
ಶಿವಮೊಗ್ಗ(ಮಾ.18): ಕೋಟಿ ಬೆಲೆಬಾಳುವ ಮನೆ! ಓಡಾಡಲು ಐಷಾರಾಮಿ ಕಾರು! ಎಕರೆಗಟ್ಟಳೆ ಕೃಷಿ ಭೂಮಿ , ನಾಲ್ಕಾರು ನಿವೇಶನಗಳು, ಜೊತೆಗೆ ಕುವೆಂಪು ವಿವಿಯಲ್ಲಿ ಅರ್ಧ ಲಕ್ಷ ಸಂಬಳ. ಆದ್ರೂ ಸಹ ಆದಾಯ ಪ್ರಮಾಣ ಪತ್ರದಲ್ಲಿ ಆದಾಯವೇ ಇಲ್ಲ ಎಂದು ತೋರಿಸಿ ಮಕ್ಕಳಿಗೆ ಸರ್ಕಾರಿ ಸವಲತ್ತು ಪಡೆದಿದಿದ್ದಾನೆ ಈ ಭೂಪ. ಯಾರಪ್ಪ ಅವನು ಅಂತೀರಾ ನೀವೆ ನೋಡಿ. ಶಿವಮೊಗ್ಗ ಕುವೆಂಪು ವಿವಿಯ ಜ್ಯೂನಿಯರ್ ಇಂಜಿನಿಯರ್ ಸುರೇಶನ ಕರ್ಮಕಾಂಡ.
ಎಷ್ಟೆ ಹಣ, ಆಸ್ತಿ ಇದ್ದರೂ ಕೂಡ ಮತ್ತಷ್ಟು ಬೇಕು ಅನ್ನೋ ಆಸೆಬುರಕ ಪ್ರಾಣಿ ಈ ಮಾನವ. ಅದೇ ರೀತಿ ನೀವು ನೋಡ್ತಿರೋ ಈ ಜ್ಯೂನಿಯರ್ ಇಂಜಿನಿಯರ್. ಹೆಸರು ಸುರ್ೇಶ್ ಅಂತ. ಇವನನ್ನು ಛತ್ರಿ ಸುರೇಶ ಅಂತ ಕರೆದ್ರೂ ತಪ್ಪಿಲ್ಲ ಬಿಡಿ. ಯಾಕಂದ್ರೆ ಇವನು ಮಾಡಿರೋ ಕೆಲಸನು ಅಂತದ್ದೆ.
ಹೌದು ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಎಂತಹ ಖತರ್ನಾಕ್ ಆಸಾಮಿಗಳಿದ್ದಾರೆಂದರೆ ಸ್ವತಃ ಕೈಲಾಸ ವಾಸಿ ಕುವೆಂಪುರವರೇ ಎದ್ದು ಬಂದರೂ ಸರಿ ಪಡಿಸಲಾಗದಷ್ಟು ಕರ್ಮಕಾಂಡ ಇಲ್ಲಿದೆ. ಕಾರು, ನಾಲ್ಕು ಮನೆ, ಕೋಟಿ ಆಸ್ತಿ, ಹಣ ಜೊತೆಗೆ ವಿವಿಯಲ್ಲಿ ತಿಂಗಳಿಗೆ ಅರ್ಧ ಲಕ್ಷದಷ್ಟು ಸಂಬಳ ಪಡೆಯುತ್ತಿರೋ ಈ ಜ್ಯೂನಿಯರ್ ಎಂಜಿನಿಯರ್ ಸುರೇಶ ತನ್ನ ಮಕ್ಕಳಿಗೆ ಇಂಜಿನಿಯರಿಂಗ್ ಸೀಟು ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಿ ಕನಿಷ್ಠ ಅದಾಯದ ದೃಡೀಕರಣ ಪತ್ರ ಪಡೆದಿದ್ದಾನೆ.
