ಆಡಳಿತ ಪಕ್ಷಕ್ಕೆ ಕೊಟ್ಟ ಬೆಂಬಲ ವಾಪಸ್ : ವಿಪಕ್ಷದೊಂದಿಗೆ ಸ್ಥಾನ ಕೇಳಿದ ಇಬ್ಬರು ಮುಖಂಡರು

By Web DeskFirst Published Jul 14, 2019, 10:42 AM IST
Highlights

ಆಡಳಿತ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾಗಿ ಹೇಳಿರುವ ಇಬ್ಬರು ರಾಜೀನಾಮೆ ನೀಡಿದ ಸಚಿವರು ವಿಪಕ್ಷದೊಂದಿಗೆ ಸ್ಥಾನ ಕೇಳಿದ್ದಾರೆ. 

ಬೆಂಗಳೂರು [ಜು.14] :  ಬಿಜೆಪಿ ಜೊತೆ ಕೈಜೋಡಿಸಿರುವ ಪಕ್ಷೇತರ ಶಾಸಕರಾದ ಆರ್‌. ಶಂಕರ್‌ ಮತ್ತು ಎಚ್‌.ನಾಗೇಶ್‌ ಅವರು ಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಆಡಳಿತ ಪಕ್ಷಕ್ಕೆ ನೀಡಿದ ಬೆಂಬಲವನ್ನು ವಾಪಸ್‌ ಪಡೆದುಕೊಳ್ಳಲಾಗಿದೆ. ಹೀಗಾಗಿ ವಿರೋಧ ಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅವರು ಅಲ್ಲಿಂದಲೇ ಪತ್ರ ಬರೆದು ಕಳುಹಿಸಿದ್ದಾರೆ. ಜು.8ರಂದು ರಾಜ್ಯಪಾಲರನ್ನು ಭೇಟಿಯಾದ ಇಬ್ಬರು ಪಕ್ಷೇತರ ಶಾಸಕರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಬಲ ವಾಪಸ್‌ ಪಡೆಯುವ ಪತ್ರವನ್ನು ಸಲ್ಲಿಸಿದ್ದರು. ಇದೀಗ ಸಭಾಧ್ಯಕ್ಷರಿಗೆ ಪಕ್ಷೇತರ ಶಾಸಕರು ಪ್ರತ್ಯೇಕವಾಗಿ ಪತ್ರ ಬರೆದು ನಾವು ಆಡಳಿತ ಪಕ್ಷಕ್ಕೆ ನೀಡಿದ ಬೆಂಬಲವನ್ನು ವಾಪಸ್‌ ಪಡೆದುಕೊಂಡಿದ್ದೇವೆ. ಹೀಗಾಗಿ ನಮಗೆ ಪ್ರತಿಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಚಿವರಿಗೆ ಕಲ್ಪಿಸುವ ಆಸನಗಳ ಸಾಲಿನಲ್ಲಿ ಪಕ್ಷೇತರ ಶಾಸಕರಿಗೆ ಆಸನ ಮೀಸಲಿಡಲಾಗಿದೆ. ಆಸನದ ಸಂಖ್ಯೆ 31 ಮತ್ತು 32ನ್ನು ಅವರಿಗೆ ಮೀಸಲಿಡಲಾಗಿದೆ. ಹೀಗಾಗಿ ಆಸನವನ್ನು ಬದಲಿಸುವಂತೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!