
ಶಿವಮೊಗ್ಗ[ಜು. 04] ಶರಾವತಿ ನದಿ ನೀರನ್ನು ಬೆಂಗಳೂರಿಗೆ ಬಿಡಲು ಸಾಧ್ಯವೇ ಇಲ್ಲ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಒಮ್ಮತದ ನಿರ್ಣಯ ತೆಗೆದುಕೊಂಡಿದೆ. ಇನ್ನೊಂದು ಕಡೆ ಜು.10 ರ ಶಿವಮೊಗ್ಗ ಬಂದ್ ಗೆ ಎಲ್ಲ ಸಂಘಟನೆಗಳು ಬೆಂಬಲ ನೀಡಿವೆ.
ಸಾಹಿತಿ ನಾ. ಡಿಸೋಜಾ ಅಧ್ಯಕ್ಷತೆಯಲ್ಲಿ ಒಕ್ಕೂಟ ರಚನೆಯಾಗಿದೆ. ಜಿಲ್ಲೆಯ ಬಹುತೇಕ ಎಲ್ಲ ಸಂಘಟನೆಗಳು, ರೈತ, ದಲಿತ, ಕನ್ನಡಪರ, ಪತ್ರಕರ್ತರ, ಬಸ್ ಮಾಲೀಕರು, ಹೋಟೆಲ್ ಮಾಲೀಕರ, ಆಟೋ, ಅಣ್ಣಾ ಹಜಾರೆ, ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದು ಜು. 10 ರಂದು ಶಿವಮೊಗ್ಗ ಜಿಲ್ಲೆ ಸ್ಥಬ್ಧವಾಗಲಿದೆ.
ಲಿಂಗನಮಕ್ಕಿ ಟು ಬೆಂಗಳೂರು; ಶರಾವತಿ ನೀರು ತರೋದಕ್ಕೆ ವಿರೋಧ ಏಕೆ?
ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಸೊರಬ,ಶಿಕಾರಿಪುರ, ಹೊಸನಗರ, ತಾಳಗುಪ್ಪ ಸೇರಿದಂತೆ ಎಲ್ಲ ಕಡೆಯೂ ಸ್ಥಳೀಯರೇ ಸಭೆ ನಡೆಸಿದ್ದು ಒಕ್ಕೋರಲ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಹೊನ್ನಾವರದವರೆಗೆ ವ್ಯಾಪಿಸಿರುವ ಶರಾವತಿ ಕಣಿವೆಯ ಜನರು ನೀರು ಕೊಡಲು ಸಾಧ್ಯವೇ ಇಲ್ಲ ಎಂದು ಒಂದೆ ಧ್ಚನಿ ಮೊಳಗಿಸಲಿದ್ದಾರೆ.
ಚಿಂತಕರು, ಸಾಹಿತಿಗಳು, ರಂಗಕರ್ಮಿಗಳು, ರೈತರು, ಪತ್ರಕರ್ತರ ಆದಿಯಾಗಿ ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡವರು ಶರಾವತಿ ಉಳಿವಿಗೆ ಹೋರಾಟ ಆರಂಭಿಸಿದ್ದಾರೆ.ಪ್ರತಿ ಮನೆಯ ಬಾಗಿಲಿನಲ್ಲೂ ಶರಾವತಿ ನಮ್ಮದು ಎಂಬ ