ಅನರ್ಹರ ಅರ್ಜಿ ವಿಚಾರಣೆ ಸೆ.25ಕ್ಕೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ!

By Web Desk  |  First Published Sep 23, 2019, 1:35 PM IST

17 ಮಂದಿ ಅನರ್ಹ ಶಾಸಕರು ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೆ.25, ಬುಧವಾರಕ್ಕೆ ಮುಂದೂಡಿದೆ. ಹೀಗಿದ್ದರೂ ಕರ್ನಾಟಕ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಚುನಾವಣಾ ಆಯೋಗ ವಕಾಶ ಮಾಡಿಕೊಟ್ಟಿದೆ. ಈ ಮೂಲಕ ಅನರ್ಹ ಶಾಸಕರಿಗಿದ್ದ ಬಹುದೊಡ್ಡ ತಲೆನೋವು ನಿವಾರಣೆಯಾಗಿದೆ


ನವದೆಹಲಿ[ಸೆ.23]: 17 ಮಂದಿ ಅನರ್ಹ ಶಾಸಕರು ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೆ.25, ಬುಧವಾರಕ್ಕೆ ಮುಂದೂಡಿದೆ. ಹೀಗಿದ್ದರೂ ಕರ್ನಾಟಕ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಚುನಾವಣಾ ಆಯೋಗ ವಕಾಶ ಮಾಡಿಕೊಟ್ಟಿದೆ. ಈ ಮೂಲಕ ಅನರ್ಹ ಶಾಸಕರಿಗಿದ್ದ ಬಹುದೊಡ್ಡ ತಲೆನೋವು ನಿವಾರಣೆಯಾಗಿದೆ.

"

Latest Videos

undefined

ಅನರ್ಹರಿಗೆ ಸುಪ್ರೀಂ ಟೆನ್ಷನ್‌! ಬೀರುತ್ತಾ ಉಪ ಚುನಾವಣೆ ಮೇಲೆ ಪರಿಣಾಮ

ಹೌದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್, ಸೆ.25ಕ್ಕೆ ಮುಂದೂಡಿದೆ. ಈ ಮೂಲಕ ಅನರ್ಹರ ಅರ್ಜಿ ಕುರಿತು ಸುದೀರ್ಘ ವಿಚಾರಣೆಗೆ ಅವಕಾಶ ನೀಡಿದೆ. ಆದರೆ ಈ ಅರ್ಜಿ ವಿಚಾರಣೆಯಲ್ಲಿ ಎಂಟ್ರಿ ಕೊಟ್ಟ ಚುನಾವಣಾ ಆಯೋಗ ಅನರ್ಹರ ಸ್ಪರ್ಧೆಗೆ ಯಾವುದೇ ಆಕ್ಷೇಪ ಇಲ್ಲ, ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಹುದು ಎಂದು ತಿಳಿಸಿದೆ. ಈ ಮೂಲಕ ಅರ್ಜಿ ವಿಚಾರಣೆ ಮುಂದೂಡಲಾಗಿದೆಯಾದರೂ, ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ತೊಡಕು ನಿವಾರಣೆಯಾಗಿದೆ.

ಅನರ್ಹ ಶಾಸಕರ ಅರ್ಜಿ ವಿಚಾರಣೆ: ಸೋಮವಾರ ಕೋರ್ಟ್‌ನಲ್ಲಿ ಏನೆಲ್ಲ ಆಗ್ಬಹುದು?

ಇನ್ನು ಅನರ್ಹ ಶಾಸಕರ ಪ್ರಕರಣದಲ್ಲಿ ಕಾಂಗ್ರೆಸ್‌ನ ಇಬ್ಬರು ನಾಯಕರು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್‌, ಸ್ಪೀಕರ್ ಕಚೇರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಸುಪ್ರೀಂ ನೋಟಿಸ್ ನೀಡಿದೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ ಕಾದು ನೊಡಬೇಕಷ್ಟೇ.

ಅರ್ಜಿಯಲ್ಲೇನಿತ್ತು?

ಸ್ಪೀಕರ್‌ ಅವರು ನಮ್ಮ ಸದಸ್ಯತ್ವವನ್ನು ರದ್ದು ಪಡಿಸಿ ಸಂಪೂರ್ಣ ಕಾನೂನು ಬಾಹಿರ, ದುರುದ್ದೇಶದ ಮತ್ತು ನಿರಂಕುಶ ಆದೇಶವನ್ನು ಹೊರಡಿಸಿದ್ದಾರೆ. ಪಕ್ಷ ವಿರೋಧಿ ನಡೆಗಾಗಿ ಸದಸ್ಯತ್ವವನ್ನು ರದ್ದು ಪಡಿಸುವ ಸಂವಿಧಾನದ 10ನ ಪರಿಚ್ಛೇದವನ್ನು ಅನಾವಶ್ಯಕವಾಗಿ ಸ್ಪೀಕರ್‌ ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ ಎಂದು ಅನರ್ಹ ಶಾಸಕರು ಅರ್ಜಿಯಲ್ಲಿ ದೂರಿದ್ದಾರೆ.

