ಮುಸ್ಲಿಮರ ಮಹಿಳಾ ಮುಂಜಿ ಬಗ್ಗೆ ಕೇಂದ್ರ U-ಟರ್ನ್?

By Web DeskFirst Published Sep 28, 2018, 6:34 PM IST
Highlights

ಮುಸ್ಲಿಮರ ಬೊಹ್ರಾ ಪಂಗಡದಲ್ಲಿರುವ ಮಹಿಳಾ ಮುಂಜಿ ಸಂಪ್ರದಾಯ | ಪದ್ಧತಿಯನ್ನು ನಿಷೇಧಿಸಲು ಮಹಿಳಾ ಹಕ್ಕು ಸಂಘಟನೆಗಳಿಂದ ಆಗ್ರಹ | ಆಚರಣೆಯನ್ನು ಅಪರಾಧವೆಂದಿದ್ದ ಕೇಂದ್ರ

ನವದೆಹಲಿ: ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಒದಗಿಸಲು ಬದ್ಧವೆಂದು ಹೇಳುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಇದೀಗ ಆ ಬಗ್ಗೆ ಉಲ್ಟಾ ಹೊಡೆದಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಮುಸ್ಲಿಮರ ದಾವೂದಿ ಬೊಹ್ರಾ ಪಂಗಡದಲ್ಲಿ ಚಾಲ್ತಿಯಲ್ಲಿರುವ ಮಹಿಳಾ ಮುಂಜಿ/ ಯೋನಿಛೇದನ  [ಯೋನಿಯ ಚಂದ್ರನಾಡಿಯನ್ನು ತೆಗೆದುಹಾಕುವುದು] ಆಚರಣೆಯನ್ನು ನಿಷೇಧಿಸಬೇಕೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಗು ಕೇಳಿಬಂದಿದೆ.

ಭಾರತದಲ್ಲೂ ಬೊಹ್ರಾ ಸಮುದಾಯದಲ್ಲಿ ಖಫ್ಜ್ ಎಂಬ ಈ ಆಚರಣೆ ಚಾಲ್ತಿಯಲ್ಲಿದ್ದು, ಅದನ್ನು ನಿಷೇಧಿಸುವಂತೆ ಮಹಿಳಾ ಹಕ್ಕು ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.

ಕಳೆದ ಏಪ್ರಿಲ್‌ನಲ್ಲಿ, ಸುಪ್ರೀಂ ಕೋರ್ಟ್ ಈ ಬಗ್ಗೆ ಕೇಂದ್ರಕ್ಕೂ ನೋಟಿಸ್ ನೀಡಿದ್ದು, ಅಭಿಪ್ರಾಯ ತಿಳಿಸುವಂತೆ ಹೇಳಿತ್ತು. ಆಗ, ಈ ಆಚರಣೆಯು ಭಾರತೀಯ ಕಾನೂನಿನ ಪ್ರಕಾರ ಅಪರಾಧವೆಂದು ಕೇಂದ್ರವು ಖಂಡತುಂಡವಾಗಿ ಹೇಳಿತ್ತು.
ಮಹಿಳಾ ಮುಂಜಿಯ ಪರವಾಗಿರುವ ದಾವೂದಿ ಬೊಹ್ರಾ ಮಹಿಳಾ ಸಂಘಟನೆಯು, ಇದು ಧಾರ್ಮಿಕ ಸ್ವಾತಂತ್ರ್ಯದ ವಿಚಾರವಾಗಿದ್ದು,  ಆಚರಣೆಗೆ ಅವಕಾಶ ಮುಂದುವರಿಸಬೇಕೆಂದು ಕೋರಿದೆ.   

ಆದರೆ ಕಳೆದ ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್  ಈ ಬಗ್ಗೆ ಮೃದು ಧೋರಣೆ ತಳೆದಿದ್ದು, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವಂತೆ ಮನವಿಮಾಡಿದೆ. ಅದರಂತೆ ಸುಪ್ರೀಂ ಕೋರ್ಟ್ ಪಂಚಸದಸ್ಯ ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.

ಸುಪ್ರೀಂ ನಿರ್ಧಾರ ನಿರಾಸೆ ತಂದಿದೆ ಎಂದು ಅರ್ಜಿದಾರ ‘ವೀ ಸ್ಪೀಕ್ ಔಟ್’ ಸಂಘಟನೆಯು, ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿರುವುದಕ್ಕೆ  ಆಕ್ರೋಶ ವ್ಯಕ್ತಪಡಿಸಿದೆ.  

ಕಳೆದ ಸೆ. 14ರಂದು ಪ್ರಧಾನಿ ಮೋದಿಯವರು ಬೊಹ್ರಾ ಸಮುದಾಯದ  ಸರ್ವೋಚ್ಚ ನಾಯಕ ಸೈಯದಿನಾ ಮುಫದ್ದಲ್ ಸೈಫುದ್ದೀನ್ ಅವರನ್ನು ಇಂದೋರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದನ್ನು ಸ್ಮರಿಸಬಹುದು. ಸೈಯದಿನಾ ಮಹಿಳಾ ಮುಂಜಿಯ ಪರ ನಿಲುವನ್ನು ಹೊಂದಿದ್ದಾರೆ. 

ಭಾರತ ಸೇರಿದಂತೆ ಹಲವು ಆಫ್ರಿಕಾ ಖಂಡದ ದೇಶಗಳಲ್ಲಿ ಮಹಿಳಾ ಮುಂಜಿ ಪದ್ಧತಿ ಚಾಲ್ತಿಯಲ್ಲಿದ್ದು, ಯೂರೋಪಿನ ಹಲವು ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ.  ಭಾರತದಲ್ಲೂ ಇದನ್ನು ನಿಷೇಧಿಸಬೇಕೆಂದು ಬೊಹ್ರಾ ಮಹಿಳೆಯರು ಕೂಡಾ ಆಗ್ರಹಿಸುತ್ತಿದ್ದಾರೆ.

click me!