
ಸೋನಿಯಾ ನಾರಂಗ್ ಎಂಬ ಖಡಕ್ ಪೊಲೀಸ್ ಅಧಿಕಾರಿ ಈಗ ರಾಷ್ಟ್ರೀಯ ತನಿಖಾದಳದ ಎಸ್ಪಿ. ಬಹಳ ಹಿಂದೆ ಮಂತ್ರಿಯೊಬ್ಬರಿಗೆ ಕಪಾಳಕ್ಕೆ ಹೊಡೆದು ಸುದ್ದಿಯಾಗಿದ್ದ ಸೋನಿಯಾ ಲೋಕಾಯುಕ್ತ ಎಸ್ಪಿಯಾಗಿ, ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಪುತ್ರ ಅಶ್ವಿನ್ ನಡೆಸಿದ ‘ಲೋಕಾಯುಕ್ತ ಹಗರಣ'ವನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಕರ್ತವ್ಯಕ್ಕೆ ಹಾಜರಾದ ಮೇಲೆ ಮನೆ, ಸಂಸಾರ ಯಾವುದೂ ತಲೆಗೆ ಬರಲ್ಲ ಅನ್ನೋ ಸೋನಿಯಾ ಇಬ್ಬರು ಮಕ್ಕಳ ಮುದ್ದಿನ ಅಮ್ಮ. ಆದರೂ ಮಕ್ಕಳು ಪುಟ್ಟವರಾಗಿದ್ದಾಗ ಡ್ಯೂಟಿಗೆ ಹಾಜರಾಗುತ್ತಿದ್ದ ಪಡಿಪಾಟಲನ್ನು ನೆನೆಸಿಕೊಂಡರೆ ಈಗಲೂ ಅವರಿಗೆ ದಿಗಿಲಾಗುತ್ತದೆ.
ಮಗುವನ್ನು ನಿದ್ದೆ ಮಾಡಿಸಿ, ಮನೆಲಾಕ್ ಮಾಡಿ ರಾತ್ರಿಪಾಳಿ ಕೆಲಸಕ್ಕೆ ಹಾಜರಾಗ್ತಿದ್ದೆ!
‘ಪೊಲೀಸ್ ಇಲಾಖೆಯಲ್ಲಿ ಇದ್ದಷ್ಟುದಿನ ಸಂಸಾರ, ಮಕ್ಕಳ ನಿರ್ವಹಣೆ ನಿಜಕ್ಕೂ ಕಷ್ಟ. ಅದರಲ್ಲೂ ರಾತ್ರಿಪಾಳಿ ಇದ್ದರಂತೂ ಕೇಳೋದೆ ಬೇಡ. ಮೊದಲ ಮಗುವಿಗೆ ನಾಲ್ಕೈದು ತಿಂಗಳು ತುಂಬುತ್ತಿರುವಾಗಲೇ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆಗ ಪತಿ ಗಣೇಶ್‌ಗೂ ಕೆಲವೊಮ್ಮೆ ಬೇರೆ ಕಡೆ ಹೋಗುವ ಅನಿವಾರ್ಯತೆ. ಈ ನಡುವೆ ನಾನು ಆಗಾಗ ರಾತ್ರಿಪಾಳಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕಿತ್ತು. ಸಮಯಕ್ಕೆ ಸರಿಯಾಗಿ ಮನೆಮುಂದೆ ಜೀಪ್ ಬಂದು ನಿಂತಿರ್ತಿತ್ತು. ಗಂಡ ಮನೆಯಲ್ಲಿ ಇಲ್ಲದಿದ್ದರೆ ನಾನು ಅಷ್ಟರಲ್ಲಾಗಲೇ ನಾನು ಮಗುವಿಗೆ ಊಟ ಮಾಡಿಸಿ ನಿದ್ದೆ ಮಾಡಿಸಿರಬೇಕಿತ್ತು. ಚೆನ್ನಾಗಿ ನಿದ್ದೆ ಬಂದಿದೆ ಅಂತ ಕನ್‌ಫಮ್‌ರ್ ಆದ್ಮೇಲೆ ಹೊರಗೆ ಬಂದು ಜೀಪ್ ಏರ್ತಿದ್ದೆ. ಆಗ ಮಗು ಸ್ವಲ್ಪ ದೊಡ್ಡವನಾದ ಕಾರಣ , ನನ್ನ ಪುಣ್ಯಕ್ಕೆ ರಾತ್ರಿ ಎದ್ದು