ನಾವು ಜು.6ರಂದು ಸ್ವ ಇಚ್ಛೆಯಿಂದ, ನೈಜವಾಗಿ ಸ್ಪೀಕರ್‌ ಕಚೇರಿಗೆ ರಾಜೀನಾಮೆ ಸಲ್ಲಿಸಿದ ಸಂದರ್ಭದಲ್ಲಿ ನಮ್ಮ ಮೇಲೆ ಯಾವುದೇ ಅನರ್ಹತೆಯ ದೂರಿರಲಿಲ್ಲ. ಬಳಿಕ ಜು.12ರಂದು ಅನರ್ಹತೆಯ ದೂರು ಸಲ್ಲಿಸಲಾಗಿತ್ತು ಎಂದು ಜೆಡಿಎಸ್‌ ಶಾಸಕರಾದ ಎಚ್‌.ವಿಶ್ವನಾಥ್‌, ನಾರಾಯಣ ಗೌಡ, ಗೋಪಾಲಯ್ಯ ಹೇಳಿದರೆ, ಜು.10ಕ್ಕೆ ಅನರ್ಹತೆ ದೂರು ಸಲ್ಲಿಕೆಯಾಗಿತ್ತು ಎಂದು ಕಾಂಗ್ರೆಸ್‌ ಶಾಸಕರಾದ ಸುಧಾಕರ್‌, ಎಂ.ಟಿ.ಬಿ.ನಾಗರಾಜ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್‌, ರೋಷನ್‌ ಬೇಗ್‌, ಪ್ರತಾಪ್‌ ಗೌಡ ಪಾಟೀಲ್, ಆರ್‌.ಶಂಕರ್‌, ಆನಂದ್‌ ಸಿಂಗ್‌, ಮುನಿರತ್ನ, ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ. ತಮ್ಮ ದೂರಿಗೆ ಸ್ಪೀಕರ್‌ ಅವರನ್ನು ಮೊದಲ ಪ್ರತಿವಾದಿಯನ್ನಾಗಿಸಿರುವ ಅರ್ಜಿದಾರರು ನಂತರ ತಮ್ಮ ಪಕ್ಷದ ಶಾಸಕಾಂಗ ನಾಯಕ, ಪಕ್ಷದ ರಾಜ್ಯಾಧ್ಯಕ್ಷ ಹಾಗು ಕರ್ನಾಟಕ ಸರ್ಕಾರವನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ.

ರಮೇಶ್‌ ಜಾರಕಿಹೊಳಿ, ನಾಗೇಂದ್ರ, ಮಹೇಶ್‌ ಕುಮಟಳ್ಳಿ, ಉಮೇಶ್‌ ಜಾಧವ್‌ ವಿರುದ್ಧ ಏಕಕಾಲದಲ್ಲಿ ಮತ್ತು ಬಹುತೇಕ ಏಕಧಾಟಿಯಲ್ಲಿ ಫೆ.11ರಂದು ಅನರ್ಹತೆಯ ದೂರನ್ನು ಕಾಂಗ್ರೆಸ್‌ ಪಕ್ಷ ಸ್ಪೀಕರ್‌ ಅವರಿಗೆ ನೀಡಿತ್ತು. ಆದರೆ ಜಾಧವ್‌ ಆ ಬಳಿಕ ತಮ್ಮ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸ್ಪೀಕರ್‌ ಅಂಗೀಕರಿಸಿದ್ದಾರೆ. ಆದರೆ ನಮ್ಮಿಬ್ಬರ (ರಮೇಶ್‌ ಜಾರಕಿಹೊಳಿ ಮತ್ತು ಮಹೇಶ್‌ ಕುಮಟಳ್ಳಿ) ರಾಜೀನಾಮೆಯನ್ನು ಒಪ್ಪಿಕೊಳ್ಳದೇ ನಮ್ಮನ್ನು ಅನರ್ಹಗೊಳಿಸಿ ತಾರತಮ್ಯ ಎಸಗಲಾಗಿದೆ ಎಂದು ಜಾರಕಿಹೊಳಿ ಮತ್ತ ಕುಮಟಳ್ಳಿ ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.

