
ನವದೆಹಲಿ : ಅಯೋಧ್ಯೆಯಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ ನಡೆಸಿದ ಧರ್ಮಸಭೆಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ಮುಸ್ಲಿಮರ ಪಕ್ಷವಾದ ಎಸ್‌ಡಿಪಿಐ, ‘ವಿಎಚ್‌ಪಿ 5 ಲಕ್ಷ ಜನರನ್ನು ಅಯೋಧ್ಯೆಯಲ್ಲಿ ಸೇರಿಸಿದ್ದರೆ, ನಾವು 25 ಲಕ್ಷ ಜನರನ್ನು ಸೇರಿಸುತ್ತೇವೆ. ಬಾಬ್ರಿ ಮಸೀದಿ ಧ್ವಂಸ ದಿನವಾದ ಡಿಸೆಂಬರ್ 6ರಂದು ದಿಲ್ಲಿಯಲ್ಲಿ ದೊಡ್ಡ ಸಮಾವೇಶ ನಡೆಸ್ತುತೇವೆ’ ಎಂದು ಘೋಷಿಸಿದೆ. ಈ ಮೂಲಕ ರಾಮಮಂದಿರ-ಬಾಬ್ರಿ ವಿವಾದವು ಮತ್ತಷ್ಟುಕೋಮು ಬಣ್ಣ ಪಡೆದುಕೊಂಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೋಡಿರುವ ಎಸ್‌ಡಿಪಿಐ, ‘ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಿಸುವ ತನ್ನ ಭರವಸೆಗೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು. ನರಸಿಂಹರಾವ್ ಸರ್ಕಾರವು ಬಾಬ್ರಿ ಮಸೀದಿ ಧ್ವಂಸದ ನಂತರ ಅಲ್ಲಿ ಮಸೀದಿ ಕಟ್ಟುವ ಭರವಸೆ ನೀಡಿತ್ತು. ಇದಲ್ಲದೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಕೂಡ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಜಮೀನಿನಲ್ಲಿ ಒಂದು ಭಾಗ ನೀಡಿದೆ’ ಎಂದು ಎಸ್‌ಡಿಪಿಐ ಜ್ಞಾಪಿಸಿದೆ.
ಅಯೋಧ್ಯೆಯಲ್ಲಿ ಆರ್‌ಎಸ್‌ಎಸ್, ವಿಎಚ್‌ಪಿ ಹಾಗೂ ಭಜರಂಗದಳದಂಥ ಸಂಘಟನೆಗಳು ಕೋರ್ಟ್ ಆದೇಶವನ್ನು ಮೀರಿ ರಾಮಮಂದಿರ ನಿರ್ಮಿಸಬೇಕು ಎಂದು ಆಗ್ರಹಿಸುತ್ತ ಸಮಾವೇಶ ನಡೆಸಿವೆ. ಇದು ಅಯೋಧ್ಯೆಯ ಮುಸ್ಲಿಮರನ್ನು ಹೆದರಿಸುವ ತಂತ್ರವಾಗಿದೆ. ಅಯೋಧ್ಯೆಯ ಮುಸ್ಲಿಮರು ಅಭದ್ರತೆಯ ಕಾರಣ ಊರೇ ಬಿಟ್ಟು ಹೋಗಿದ್ದಾರೆ. ಇದಕ್ಕೆಲ್ಲ ಸರ್ಕಾರವೇ ಹೊಣೆಯಾಗಿದ್ದು, ಸಮಾವೇಶದ ಆಯೋಜಕರಿಂದ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು’ ಎಂದು ಮುಸ್ಲಿಂ ಪಕ್ಷ ಆಗ್ರಹಿಸಿದೆ.
ಇದನ್ನು ಖಂಡಿಸಿ ಡಿಸೆಂಬರ್ 6ರಂದು ದಿಲ್ಲಿಯಲ್ಲಿ ಸಮಾವೇಶ ನಡೆಸಲಾಗುತ್ತದೆ. ಅವರು (ವಿಎಚ್‌ಪಿ) 5 ಲಕ್ಷ ಜನರನ್ನು ಸೇರಿಸಿದರೆ ನಾವು ಅಂದು 25 ಲಕ್ಷ ಜನರನ್ನು ಸೇರಿಸುತ್ತೇವೆ ಎಂದು ಎಚ್ಚರಿಸಿದೆ.
ಆದರೆ ಅಯೋಧ್ಯೆಯಲ್ಲಿ ಕೋಮುದಂಗೆ ಸೃಷ್ಟಿಸುವ ಆರ್‌ಎಸ್‌ಎಸ್ ಯತ್ನ ವಿಫಲವಾಗಿದೆ. ನಿರೀಕ್ಷಿಸಿದಷ್ಟುಜನರು ಬರದೇ ಅದರ ಕುತಂತ್ರಗಳು ಹುಸಿಯಾಗಿವೆ. ಅಯೋಧ್ಯೆ ಶಾಂತವಾಗಿದೆ ಎಂದು ಎಸ್‌ಡಿಪಿಐ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.