'ಬಿಜೆಪಿ ಅವಧಿಯ ಯೋಜನೆ ಬಗ್ಗೆಯೂ ತನಿಖೆಯಾಗಲಿ'

By Web DeskFirst Published Sep 17, 2019, 8:37 AM IST
Highlights

ಬಿಜೆಪಿ ಅವಧಿಯ ಯೋಜನೆ ಬಗ್ಗೆಯೂ ತನಿಖೆಯಾಗಲಿ| ಭ್ರಷ್ಟಾಚಾರ, ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ ಯೋಜನೆಗಳ ತನಿಖೆ: ದಿನೇಶ್‌

ಬೆಂಗಳೂರು[ಸೆ.17]: ರಾಜ್ಯ ಸರ್ಕಾರವು ತನ್ನ ಭ್ರಷ್ಟಾಚಾರ ಹಾಗೂ ವೈಫಲ್ಯ ಮರೆಮಾಚಿಕೊಳ್ಳಲು ಕಾಂಗ್ರೆಸ್‌ ಅವಧಿಯ ಕಾರ್ಯಕ್ರಮಗಳ ತನಿಖೆಗೆ ಆದೇಶಿಸಿದೆ. ರಾಜಕೀಯ ದ್ವೇಷದಿಂದ ಎಷ್ಟಾದರೂ ತನಿಖೆ ಮಾಡಿಕೊಳ್ಳಲಿ. ಇದೇ ವೇಳೆ ಬಿಜೆಪಿ ಅವಧಿಯ ಬಗ್ಗೆಯೂ ತನಿಖೆಯಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಸೂಚಿಸಿದಂತೆ ರಾಜ್ಯ ಬಿಜೆಪಿ ನಾಯಕರು ನಡೆದುಕೊಳ್ಳುತ್ತಿದ್ದಾರೆ. ರಾಜಕೀಯ ದ್ವೇಷದ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರದ ಅವಧಿಯ ಕಾರ್ಯಕ್ರಮಗಳನ್ನು ತನಿಖೆಗೆ ವಹಿಸಲಾಗುತ್ತಿದೆ. ಬೆಂಗಳೂರು ವಿಚಾರವಾಗಲಿ, ನೀರಾವರಿ ಯೋಜನೆ ವಿಚಾರವಾಗಲಿ ಯಾವುದೇ ಕಾರ್ಯಕ್ರಮಗಳ ಬಗ್ಗೆಯಾದರೂ ತನಿಖೆ ಮಾಡಿಕೊಳ್ಳಲಿ ನಮ್ಮ ಆಕ್ಷೇಪವಿಲ್ಲ. ಇದೇ ವೇಳೆ ಬಿಜೆಪಿ ಅವಧಿಯ ಕಾರ್ಯಕ್ರಮಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ವರ್ಗಾವಣೆ ದಂಧೆಯಲ್ಲಿ ಸರ್ಕಾರ ತಲ್ಲೀನವಾಗಿದೆ. ಬಿ.ಎಸ್‌. ಯಡಿಯೂರಪ್ಪ ವಿಧಾನಸಭೆಯಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಪ್ರಸ್ತುತ ಬರೀ ದ್ವೇಷದ ರಾಜಕಾರಣ ಹಾಗೂ ವರ್ಗಾವಣೆ ದಂಧೆ ಬಿಟ್ಟು ಬೇರೇನೂ ಮಾಡುತ್ತಿಲ್ಲ.

ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚಿಸಲು ನೂರಾರು ಕೋಟಿ ರು. ಖರ್ಚು ಮಾಡಿದ್ದಾರೆ. ಶಾಸಕರನ್ನು ಖರೀದಿಸಲು ಹಣ ಸುರಿದಿದ್ದಾರೆ. ಹೀಗಾಗಿಯೇ ವರ್ಗಾವಣೆ ದಂಧೆಗೆ ಕೈ ಹಾಕಿದ್ದಾರೆ. ಮೊದಲ ದಿನದಿಂದಲೂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಶಾಸಕರಿಗೆ ಖರ್ಚು ಮಾಡಿರುವ ಹಣ ಶೇಖರಣೆಯಲ್ಲಿ ತೊಡಗಿರುವುದರಿಂದ ರಾಜ್ಯ ಸರ್ಕಾರ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡುತ್ತಿಲ್ಲ. ಸಮ್ಮಿಶ್ರ ಸರ್ಕಾರ ಟೇಕಾಫ್‌ ಆಗಿಲ್ಲ ಎನ್ನುತ್ತಿದ್ದರು. ಈ ಸರ್ಕಾರದ ಇಂಜಿನ್‌ ಸಹ ಚಾಲೂ ಆಗಿಲ್ಲ ಎಂದು ಕಿಡಿ ಕಾರಿದರು.

ರಾಜ್ಯ ಸರ್ಕಾರ ನೆರೆ ನಿರ್ವಹಣೆ ವಿಚಾರದಲ್ಲಿ ವಿಫಲವಾಗಿದೆ. ಇದರ ಬಗ್ಗೆ ಜನರ ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನಯಾಪೈಸೆ ಪರಿಹಾರ ಹಣ ನೀಡಿಲ್ಲ. ಇಂತಹ ವೇಳೆಯಲ್ಲಿ ನೆರೆ ಪರಿಹಾರ ಕೇಳುವುದನ್ನು ಬಿಟ್ಟು ಮತ್ತಿನ್ನೇನೋ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

click me!