ವಿಪ್‌ ಆಧರಿಸಿ ಕ್ರಮ ಕಾನೂನುಬಾಹಿರ: ಜು.6ನೇ ತಾರೀಕಿಗೆ ಸ್ಪೀಕರ್‌ ತಮ್ಮ ಕಚೇರಿಯಲ್ಲಿದ್ದರೂ ನಾವು ರಾಜೀನಾಮೆ ನೀಡಲು ಬರುತ್ತಿದ್ದೇವೆ ಎಂದು ತಿಳಿಯುತ್ತಿದ್ದಂತೆ ನಮ್ಮ ಕೈಗೆ ಸಿಗದೇ ಪರಾರಿಯಾದರು. ಸೋಮಶೇಖರ್‌ ಅವರ ರಾಜೀನಾಮೆ ಪತ್ರವನ್ನು ಆಗ ಸಚಿವರಾಗಿದ್ದವರೊಬ್ಬರು ಹರಿದು ಹಾಕಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ನಮಗೆ ವಿಧಾನಸಭಾ ಕಲಾಪದಲ್ಲಿ ಭಾಗವಹಿಸುವ ವಿವೇಚನಾಧಿಕಾರವನ್ನು ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶದ ಮೂಲಕ ನೀಡಿದ್ದರೂ ವಿಪ್‌ ಉಲ್ಲಂಘಿಘಿಸಿದ ಆರೋಪದ ಮೇಲೆ ನಮ್ಮ ಸದಸ್ಯತ್ವವನ್ನು ರದ್ದು ಪಡಿಸುವಂತೆ ಸ್ಪೀಕರ್‌ಗೆ ದೂರನ್ನು ನೀಡಲಾಗಿತ್ತು. ಈ ದೂರಿನ ಆಧಾರದಲ್ಲಿ ಸ್ಪೀಕರ್‌ ನಮ್ಮ ಶಾಸಕತ್ವವನ್ನು ರದ್ದು ಪಡಿಸಿದ್ದು ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮೂಲಭೂತ ಹಕ್ಕು ನಿರಾಕರಣೆ: ಸಂವಿಧಾನದ 19ನೇ ವಿಧಿಯ ಪ್ರಕಾರ ತನ್ನಿಷ್ಟದ ಕೆಲಸ ಮಾಡುವ ಹಕ್ಕನ್ನು ದೂರುದಾರರು ಹೊಂದಿದ್ದಾರೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಮ್ಮ ಮೂಲಭೂತ ಹಕ್ಕಾಗಿದ್ದು ಸ್ಪೀಕರ್‌ ನಮ್ಮ ಮೂಲಭೂತ ಹಕ್ಕನ್ನು ಅಸಾಂವಿಧಾನಿಕವಾಗಿ, ಅನೈತಿಕವಾಗಿ ನಿರಾಕರಿಸಿದ್ದಾರೆ. ನಾವು ರಾಜೀನಾಮೆ ಸ್ವೀಕಾರದ ಬಗ್ಗೆ ಇರುವ ಸಂವಿಧಾನದ 190ನೇ ವಿಧಿ ಮತ್ತು ವಿಧಾನಸಭಾ ನಡಾವಳಿ 202ರ ನಿಯಮದ ಪ್ರಕಾರವೇ ರಾಜೀನಾಮೆ ನೀಡಿದ್ದೇವೆ. ಸುಪ್ರೀಂ ಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ ರಾಜೀನಾಮೆ ಪ್ರಕ್ರಿಯೆಯನ್ನು ಸಂವಿಧಾನದ 190ನೇ ವಿಧಿ ಮತ್ತು ವಿಧಾನಸಭಾ ನಡಾವಳಿ 202ರ ಪ್ರಕಾರ ನಿರ್ಧರಿಸಬೇಕು ಎಂದು ಹೇಳಿತ್ತು. ಆದರೆ ಸ್ಪೀಕರ್‌ ಸಂವಿಧಾನದ 10ನೇ ಪರಿಚ್ಛೇದದ ಅನ್ವಯ ನಿರ್ಧಾರ ತೆಗೆದುಕೊಂಡಿದ್ದು ಆಡಳಿತರೂಢ ಪಕ್ಷಗಳ ಪರವಾದ ತೀರ್ಮಾನವಾಗಿದೆ ಎಂದು ಅಪಾದಿಸಲಾಗಿದೆ.

ನಮ್ನನ್ನು 15ನೇ ವಿಧಾನ ಸಭೆಯ ಮುಂದಿನ ಅವಧಿಯವರೆಗೂ ಅನರ್ಹಗೊಳಿಸಿರುವುದು ಸಂವಿಧಾನದ 164(1ಬಿ) ಮತ್ತು 361-ಬಿಗೆ ತದ್ವಿರುದ್ಧವಾಗಿದೆ. ಸ್ಪೀಕರ್‌ ನಮ್ಮ ರಾಜೀನಾಮೆ ಸ್ವ ಇಚ್ಛೆಯದ್ದೇ ಮತ್ತು ನೈಜವೇ ಎಂಬುದನ್ನು ಮಾತ್ರ ನೋಡಬೇಕೇ ಹೊರತು ನಮ್ಮ ವರ್ತನೆ ಮತ್ತು ಉದ್ದೇಶವನ್ನಲ್ಲ. ಹಾಗೆಯೇ ನಮ್ಮ ಮೇಲೆ ಹಾಕಿರುವ ಅನರ್ಹತೆಯ ದೂರು ಕೂಡ ನಿಯಮಬದ್ಧವಾಗಿಲ್ಲ. ಈ ದೂರನ್ನು ಸ್ಪೀಕರ್‌ ಪರಿಗಣಿಸಲೇಬಾರದಿತ್ತು. ಸಭೆ, ಸಮಾರಂಭಗಳಿಗೆ ಬಂದಿಲ್ಲ ಎಂದು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸ್ಪೀಕರ್‌ ಅವರಿಗೆ ಅಧಿಕಾರವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

click me!