ಎಸ್ ಬಿಐನಿಂದ ರೈತರ ಚಿನ್ನ ಹರಾಜು : ಎಚ್ಚರ

By Web DeskFirst Published Aug 3, 2018, 1:01 PM IST
Highlights

ರೈತಗೆ ನೋಟಿಸ್ ತಲುಪುವ ಮೊದಲೇ  ಬ್ಯಾಂಕ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನು ಹರಾಜು ಹಾಕಿದ ಘಟನೆಯೊಂದು ನಡೆದಿದೆ. ಈ ಸಂಬಂಧ ದಾವಣಗೆರೆಯ ಬ್ಯಾಂಕ್ ಶಾಖೆ ಮುಂದೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಲೇಬೆನ್ನೂರು: ರೈತರಿಗೆ ನೋಟಿಸ್ ನೀಡದೆ ಬಂಗಾರ ಹರಾಜು ಮಾಡಿರುವ ಪ್ರಕ್ರಿಯೆ ವಿರೋಧಿಸಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ರಾಜ್ಯ ಉಪಾಧ್ಯಕ್ಷ ವಾಸನ ಓಂಕಾರಪ್ಪ ನೇತೃತ್ವದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. 

ಸಮೀಪದ ಸಂಕ್ಲೀಪುರ ಗ್ರಾಮದ ಬಿ.ಜಿ.ಪದ್ಮಪ್ಪ, ಸಿದ್ದಮ್ಮ ಮತ್ತು ಸಂಗನಬಸಪ್ಪ ಎಂಬುವರು ಮಲೇಬೆನ್ನೂರು ಎಸ್‌ಬಿಐನಲ್ಲಿ ಬಂಗಾರ ಸಾಲ ಪಡೆದಿದ್ದು, ಸಾಲದ ಕಂತು ಪಾವತಿ ಮಾಡಲು ನೋಟಿಸ್ ನೀಡಿದ್ದಾರೆ. ಆದರೆ ಜು.25ಕ್ಕೆ (ಹಿಂದಿನ ದಿನ) ಅಂಚೆ ಮೂಲಕ ನೋಟಿಸ್ ತಲುಪಿದೆ. 

ಜು.26ಕ್ಕೆ (ಮಾರನೇ ದಿನ) ಬಂಗಾರ ಹರಾಜು ಮಾಡಿದ್ದಾರೆ. ಇದು ಬ್ಯಾಂಕ್ ಅಧಿಕಾರಿಗಳ ಕಾನೂನು ವಿರೋಧಿ ಕ್ರಮ ಎಂದು ಓಂಕಾರಪ್ಪ ದೂರಿದರು. ಹಳ್ಳಿಗೆ ಬಾರದ ಪತ್ರಿಕೆಗೆ ಹರಾಜು ಜಾಹೀರಾತು ನೀಡಿ, ಬಂಗಾರದ ಮಾಲೀಕರಿಗೆ ಮಾಹಿತಿ ಇಲ್ಲದಂತೆ ಹರಾಜು ಮಾಡಲಾಗಿದೆ, ಕಾನೂನು ಚೌಕಟ್ಟಿನಲ್ಲಿ ಹರಾಜು ಪದ್ಧತಿ ನಡೆಸದೇ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದ್ದಾರೆ. 

ಬ್ಯಾಂಕ್ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಬಂಗಾರ ಸಾಲದ ಬಡ್ಡಿಯನ್ನು ಜಮಾ ಮಾಡಿದರೂ ಸಂಗನಬಸಪ್ಪ  ಎಂಬುವರ ಬಂಗಾರ ಹರಾಜು ಮಾಡಿದ್ದಾರೆ. ವಾಹನ ಸಾಲ ಕಂತು ಕಟ್ಟಲು ತಿಂಗಳ ಅವಧಿ ನೀಡುತ್ತಾರೆ, ಆದರೆ ಈ ಬ್ಯಾಂಕ್ ಅಧಿಕಾರಿಗಳು ಎರಡು ದಿನವೂ ಇಲ್ಲದೇ ಹರಾಜು ಮಾಡಿರುವ ಕ್ರಮ ಖಂಡನೀಯ ಎಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಎನ್.ಹಳ್ಳಿ ಪ್ರಭುಗೌಡ ಆರೋಪಿಸಿದರು.

ನಂತರ ಪಿಎಸ್‌ಐ ಮೇಘರಾಜ್, ಎಚ್.ಓಂಕಾರಪ್ಪ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯಿತು. ಅಧಿಕಾರಿಗಳು ಹೇಳಿಕೆ  ನೀಡಿ ರೈತರಿಗೆ ಯಾವ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ನಂದಿತಾವರೆ ಶಂಭಣ್ಣ, ಎಚ್.ಎನ್. ಮಹೇಂದ್ರಪ್ಪ, ಅಂಜಿನಪ್ಪ, ನಂಜಪ್ಪ, ಸಿದ್ದಪ್ಪ, ಸಂಗನಬಸಪ್ಪ, ಸಮೀವುಲ್ಲಾ, ವೀರೇಶ್, ರವಿ, ನಾಗರಾಜಯ್ಯ, ರಾಘವೇಂದ್ರ, ಪದ್ಮಪ್ಪ, ನಂದ್ಯಪ್ಪ, ಮತ್ತಿತರರು ಭಾಗಿಯಾಗಿದ್ದರು.

click me!