ಏಕಾಏಕಿ ಭಾರತ್ ಬಂದ್ ಘೋಷಣೆ: ತಟ್ಟನೆ ಸ್ತಬ್ಧವಾದ ರಾಜಧಾನಿ!

By Web DeskFirst Published Sep 6, 2018, 12:06 PM IST
Highlights

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ ರಕ್ಷಣೆಗೆ ಮುಂದಾದ ಕೇಂದ್ರ! ಸಾಮಾನ್ಯ ವರ್ಗ, ಒಬಿಸಿ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ನಿರ್ಧಾರ! ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಭಾರತ್ ಬಂದ್‌ಗೆ ಕರೆ!

ಇಂಧೋರ್ ನಲ್ಲಿ ಶಾಲಾ ಕಾಲೇಜುಗಳು, ಅಂಗಡಿ ಮುಗ್ಗಟ್ಟುಗಳು ಬಂಧ್

ಇಂಧೋರ್(ಸೆ.6): ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವಾಗಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಉಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸಾಮಾನ್ಯ ವರ್ಗ ಮತ್ತು ಒಬಿಸಿ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿವೆ.

ಎಸ್‌ಟಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಕೇಂದ್ರ ಸರ್ಕಾರ ಸೆಡ್ಡು ಹೊಡೆದಿದೆ. ಅಲ್ಲದೇ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿಗೆ ಅವಕಾಶ ಇಲ್ಲದಂತೆ ಹೊಸ ಕಾನೂನು ಕೂಡ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರದ ಈ ನಡೆ ಸಾಮಾನ್ಯ ವರ್ಗ ಮತ್ತು ಒಬಿಸಿ ಸಂಘಟನೆಗಳನ್ನು ಕೆರಳಿಸಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನೂ ಧಿಕ್ಕರಿಸುತ್ತಿರುವ ಕೇಂದ್ರದ ನಡೆ ಅಸಂವಿಧಾನಿಕ ಎಂದು ಆರೋಪಿಸಿವೆ.

ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಸಾಮಾನ್ಯ ವರ್ಗ ಮತ್ತು ಒಬಿಸಿ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದು, ರಾಜಧಾನಿ ಇಂಧೋರ್ ನಲ್ಲಿ ಶಾಲಾ ಕಾಲೇಜುಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ದಲಿತರ ಓಲೈಕೆಗಾಗಿ ಮೇಲ್ವರ್ಗಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರ ವಿರುದ್ಧ ಹರಿಹಾಯ್ದಿರುವ ಪ್ರತಿಭಟನಾಕಾರರು, ಚುನಾವಣೆಗೂ ಮೊದಲೂ ಒಂದು ಮಾತನಾಡುವ ಈ ರಾಜಕಾರಣಿಗಳು, ಆಯ್ಕೆಯಾಗಿ ಹೋದ ಮೇಲೆ ಜನತೆಗೆ ಮೋಸ ಮಾಡುತ್ತಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ತಿದ್ದುಪಡಿಗೆ ಸಹಿ ಹಾಕಿರುವ ಸಂಸದರಿಗೆ ಮುಂದಿನ ಚುನಾವನೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

click me!