ಬಿಬಿಎಂಪಿ, ಬಿಡಿಎ ಆಡಳಿತಕ್ಕೆ ಪ್ರತ್ಯೇಕ ಕಾಯ್ದೆ

By Web DeskFirst Published Dec 19, 2018, 11:24 AM IST
Highlights

ಬಿಬಿಎಂಪಿ, ಬಿಡಿಎ ಆಡಳಿತಕ್ಕೆ ಪ್ರತ್ಯೇಕ ಕಾಯ್ದೆ | ಅಧಿಕಾರಿಗಳು, ಸಿಬ್ಬಂದಿಯ ಕಾರ‍್ಯ ದಕ್ಷತೆ, ಸುಗಮ ಆಡಳಿತಕ್ಕಾಗಿ ಪ್ರತ್ಯೇಕ ಕಾಯ್ದೆ ಅಗತ್ಯ ಅಭಿವೃದ್ಧಿ ಸಮಿತಿ ರಚಿಸಿ ಎಂದು 2ನೇ ವರದಿಯಲ್ಲಿ ಉಲ್ಲೇಖ
 

ಬೆಂಗಳೂರು (ಡಿ. 19): ಮಹಾನಗರ ಪಾಲಿಕೆಗಳ ನಡುವೆ ಅಧಿಕಾರಿ, ಸಿಬ್ಬಂದಿಗಳ ಆಂತರಿಕ ವರ್ಗಾವಣೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕಾಗಿ ಪ್ರತ್ಯೇಕ ಕಾಯ್ದೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತ ನಿರ್ವಹಣೆಯ ಅನುಕೂಲಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕು ಎಂದು ಪ್ರಸಕ್ತ ಸಾಲಿನ ಸದಸ್ಯರ ಖಾಸಗಿ ವಿಧೇಯಕ ಮತ್ತು ನಿರ್ಣಯಗಳ ಸಮಿತಿಯು ವಿಧಾನಸಭೆಯಲ್ಲಿ ಮಂಗಳವಾರ ಸಲ್ಲಿಸಿದ ಎರಡನೇ ವರದಿಯಲ್ಲಿ ಶಿಫಾರಸು ಮಾಡಿದೆ.

ವಿಧಾನಸಭೆಯ ಉಪಾಸಭಾಧ್ಯಕ್ಷರೂ ಆಗಿರುವ ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಂಗಳವಾರ ಕಲಾಪದ ವೇಳೆ ವರದಿ ಮಂಡಿಸಿದರು. ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆ, ನಗರಸಭೆಗಳು, ಪುರಸಭೆಗಳು 1976ರ ಕರ್ನಾಟಕ ಪೌರ ನಿಗಮಗಳ ಕಾರ್ಯನಿರ್ವಹಣೆ ಮಾಡುತ್ತದೆ. ಸ್ಥಳೀಯ ಶಾಸಕರು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸ್ಪಷ್ಟವಾದ ಅಧಿಕಾರ/ ಜವಾಬ್ದಾರಿಗಳನ್ನು ಉಲ್ಲೇಖಿಸುವ ಅಗತ್ಯವಿದೆ. ಆದಕಾರಣ ಈ ಕಾಯ್ದೆಯ ಪ್ರಕರಣ 70ಕ್ಕೆ ಸೂಕ್ತ ತಿದ್ದುಪಡಿ ತರಬೇಕು.

ಮಹಾನಗರ ಪಾಲಿಕೆ/ ನಗರಸಭೆಗಳಿಗೆ ಸಂಬಂಧಿಸಿದಂತೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಕ್ಷೇತ್ರವಾರು ಅಭಿವೃದ್ಧಿ ಸಮಿತಿ ರಚನೆ ಮಾಡಬೇಕು. ಸಮಿತಿಯಲ್ಲಿ ಪಾಲಿಕೆ ಸದಸ್ಯರು ಇರಬೇಕು. ಸಮಿತಿಯ ಸಭೆಗೆ ಕ್ಷೇತ್ರದ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಮತ್ತು ಸಮಿತಿ ಕಾರ್ಯ ಚಟುವಟಿಕೆಗಳನ್ನು ನಡೆಸಲು ನೋಡಲ್‌ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಸಮಿತಿಯ ಸಭೆಯೂ ಪ್ರತಿ ತಿಂಗಳು ಸಭೆ ನಡೆಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಬಿಎಂಪಿ ಭಿನ್ನ:

ಮಹಾನಗರ ಪಾಲಿಕೆಗಳಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಗುಣಮಟ್ಟದ ಕೆಲಸ, ದಕ್ಷತೆ ಹೆಚ್ಚಿಸಲು ಮಹಾನಗರ ಪಾಲಿಕೆಗಳ ನಡುವೆ ಆಂತರಿಕ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರತ್ಯೇಕ ಕಾಯ್ದೆ ಜಾರಿಗೊಳಿಸಬೇಕು. ಬಿಬಿಎಂಪಿ ಇತರೆ ಪಾಲಿಕೆಗಳಿಗಿಂತ ಭಿನ್ನವಾಗಿದೆ. 28 ಶಾಸಕರು, 198 ವಾರ್ಡ್‌ ಸದಸ್ಯರು ಬರುತ್ತಾರೆ. ಸುಗಮ ಆಡಳಿತಕ್ಕಾಗಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಸಮಿತಿಯಲ್ಲಿ ಶಾಮನೂರು ಶಿವಶಂಕರಪ್ಪ, ತನ್ವೀರ್‌ಸೇಠ್‌, ಎ.ಟಿ.ರಾಮಸ್ವಾಮಿ, ಎಸ್‌.ರಘು, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಲ್‌.ಎ.ರವಿಸುಬ್ರಹ್ಮಣ್ಯ, ಎಂ.ಸತೀಶ ರೆಡ್ಡಿ, ಡಾ.ಕೆ.ಸುಧಾಕರ್‌, ಕೆ.ಗೋಪಾಲಯ್ಯ, ಟಿ.ಡಿ.ರಾಜೇಗೌಡ ಸದಸ್ಯರಾಗಿದ್ದಾರೆ.

 

click me!