
ಬೆಂಗಳೂರು(ಡಿ.1): ಹಿಮಾಲಯ ಪರ್ವತ ಪ್ರದೇಶದಲ್ಲ ಶೀಘ್ರದಲ್ಲೇ ಅತ್ಯಂತ ಪ್ರಬಲ ಭೂಕಂಪ ಸಂಭವಿಸಬಹುದು ಎಂದು ಭಾರತೀಯ ಭೂಗರ್ಭ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್ ನ ವಿಜ್ಞಾನಿ ಸಿಪಿ ರಾಜೇಂದ್ರನ್, ಮಧ್ಯ ಹಿಮಾಲಯ ಭಾಗದಲ್ಲಿ ಭವಿಷ್ಯದಲ್ಲಿ 8.5ರಷ್ಟುತೀವ್ರತೆಯ ಪ್ರಬಲ ಭೂಕಂಪ ಸಂಭವಿಸಲಿದೆ ಎಂದು ತಿಳಿಸಿದ್ದಾರೆ.
ಜಿಯೋಲಾಜಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ, ಸಂಶೋಧಕರು ನೂತನವಾಗಿ ಸಂಶೋಧಿಸಿದ ಎರಡು ಸ್ಥಳಗಳಾದ ಪಶ್ಚಿಮ ನೇಪಾಳದ ಮೋಹನಾ ಖೋಲಾ ಮತ್ತು ಭಾರತದ ಗಡಿರೇಖೆಯಲ್ಲಿರುವ ಛೋರ್ಗಾಲಿಯಾ ದತ್ತಾಂಶಗಳನ್ನು ಈಗಿರುವ ದತ್ತಾಂಶದ ಜೊತೆಗೆ ಹೋಲಿಕೆ ಮಾಡಿ ವಿಮರ್ಶಿಸಿದ್ದಾರೆ.
ಸ್ಥಳೀಯ ಭೂವಿಜ್ಞಾನ ಮತ್ತು ಭಾರತೀಯ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಪ್ರಕಟಿಸಿರುವ ವಿಶೇಷ ಭೂಪಟದ ಮಾಹಿತಿಯನ್ನು ಸಂಶೋಧಕರು ಬಳಸಿಕೊಂಡಿದ್ದಾರೆ. ಅಲ್ಲದೇ ಗೂಗಲ್ ಅರ್ಥ್ ಮತ್ತು ಇಸ್ರೋದ ಕಾರ್ಟೊಸ್ಯಾಟ್ 1 ಸೆಟಲೈಟ್ನ ಚಿತ್ರವನ್ನು ಕೂಡ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ಮಧ್ಯ ಹಿಮಾಲಯದಲ್ಲಿ 1315 ಮತ್ತು 1440ರ ನಡುವೆ 8.5ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರಂತೆ ಭಾರೀ ಭೂಕಂಪ ಸಂಭವಿಸಿ ಸುಮಾರು ೭ ಶತಮಾನಗಳೇ ಕಳೆದಿದ್ದು, ಮತ್ತೊಮ್ಮೆ ಭಾರೀ ದುರಂತದ ಮುನ್ಸೂಚನೆ ದೊರೆತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಮಾಲಯದ ಈ ಭಾಗದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ವಿಜ್ಞಾನಿಗಳು ಅಂದಾಜಿಸಿದಂತೆ ಭಾರೀ ಭೂಕಂಪ ಸಂಭವಿಸಿದರೆ ಹೆಚ್ಚಿನ ಅನಾಹುತ ತಡೆಯಲು ಸರ್ಕಾರಗಳು ಸಜ್ಜಾಗಿಲ್ಲ ಎಂಬುದು ಸಂಶೋಧಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.