ಹೌದು. ಕುವೆಂಪು ವಿವಿಯ ಇಲೆಕ್ಟ್ರೀಕಲ್ ವಿಬಾಗದಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿ ಹಾಲಿ ಕೆಲಸ ಮಾಡುತ್ತಿರುವ ಸುರೇಶ್ ಬಿ. ತನ್ನ ಇಬ್ಬರು ಗಂಡು ಮಕ್ಕಳನ್ನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಲು ತನ್ನ ಕುಟುಂಬದ ಆದಾಯ ಕೇವಲ 1 ಲಕ್ಷದ 20 ಸಾವಿರ ರೂ. ಎಂದು ಶಿವಮೊಗ್ಗ ತಹಶೀಲ್ದಾರ್ ಕಚೇರಿಯಿಂದ ಆದಾಯ ದೃಡೀಕರಣ ಪತ್ರ ಪಡೆದಿದ್ದಾನೆ.
ಈ ಗೋಲ್ ಮಾಲ್ ಸುರೇಶ ವಿವಿಗೆ ಸ್ವತಃ ಘೊಷಿಸಿ ಕೊಂಡಿರುವ ಆದಾಯವೇ ಕೋಟಿಗಟ್ಟಲೆ ಇದೆ. ದಾಖಲೆಗಳ ಪ್ರಕಾರ ಸುರೇಶನಿಗೆ 40 x 60 ಅಡಿ ಆಳತೆಯ 2 ನಿವೇಶನಗಳು ಶಿವಮೊಗ್ಗ ನಗರದಲ್ಲಿವೆ. ದಾವಣಗೆರೆ ಜಿಲ್ಲೆಯ ಸಂತೆ ಬೆನ್ನೂರಿನಲ್ಲಿ 3.32 ಎಕರೆ ಜಮೀನು, 40 x 39 ಆಳತೆಯ ನಿವೇಶನವೊಂದನ್ನು ಖರೀದಿ ಮಾಡಿದ್ದಾನೆ. ಜೊತೆಗೆ ಶಿವಮೊಗ್ಗದ ನಂಜಪ್ಪ ಲೇ ಔಟ್ ನಲ್ಲಿ ಒಂದೂವರೆ ಕೋಟಿ ರೂ. ಬೆಲೆ ಬಾಳುವ ಮನೆ ,ಐ 10 ಕಾರು , 200 ಗ್ರಾಂ ಬಂಗಾರ ಹೀಗೆ ಎಲ್ಲವನ್ನೂ ಹೊಂದಿರುವ ಸುರೇಶ ಮಾತ್ರ ನನಗೆ ಆದಾಯವೇ ಇಲ್ಲ ಅಂತಾನೆ.
ಈ ಆಕ್ರಮದ ಬಗ್ಗೆ ವಿವಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದಾಯ ದೃಡಿಕರಣ ಪತ್ರ ನೀಡಿದ ಉಪ ತಹಶೀಲ್ದಾರ್ ಸದ್ಯ ಆದಾಯ ಪ್ರಮಾಣ ಪತ್ರವನ್ನ ಅಮಾನ್ಯಗೊಳಿಸಿ ಎಸಿ ಕೋರ್ಟ್ಗೆ ರವಾನಿಸಿದ್ದಾರೆ. ಅಲ್ಲದೇ ಸುರೇಶನ ವಂಚನೆಯ ವಿರುದ್ಧ ಶಿವಮೊಗ್ಗದ ಕೋಟೆ ಪೋಲಿಸರಿಗೆ ದೂರು ನೀಡಿದ್ದಾರೆ. ಆದರೂ ಕೂಡ ಆದಾಯ ದೃಡೀಕರಣ ಪತ್ರ ರದ್ದಾಗ ಬೇಕಾದರೇ ಎಸಿ ಕೋರ್ಟ್ನಲ್ಲಿ ತೀರ್ಮಾನ ಕೈಗೊಳ್ಳ ಬೇಕಿದೆ. ಇಲ್ಲಿ ತೀರ್ಮಾನವಾಗದೇ ಪೋಲಿಸರು ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.
ಏನೇ ಇರಲಿ ಬಡ ವಿದ್ಯಾರ್ಥಿಗಳಿಗೆ ಸಿಗ ಬೇಕಾದ ಸ್ಕಾಲರ್ ಶಿಪ್, ಸೀಟು ಸುರೇಶನಂತಹ ಖೊಟ್ಟಿ ದಾಖಲೆ ವೀರರ ಪಾಲಿಗೆ ಸಿಗುತ್ತದ್ದೆಂದರೇ ವಿಪರ್ಯಾಸವೇ ಸರಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ವರದಿ:ರಾಜೇಶ್ ಕಾಮತ್ , ಶಿವಮೊಗ್ಗ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.