskFirst Published Sep 3, 2018, 10:04 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಷ್ಯಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಕಾಟ್ಲೆಂಡ್ ದೇಶಗಳಿಗೆ ಪ್ರವಾಸ ಹೊರಟಿದ್ದಾರೆ. ಅವರೊಂದಿಗೆ ಪುತ್ರ ಯತೀಂದ್ರ, ವಿಧಾನಪರಿಷತ್ ಸದಸ್ಯ ಗೋವಿಂದ ರಾಜ್ ಮತ್ತು ಅವರ ಮಗ ತೆರಳುತ್ತಿದ್ದಾರೆ. 

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿದೇಶ ಪ್ರವಾಸ ಸೋಮವಾರದಿಂದ ಆರಂಭವಾಗಲಿದೆ.

 ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆ ಕುರಿತ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ರಷ್ಯಾ, ಯುರೋಪ್ ರಾಷ್ಟ್ರಗಳತ್ತ ಪ್ರವಾಸ ಹೊರಡುವುದಾಗಿ ತಿಳಿಸಿದರು.

ರಷ್ಯಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಕಾಟ್ಲೆಂಡ್ ದೇಶಗಳಿಗೆ ಪ್ರವಾಸ ಹೊರಟಿದ್ದೇವೆ. ಪುತ್ರ ಯತೀಂದ್ರ, ವಿಧಾನಪರಿಷತ್ ಸದಸ್ಯ ಗೋವಿಂದ ರಾಜ್ ಮತ್ತು ಅವರ ಮಗ ತನ್ನೊಂದಿಗೆ ಬರಲಿದ್ದಾರೆ. ಪಕ್ಷದ ಇತರ ಶಾಸಕರು ಪ್ರವಾಸಕ್ಕೆ ಬರುತ್ತಾರೆ ಅನ್ನುವುದು ಸುಳ್ಳು. ಮಾಧ್ಯಮಗಳೇ ಸುಳ್ಳು ಸುದ್ದಿ ಮಾಡಿವೆ. ಸೆ.15ಕ್ಕೆ ಪ್ರವಾಸದಿಂದ ವಾಪಸ್ ಬರುತ್ತೇವೆ ಎಂದು ಹೇಳಿದರು. 

ಬೆಳಗಾವಿ ಕಾಂಗ್ರೆಸ್ ನಾಯಕರ ಸಂಘರ್ಷದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಪ್ರವಾಸದಿಂದ ಬಂದ ನಂತರ ಈ ಕುರಿತು ಚರ್ಚೆ ನಡೆಸುತ್ತೇನೆ. ಅಲ್ಲಿವರೆಯೂ ಯಾವುದೇ ಸಮಸ್ಯೆ ಮಾಡಿಕೊಳ್ಳದಂತೆ ಸೂಚಿಸಿದ್ದೇನೆ. ವಿದೇಶದಿಂದ ವಾಪಸ್ ಆದ ಬಳಿಕ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಈ ಕುರಿತು ಈಗಾಗಲೇ ತೀರ್ಮಾನವಾಗಿದೆ ಎಂದು ತಿಳಿಸಿದರು. 

ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರ ವಿದೇಶ ಪ್ರವಾಸ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್‌ನ ಕೆಲವು ಶಾಸಕರ ತಂಡ ಪ್ರತ್ಯೇಕವಾಗಿ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ನಂತರ ಒಂದೆಡೆ ಸಭೆ ಸೇರಲಿದೆ.

ಈ ಮೂಲಕ ವಿದೇಶದಲ್ಲಿ ಇದ್ದುಕೊಂಡೇ ಸಿದ್ದರಾಮಯ್ಯ ಅವರು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಸಿದ್ದರಾಮಯ್ಯ ಅವರು, ಕೇವಲ ಪ್ರವಾಸಕ್ಕಾಗಿ ಹೋಗುತ್ತಿದ್ದು, ಯಾವುದೇ ರಾಜಕೀಯಕ್ಕಲ್ಲ ಎಂದಿದ್ದಾರೆ.  

click me!