ಕಾಳಿ ಅರಣ್ಯದಲ್ಲಿ ಹುಲಿ, ಚಿರತೆಗೆ 23 ನೀರಿನ ತೊಟ್ಟಿ

By Web DeskFirst Published May 21, 2019, 9:18 AM IST
Highlights

ಕಾಳಿ ಅರಣ್ಯದಲ್ಲಿ ನೀರಿಲ್ಲದೆ ಗಂಟಲಾರಿದ ಹುಲಿಗಳು!  ಬಿಸಿಲಿಗೆ ಬತ್ತಿದ ಜಲಮೂಲಗಳು | 23 ಕಡೆ ಕೃತಕ ತೊಟ್ಟಿಅಳವಡಿಕೆ | ನೀರಿಗಾಗಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿವೆ ಪ್ರಾಣಿಗಳು
 

ಕಾರವಾರ (ಮೇ. 21):  ನೀರಿನ ಸಮಸ್ಯೆ ನಾಡು ಮಾತ್ರವಲ್ಲದೆ ರಕ್ಷಿತಾರಣ್ಯದಲ್ಲೂ ತಲೆದೋರಿದೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಜಲಮೂಲಗಳೆಲ್ಲ ಬತ್ತಿಹೋಗಿದ್ದು ಹುಲಿ, ಆನೆ, ಚಿರತೆ, ಕಾಡುಕೋಣ, ಜಿಂಕೆ ಮತ್ತಿತರ ಕಾಡು ಪ್ರಾಣಿಗಳ ಬಾಯಾರಿದೆ. ಜೀವಜಲಕ್ಕಾಗಿ ಅಕ್ಷರಶಃ ಪರದಾಡುತ್ತಿವೆ. ಅಲ್ಲಲ್ಲಿ ಅಳವಡಿಸಿದ ನೀರಿನ ತೊಟ್ಟಿಗಳೇ ಈಗ ಪ್ರಾಣಿಗಳ ಪ್ರಾಣ ಉಳಿಸಬೇಕಾಗಿದೆ.

ಹಳಿಯಾಳ, ಜೋಯಿಡಾ, ದಾಂಡೇಲಿ ಹಾಗೂ ಭಾಗಶಃ ಯಲ್ಲಾಪುರ, ಕಾರವಾರ ತಾಲೂಕುಗಳನ್ನು ಒಳಗೊಂಡ ಕಾಳಿ ಹುಲಿ ರಕ್ಷಿತ ಪ್ರದೇಶದಲ್ಲಿ ಜಲ ಮೂಲವೆಲ್ಲ ಬರಿದಾಗಿ ಹಲವು ದಿನಗಳಾಗಿವೆ. ಕೆರೆಗಳು, ಹಳ್ಳ ಕೊಳ್ಳಗಳು, ನಾಲೆಗಳು ಎಲ್ಲವೂ ಬೆತ್ತಲೆಯಾಗಿದೆ. ಒಂದು ಬದಿಯಲ್ಲಿ ಕಾಳಿ ನದಿ, ಕಾನೇರಿ ನದಿ ಹೊರತು ಪಡಿಸಿದರೆ ಉಳಿದೆಲ್ಲ ಕಡೆಗಳಲ್ಲಿ ನೀರಿನ ಸೆಲೆಯೇ ಮರೆಯಾಗಿದೆ.

ಕಳೆದ ಮಳೆಗಾಲದಲ್ಲಿ ಮಳೆ ಚೆನ್ನಾಗಿಯೆ ಆಗಿದೆ. ಆದರೂ ಬೇಸಿಗೆಯಲ್ಲಿ ನೀರು ಮಾತ್ರ ಆರಿಹೋಗಿದೆ. ನೀರು ಹಾಗೂ ಆಹಾರ ಹುಡುಕಿಕೊಂಡು ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ನುಗ್ಗಿದ ಘಟನೆಗಳು ಆಗಾಗ ನಡೆಯುತ್ತಲೆ ಇವೆ.

ಕಳೆದ ವರ್ಷವೂ ಟೈಗರ್‌ ಪ್ರಾಜೆಕ್ಟ್ ಪ್ರದೇಶದಲ್ಲಿ ನೀರಿನ ಅಭಾವ ಉಂಟಾಗಿತ್ತು. ಆಗಲೂ ಕೂಡ ಅರಣ್ಯದಲ್ಲಿ ತಗ್ಗು ತೆಗೆದು ನೀರನ್ನು ತುಂಬಿಡಲಾಗುತ್ತಿತ್ತು. ಈ ಬಾರಿ ನೀರಿನ ಅಭಾವ ತೀವ್ರವಾಗಿದೆ. ಕಾಡುಪ್ರಾಣಿಗಳಿಗೆ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ.

