
ಬೆಳಗಾವಿ (ಏ.28): ಪಾಕಿಸ್ತಾನದ ಜೊತೆ ಯುದ್ಧ ಬೇಡ ಎನ್ನುವ ಹೇಳಿಕೆ ನೀಡಿ ಪಾಕ್ ಮಾಧ್ಯಮಗಳಲ್ಲೂ ಸುದ್ದಿಯಾಗಿರುವ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಾರ್ವಜನಿಕವಾಗಿ ತಮ್ಮ ಕೋಪ ತೋರಿಸಿಕೊಂಡಿದ್ದಾರೆ. ಈ ಬಾರಿ ಅವರು ಪೊಲೀಸ್ ಅಧಿಕಾರಿಯೊಬ್ಬರಿಗೆ ಸಾರ್ವಜನಿಕವಾಗಿ ವೇದಿಕೆ ಮೇಲೆಯೇ ಕೆನ್ನೆಗೆ ಬಾರಿಸಲು ಕೈ ಎತ್ತಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಸಿಪಿಎಡ್ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆಯೇ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗಿದೆ. ಕಪ್ಪು ಬಟ್ಟೆ ಹಿಡಿದು ವೇದಿಕೆಯತ್ತ ನುಗ್ಗಲು ಬಿಜೆಪಿ ಮಹಿಳಾ ಕಾರ್ಯಕರ್ತರು ಯತ್ನಿಸಿದ್ದಾರೆ. ಕಪ್ಪು ಬಟ್ಟೆ ಪ್ರದರ್ಶಿಸಿ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗಿತ್ತು.
ಮಹಿಳಾ ಕಾರ್ಯಕರ್ತೆಯರು ಘೋಷಣೆ ಕೂಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಗೊಂದಲ ಏರ್ಪಟ್ಟಿತ್ತು. ಈ ವೇಳೆ ಸಿಎಂ ಕೆಲಹೊತ್ತು ಭಾಷಣ ಸ್ಥಗಿತಗೊಳಿಸಿದ್ದರು. ಪೊಲೀಸರನ್ನು ವೇದಿಕೆಗೆ ಕರೆಯಿಸಿ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದು ಮಾತ್ರವಲ್ಲದೆ, ಹೆಚ್ಚುವರಿ ಎಸ್ಪಿ ನಾರಾಯಣ ಬರಮನಿ ಮೇಲೆ ಸಿಎಂ ಕೈ ಮಾಡಲು ಮುಂದಾಗಿದ್ದಾರೆ.
ಅದಲ್ಲದೆ, ಯಾರು ರೀ ಬೆಳಗಾವಿ ಎಸ್ಪಿ ಎಂದು ಏರು ದನಿಯಲ್ಲೇ ವೇದಿಕೆಯಲ್ಲೇ ಆವಾಜ್ ಹಾಕಿದ್ದಾರೆ. ಆಗ ವೇದಿಕೆ ಮೇಲಿದ್ದ ಆಯೋಜಕರು ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಸರ್ಕಾರದ ಪರ ಘೋಷಣೆ ಕೂಗಿದ್ದಾರೆ. ಪ್ರತಿಭಟನಾನಿರತರನ್ನು ಪೊಲೀಸರು ಬಳಿಕ ವಶಕ್ಕೆ ಪಡೆದುಕೊಂಡಿದ್ದಾರೆ.
ಸಮಾವೇಶದ ಭದ್ರತೆಗಾಗಿ ಬೇರೆ ಬೇರೆ ಜಿಲ್ಲೆಯ ಪೊಲೀಸರ ನಿಯೋಜನೆ ಆಗಿದೆ. ಈ ವೇಳೆ ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಬರಮನಿ ವಿರುದ್ಧ ಸಿಎಂ ಗರಂ ಆಗಿದ್ದಾರೆ. ವೇದಿಕೆಯ ಕರ್ತವ್ಯಕ್ಕೆ ನಾರಾಯಣ ಬರಮನಿ ನಿಯೋಜನೆಗೊಂಡಿದ್ದರು. ವೇದಿಕೆ ಹಿಂಭಾಗದಲ್ಲಿ ಡಿಸಿಪಿ ರೋಹನ್ ಜಗದೀಶ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಪೊಲೀಸರ ಸರ್ಪಗಾವಲು ದಾಟಿ ಬಂದು ಬಿಜೆಪಿ ಕಾರ್ಯಕರ್ತೆ ಶಿಲ್ಪಾ ಕೇಕರೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದರು.
ಸಿದ್ದರಾಮಯ್ಯ ಗೋ ಗೋ ಪಾಕಿಸ್ತಾನ: ಬೆಳಗಾವಿಯಲ್ಲಿ ಸಿಎಂ ಭಾಷಣದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ ಮಾಡುವ ವೇಳೆ, ಸಿದ್ದರಾಮಯ್ಯ ಗೋ ಗೋ ಪಾಕಿಸ್ತಾನ ಎಂದು ಘೋಷಣೆ ಕೂಗಲಾಗಿತ್ತು. ವಶಕ್ಕೆ ಪಡೆದ ಬಿಜೆಪಿ ಮಹಿಳಾ ಕಾರ್ಯಕರ್ತೆ ಶಿಲ್ಪಾ ಈ ಘೋಷಣೆ ಕೂಗಿದ್ದರು. ಪೆಹಲ್ಗಾಮ್ ಪ್ರಕರಣ ಬಗ್ಗೆ ಸಿಎಂ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು.
ಸಿದ್ಧರಾಮಯ್ಯ 'ಯುದ್ಧ ಬೇಡ' ಹೇಳಿಕೆ ಪಾಕಿಸ್ತಾನದಲ್ಲಿ ಟ್ರೆಂಡ್; ನಾನು ಹೇಳಿದ್ದು ಹಂಗಲ್ಲ ಎಂದ ಸಿಎಂ!
ಡಿಸಿಪಿಗೆ ಕ್ಲಾಸ್ ತೆಗೆದುಕೊಂಡ ಸಚಿವೆ: ಪ್ರಕರಣ ಸಂಬಂಧ ಡಿಸಿಪಿ ರೋಹನ್ ಜಗದೀಶ್ ಅವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ವೇದಿಕೆಯಿಂದ ಕೆಳಗಿಳಿದು ಬಂದು ಡಿಸಿಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡರು. ನಮ್ಮ ಸಮಾವೇಶದ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರನ್ನು ಹೇಗೆ ಬಿಟ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಸಚಿವೆ ಹೆಬ್ಬಾಳ್ಕರ್ ಅವಾಜ್‌ಗೆ ಡಿಸಿಪಿ ರೋಹನ್ ಜಗದೀಶ್ ಗಲಿಬಿಲಿಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.