ಖಾಲಿ ’ಕೈ’ ತುಂಬಿಸಲು ತರೂರ್ ಪ್ಲ್ಯಾನ್ ಏನು?

First Published May 24, 2018, 4:49 PM IST
Highlights

ಕಾಂಗ್ರೆಸ್ ನಾಯಕ ಶಶಿ ತರೂರ್ ಸ್ವಪಕ್ಷಕ್ಕೆ ಸಲಹೆಯೊಂದನ್ನು ನೀಡಿದ್ದಾರೆ. ಪಕ್ಷ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಆದಷ್ಟು ಬೇಗ ಈ ಸಮಸ್ಯೆಯಿಂದ ಹೊರ ಬರದಿದ್ದರೆ 2019 ರ ಲೋಕಸಭೆ ಚುನಾವಣೆ ಎದುರಿಸುವುದು ಕಷ್ಟ ಎಂದು ತರೂರ್ ಎಚ್ಚರಿಸಿದ್ದಾರೆ.

ನವದೆಹಲಿ (ಮೇ.24): ಕಾಂಗ್ರೆಸ್ ನಾಯಕ ಶಶಿ ತರೂರ್ ಸ್ವಪಕ್ಷಕ್ಕೆ ಸಲಹೆಯೊಂದನ್ನು ನೀಡಿದ್ದಾರೆ. ಪಕ್ಷ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಆದಷ್ಟು ಬೇಗ ಈ ಸಮಸ್ಯೆಯಿಂದ ಹೊರ ಬರದಿದ್ದರೆ 2019 ರ ಲೋಕಸಭೆ ಚುನಾವಣೆ ಎದುರಿಸುವುದು ಕಷ್ಟ ಎಂದು ತರೂರ್ ಎಚ್ಚರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಇದರಿಂದ ಹೊರ ಬರದಿದ್ದರೆ 2019 ರ ಯುದ್ದದಲ್ಲಿ ಬಿಜೆಪಿಯನ್ನು ಎದುರಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಪಕ್ಷದ ಹಣಕಾಸು ಪರಿಸ್ಥಿತಿ ಸುಧಾರಿಸಲು ಸಲಹೆ ನೀಡಿರವ ತರೂರ್, ದೇಶಾದ್ಯಂತ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಮೂಲಕ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ. ಪಕ್ಷಕ್ಕೆ ಬರುತ್ತಿದ್ದ ದೇಣಿಗೆ ಪ್ರಮಾಣ ಕಡಿಮೆಯಾಗಿದ್ದು, ಕೇವಲ ಹಿತ ಚಿಂತಕರನ್ನು ನಂಬದೇ ಸಾರ್ವಜನಿಕರಿಂದಲೂ ಹಣ ಸಂಗ್ರಹಕ್ಕೆ ಮುಂದಾಗಬೇಕು ಎಂಬುದು ತರೂರ್ ವಾದ.

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷದ ದೇಣಿಗೆ ಪ್ರಮಾಣ ಶೇ.14 ರಷ್ಟು ಕಡಿಮೆಯಾಗಿದೆ ಎಂದು ನೂತನ ವರದಿ ತಿಳಿಸಿದೆ. ಇದು ಹೀಗೆ ಮುಂದುವರೆದಲ್ಲಿ 2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಕಷ್ಟ ಎದುರಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಶಿ ತರೂರ್ ಅವರ ಟ್ವೀಟ್ ಗೆ ಭಾರೀ ಮಹತ್ವ ಬಂದಿದೆ.

click me!