ನೀರಿನ ತೊಟ್ಟಿಗಳ ಅಳವಡಿಕೆ

ಹುಲಿ ರಕ್ಷಿತ ಪ್ರದೇಶದಲ್ಲಿ ನೀರಿನ ಮೂಲ ಬತ್ತುತ್ತಿದ್ದಂತೆ ಎಚ್ಚೆತ್ತುಕೊಂಡು ಹುಲಿ ಯೋಜನಾ ಪ್ರದೇಶದ ಅಧಿಕಾರಿಗಳು ಸಿಮೆಂಟ್‌ ತೊಟ್ಟಿಗಳನ್ನು ಕಾಡಿನ ನಡುವೆ ಅಳವಡಿಸಿ ಅದರಲ್ಲಿ ನೀರು ತುಂಬಿಸಿದ್ದಾರೆ. ವಾರಕ್ಕೆ ಎರಡು ಬಾರಿ ಈ ತೊಟ್ಟಿಗಳಲ್ಲಿ ನೀರನ್ನು ಭರ್ತಿ ಮಾಡಲಾಗುತ್ತದೆ. ಅಣಶಿ, ಕುಂಬಾರವಾಡ, ಕ್ಯಾಸೆಲ್‌ ರಾಕ್‌, ಪಣಸೋಲಿ ಹೀಗೆ ಒಟ್ಟೂ23 ಕಡೆಗಳಲ್ಲಿ ನೀರಿನ ತೊಟ್ಟಿಗಳನ್ನು ಅಳವಡಿಸಲಾಗಿದೆ.

20 ಅಡಿ ಉದ್ದ ಹಾಗೂ ಎರಡೂವರೆ ಅಡಿ ಇರುವ ಈ ಸಿಮೆಂಟ್‌ ತೊಟ್ಟಿಗಳಲ್ಲಿನ ನೀರನ್ನು ಕಾಡುಪ್ರಾಣಿಗಳು ಕುಡಿಯುತ್ತವೆಯೇ ಎಂದು ಗಮನ ಇಡಲು ಹಾಗೂ ತೊಟ್ಟಿಗಳ ಚಲನ ವಲನ ವೀಕ್ಷಿಸಲು ಪ್ರತಿ ತೊಟ್ಟಿಯ ಬಳಿಯೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕಾಡು ಪ್ರಾಣಿಗಳು ಈ ತೊಟ್ಟಿಯಲ್ಲಿ ಮಲಗಬಾರದೆಂದು ಕಿರಿದಾಗಿ ನಿರ್ಮಿಸಲಾಗಿದೆ ಎಂದು ಎಸಿಎಫ್‌ ಶಿವಾನಂದ ತೋಡಕರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ರಸ್ತೆ ಅಂಚಿನಲ್ಲಿ ಅಳವಡಿಸಿದಲ್ಲಿ ಜಾನುವಾರುಗಳು, ನಾಯಿಗಳು ನೀರನ್ನು ಬರಿದು ಮಾಡುವ ಸಾಧ್ಯತೆ ಇದೆ. ಜತೆಗೆ ಕಾಡು ಪ್ರಾಣಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುವ ಅಪಾಯವೂ ಇದೆ. ಹೀಗಾಗಿ ದಟ್ಟಅರಣ್ಯದ ನಡುವೆ ನೀರಿನ ತೊಟ್ಟಿಅಳವಡಿಸಲಾಗಿದೆ.

ನೀರಿನ ತೊಟ್ಟಿಬಳಿ ಕ್ಯಾಮೆರಾ ಅಳವಡಿಸಲಾಗಿದ್ದರೂ ಬೇಟೆಗಾರರ ಮೇಲೆ ತೀವ್ರ ನಿಗಾ ವಹಿಸಬೇಕಾಗಿದೆ. ಈಗ ಅಳವಡಿಸಿದ ನೀರಿನ ತೊಟ್ಟಿಗಳು ವಿಶಾಲವಾದ ಹುಲಿ ರಕ್ಷಿತ ಪ್ರದೇಶದಲ್ಲಿ ಪ್ರಾಣಿಗಳ ದಾಹ ತಣಿಸಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಎದುರಾಗಿದೆ.

- ವಸಂತ್‌ಕುಮಾರ್ ಕತಗಾಲ 

click me!