
ನವದೆಹಲಿ [ಜು.3]: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಯಲ್ಲಿನ ಬಂಡವಾಳ ಹಿಂತೆಗೆತ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಲೋಕಸಭೆಯಲ್ಲಿ ಮನವಿ ಮಾಡಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ, ಈ ಕಾರ್ಖಾನೆಗೆ ಇನ್ನಷ್ಟು ಬಂಡವಾಳ ಹೂಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಪ್ರಸಕ್ತ ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು. ಗುತ್ತಿಗೆ ನೌಕರರನ್ನು ಕೆಲಸದಿಂದ ಕಿತ್ತು ಹಾಕಬಾರದು. ಅವರಿಗೆ ಪ್ರಸಕ್ತ ತಿಂಗಳಿಗೆ 11 ದಿನ ಕೆಲಸ ಸಿಗುತ್ತಿದ್ದು ಇದನ್ನು 26 ದಿನಗಳಿಗೆ ಹೆಚ್ಚಿಸಬೇಕು. ಹಾಗೆಯೇ ಕಾರ್ಖಾನೆಗೆ ಅಗತ್ಯವಿರುವ ಗಣಿಗಾರಿಕೆ ಕೆಲಸ ಆರಂಭಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
ವಿಐಎಸ್‌ಎಲ್ 1918ರಲ್ಲಿ ಸ್ಥಾಪನೆಯಾಗಿದ್ದು, ಇದು ದೇಶದ ಮೊದಲ ಸಾರ್ವಜನಿಕ ಉದ್ದಿಮೆ. ಈ ಕಾರ್ಖಾನೆಯ ಪುರುಜ್ಜೀವನ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕರ್ನಾಟಕ ಸರ್ಕಾರ 1989ರಲ್ಲಿ ಕೇವಲ ಒಂದು ರುಪಾಯಿಗೆ ಈ ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್)ಕ್ಕೆ ಹಸ್ತಾಂತರಿಸಿತ್ತು. ಈ ಸಂದರ್ಭದಲ್ಲಿ ಉದ್ದಿಮೆಯ ಎಲ್ಲ ಸಾಲವನ್ನು ರಾಜ್ಯ ಸರ್ಕಾರ ತುಂಬಿತ್ತು ಎಂದು ರಾಘವೇಂದ್ರ ಸಂಸತ್ತಿನ ಗಮನಕ್ಕೆ ತಂದರು.
1989ರಿಂದ ಈವರೆಗೆ ಉಕ್ಕು ಪ್ರಾಧಿಕಾರವು ಕೇವಲ 157 ಕೋಟಿ ರು. ಬಂಡವಾಳವನ್ನು ಮಾತ್ರ ನಿರ್ವಹಣೆ ಮತ್ತು ಕಚ್ಚಾ ವಸ್ತುಗಳಿಗಾಗಿ ವಿಐಎಸ್‌ಎಲ್ಗೆ ಹೂಡಿದೆ. ಆದರೆ ಅನ್ಯ ಕಾರ್ಖಾನೆಗಳಿಗೆ 75,000 ಕೋಟಿ ರು. ನೀಡಲಾಗಿದೆ. ಅಗತ್ಯ ಬಂಡವಾಳ ಹೂಡಿದರೆ ವಿಐಎಸ್‌ಎಲ್ನ ಪುನರುಜ್ಜೀವನ ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ರಾಘವೇಂದ್ರ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.