
ಬೆಂಗಳೂರು(ಜೂ.11): ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಅಂದರೆ ಜನ ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗೆ ರಿವಾಲ್ವಾರ್, ಮಚ್ಚು, ಲಾಂಗುಗಳು ಸದ್ದು ಮಾಡೋಕೆ ಶುರುಮಾಡಿವೆ. ಬೈಕ್ ಡಿಲಿವರಿ ತಡ ಆಯ್ತು ಅನ್ನೋ ಕಾರಣಕ್ಕೆ ಮಾಜಿ ಸೈನಿಕನೊಬ್ಬ, ಶೋರೂಂ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮಾಜಿ ಸೈನಿಕ ಅಂದರೆ ನಮ್ಮ ಸಮಾಜದಲ್ಲಿ ವಿಶೇಷ ಗೌರವ ಇದೆ. ಆದರೆ ಇಂಥಹ ಸೈನಿಕರೊಬ್ಬರು ದುಡುಕಿ ಒಂದು ಪ್ರಾಣಕ್ಕೆ ಕುತ್ತು ತರಲು ಹೊರಟಿದ್ದರು. ನಿನ್ನೆ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಬುಕ್ ಮಾಡಿದ್ದ ಬೈಕ್ ಕೊಡಲು ವಿಳಂಬವಾಯಿತು ಎನ್ನುವ ಕಾರಣಕ್ಕೆ, ಮಾಜಿ ಸೈನಿಕ ಜಗದೀಶ್ ಶೋರೂಂ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಜಗದೀಶ್ 106 ಪ್ಯಾರಾಚೂಟ್ ರೆಜಿಮೆಂಟ್'ನಲ್ಲಿ ಯೋಧರಾಗಿದ್ದರು. 2016ರಲ್ಲಿ ಸ್ವಯಂ ನಿವೃತ್ತಿ ಪಡೆದು, ಬಳಿಕ ಕನ್ನಿಂಗ್ ಹ್ಯಾಮ್ ರಸ್ತೆಯ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ್ 31 ರಂದು ಸ್ಯಾಟಲೈಟ್ ಮೋಟರ್ಸ್ ನಲ್ಲಿ, ಹೋಂಡಾ ಲಿವಾ ಬೈಕ್ ಬುಕ್ ಮಾಡಿದ್ದ ಜಗದೀಶ್'ಗೆ, ನಿನ್ನೆ ಬೈಕ್ ಡಿಲಿವರಿಯಾಗಬೇಕಿತ್ತು. ಆದರೆ ಕೆಲ ಕಾರಣಗಳಿಂದ ಡಿಲಿವರಿ ತಡವಾಗಿದ್ದು, ಮಾಲೀಕರೊಂದಿಗೆ ವಾಗ್ವಾದಕ್ಕಿಳಿದ ಜಗದೀಶ್ ಏಕಾಏಕಿ ಫೈರಿಂಗ್ ಮಾಡಿದ್ದಾರೆ.
ದುರಂತ ತಪ್ಪಿಸಿ ಕರ್ತವ್ಯ ಮೆರೆದ ಪೊಲೀಸ್ ಪೇದೆ
ಇನ್ನೂ ಈ ಘಟನೆಯಲ್ಲಿ ಶೋ ರೂಮ್ ಮಾಲೀಕನ ಜೀವ ಉಳಿಸಿದ್ದೇ ಕೆಂಗೇರಿ ಠಾಣೆ ಪೇದೆ ಚಂದ್ರಶೇಖರ್. ಶೋ ರೂಮ್ ಮಾಲೀಕ ಶಫಿವುಲ್ಲಾ ಹಾಗೂ ಮಾಜಿ ಸೈನಿಕ ಜಗದೀಶ್ ಜಗಳ ಜೋರಾಗಿತ್ತು. ಇನ್ನೇನು ಪಿಸ್ತೂಲ್ ತೆಗೆದು ಜಗದೀಶ್ ಶಫಿವುಲ್ಲಾ ಕಡೆ ಹಾರಿಸಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಪೇದೆ ಪಿಸ್ತೂಲ್ ಡೌನ್ ಮಾಡಿದ್ದಾನೆ. 3.2 ಪೀಸ್ತೂಲಿನಿಂದ ಹಾರಿದ ಗುಂಡು ನೆಲಕ್ಕೆ ತಗುಲಿದೆ. ಶಫಿವುಲ್ಲಾ ಬಚಾವಾಗಿದ್ದಾರೆ. ಘಟನೆಯಲ್ಲಿ ಶಫೀವುಲ್ಲಾ ಮತ್ತು ಸಿಬ್ಬಂದಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಡಿಸಿಪಿ ಅನುಚೇತ್, ಎಸಿಪಿ ಸಾಜಿದ್, ಕೆಂಗೇರಿ ಠಾಣಾ ಇನ್ಸ್‌ಪೆಕ್ಟರ್ ಗಿರಿರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.