ಮಂಚಕ್ಕೂ, ಲಂಚಕ್ಕೂ ಸಂಬಂಧ: ಕಂಬಿ ಎಣಿಸೋದರಲ್ಲೇ ಆನಂದ'!

By Web DeskFirst Published Sep 10, 2018, 12:19 PM IST
Highlights

ಕೆಲಸಕ್ಕಾಗಿ ಲೈಂಗಿಕ ಸಂಪರ್ಕದ ಬೇಡಿಕೆ ಅಪರಾಧ! ಭ್ರಷ್ಟಾಚಾರ ನಿಯಂತ್ರಣ (ತಿದ್ದುಪಡಿ) ಕಾಯ್ದೆ2018! ಲೈಂಗಿಕ ಬೇಡಿಕೆ ಮತ್ತು ಒಪ್ಪಿಗೆ ಎರಡಕ್ಕೂ ಕಾದಿದೆ ಶಿಕ್ಷೆ! ಲಂಚ ಪಡೆದರೆ ಏಳು ವರ್ಷಗಳ ಕಾಲ ಜೈಲುಶಿಕ್ಷೆ

ನವದೆಹಲಿ(ಸೆ.10): ಯಾವುದೇ ಕೆಲಸ ಮಾಡಿಸಿಕೊಳ್ಳಲು ಲೈಂಗಿಕ ಸಂಪರ್ಕದ ಬೇಡಿಕೆಯೊಡ್ಡುವುದು ಅಥವಾ ಅಂತಹ ಬೇಡಿಕೆಯನ್ನು ಒಪ್ಪಿಕೊಳ್ಳುವುದನ್ನೂ ಸಹ ಹೊಸ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಲಂಚವೆಂದೇ ಪರಿಗಣಿಸಲಾಗುತ್ತದೆ. ಭ್ರಷ್ಟಾಚಾರ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2018ಕ್ಕೆ ಈ ಅಂಶ ಕೂಡ ಇದೀಗ ಸೇರ್ಪಡೆಗೊಂಡಿದೆ.

ಯಾವುದೇ ಕೆಲಸ ಮಾಡಿಸಿಕೊಳ್ಳಲು ಲೈಂಗಿಕ ಸಮಫರ್ಕದ ಬೇಡಿಕೆ ಇಟ್ಟರೆ ಇದನ್ನು ಅಪರಾಧ ಎಂದು ಪರಿಗಣಿಸಲಾಗುವುದು. ಮತ್ತು ಈ ಅಪರಾಧಕ್ಕೆ ಆರೋಪಿಗೆ ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಹೊಸ ಕಾನೂನಿನಲ್ಲಿ ನೀಡಲಾಗಿದೆ.

ಕಾನೂನುಬದ್ಧವಾದ ಹಣ ಪಾವತಿ ಹೊರತುಪಡಿಸಿ, ದುಬಾರಿ ಕ್ಲಬ್‌ ಸದಸ್ಯತ್ವ, ಆತಿಥ್ಯ ಇತ್ಯಾದಿ ಯಾವುದೇ ಅನರ್ಹ ಅನುಕೂಲತೆಯನ್ನು ಲಂಚ ಎಂದೇ ಹೊಸ ಕಾನೂನು ಪರಿಗಣಿಸುತ್ತದೆ.  ಸುಮಾರು ೩೦ ವರ್ಷಗಳ ಹಿಂದಿನ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಮೋದಿ ಸರ್ಕಾರ ತಿದ್ದುಪಡಿ ತಂದಿದ್ದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಪರಿಣಾಮಕಾರಿ ಕಾನೂನು ಇದು ಎನ್ನಲಾಗಿದೆ. 

ಅನುಚಿತ ಪ್ರಯೋಜನ ಪಡೆಯುವಿಕೆ ಎಂಬ ಹೊಸ ಶಿರ್ಷಿಕೆಯಡಿಯಲ್ಲಿ ಈ ನಿಯಮಗಳನ್ನು ಉಲ್ಲೇಖಿಸಲಾಗಿದೆ.  ಇದೇ ವೇಳೆ ಕೆಲಸ ಮಾಡಿಸಿಕೊಳ್ಳಲು ಯಾವುದೇ ವ್ಯಕ್ತಿ ಲಂಚ ಕೊಟ್ಟರೂ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ಇದೆ. ಇದಕ್ಕೂ ಮುನ್ನ ಲಂಚ ಪಡೆದವರಿಗಷ್ಟೇ ಶಿಕ್ಷೆಯಾಗುತ್ತಿತ್ತು. ನೀಡುವವರಿಗೆ ಯಾವುದೇ ಕಾನೂನು ಅನ್ವಯ ಆಗುತ್ತಿರಲಿಲ್ಲ.

ಈ ಹೊಸ ತಿದ್ದುಪಡಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಹಾಯಕಾರಿಯಾಗಿದ್ದು, ಇದರ ಪರಿಣಾಮಕಾರಿ ಜಾರಿಯಿಂದ ಭ್ರಷ್ಟಾಚಾರ ತೊಲಗಿಸಲು ಸಾಧ್ಯ ಎಂಬುದು ಕೇಂದ್ರ ಸರ್ಕಾರದ ಅಂಬೋಣ. 

click me!