ಕೂತು ಅಳುವ ಅಭ್ಯಾಸ ಇರಲಿಲ್ಲ. ಆದರೂ ತಾಯಿಯಾದವಳಿಗೆ ಒಳಗಿನಿಂದ ಒಂದು ದಿಗಿಲು ಇರುತ್ತಲ್ವಾ? ಜೊತೆಗೆ ಹೆಚ್ಚು ಕ್ರೈಂಗಳಾಗೋದೂ ರಾತ್ರಿ ಹೊತ್ತಿನಲ್ಲೇ. ಆ ಕೇಸ್‌ಗಳ ಹಿಂದೆ ಬಿದ್ದರೆ ಮನೆ, ಮಕ್ಕಳ ಬಗ್ಗೆ ಯೋಚಿಸಲೂ ಸಮಯವಿರಲ್ಲ. ನನ್ನ ಅದೃಷ್ಟಕ್ಕೆ ಬೆಳಗ್ಗೆ ಸಣ್ಣ ಆತಂಕದಲ್ಲಿ ಬಾಗಿಲು ತೆರೆದು ಒಳ ಹೋದರೆ ಮಗ ಇನ್ನೂ ನಿದ್ದೆಯಲ್ಲಿರುತ್ತಿದ್ದ. ಮಗಳು ಹುಟ್ಟಿದಾಗಿನ ಸಂದರ್ಭ ನಾನು ಲೋಕಾಯುಕ್ತದಲ್ಲಿದ್ದೆ. ಹಾಗಾಗಿ ಅವಳಿಗೆ ಹೆಚ್ಚು ಸಮಯ ಕೊಡೋದು ಸಾಧ್ಯವಾಯಿತು, ಆದರೆ ಪಾಪ ಮಗನಿಗೆ ನಾವಿಬ್ರೂ ಸಾಕಷ್ಟುಸಮಯ ಕೊಡಲಿಕ್ಕಾಗ್ಲಿಲ್ವಲ್ಲ ಅಂತ ಈಗಲೂ ಸ್ವಲ್ಪ ಬೇಜಾರಿದೆ' ಎನ್ನುತ್ತಾರೆ ಸೋನಿಯಾ.
ಭಯ ಅಂದರೇನು ಅಂತಲೂ ಗೊತ್ತಿಲ್ಲ:
ಈಗ ಅಂತಲ್ಲ, ಚಿಕ್ಕ ಮಗುವಿದ್ದಾಗಿಂದಲೂ ಸೋನಿಯಾಗೆ ಭಯ ಅಂದ್ರೆ ಏನು ಅಂತಲೇ ತಿಳಿದಿರಲಿಲ್ಲವಂತೆ. ಇವತ್ತಿಗೂ ಅವರಿಗೆ ಭಯದ ಅನುಭವ ಆಗಿಯೇ ಇಲ್ಲ. ಇವರ ಅಪ್ಪ ಖಡಕ್ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದವರು. ಚಂಡೀಗರ್‌ನಲ್ಲಿ ಬಾಲ್ಯ ಕಳೆದ ಇವರಿಗೆ ಅಪ್ಪ ಕಾಣಲು ಸಿಗುತ್ತಿದ್ದದ್ದೇ ಬಲು ಅಪರೂಪವಂತೆ. ಬೆಳಗ್ಗೆ ಏಳೋ ಮುಂಚೆ ಮನೆಬಿಟ್ಟು ಹೋದ್ರೆ, ಇವರು ನಿದ್ದೆಹೋದ ನಂತರ ವಾಪಾಸಾಗ್ತಿದ್ದರು. ಇದುಬಿಟ್ಟರೆ, ಕ್ಯೂಟ್ ಆಗಿದ್ದ ಸೋನಿಯಾಗೆ ಸ್ಕೂಲ್‌ನಲ್ಲಿ ಸಾಂಸ್ಕೃತಿಕ ಚಟುವಟಿಕೆ ಇದ್ದರೆ ಯಾವತ್ತೂ ಸಿಗುತ್ತಿದ್ದದ್ದು ರಾಜಕುಮಾರಿ ಪಾತ್ರ! ಮನೆಯಲ್ಲೂ ಈಕೆ ಮುದ್ದಿನ ರಾಜಕುಮಾರಿ, ಅದನ್ನು ಕಂಡು ಅಣ್ಣಂಗೆ ಜಲಸ್ ಆಗ್ತಿತ್ತು. ಈಗ ಸೋನಿಯಾರ ಇಬ್ಬರು ಮಕ್ಕಳಲ್ಲಿ ಮಗಳೇ ಚಿಕ್ಕವಳು. ಅವಳನ್ನು ಹೆಚ್ಚು ಮುದ್ದು ಮಾಡಿದರೆ ಮಗನಿಗೆ ಸಣ್ಣ ಹೊಟ್ಟೆಕಿಚ್ಚು.
ವರದಿ: ಕನ್ನಡ ಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.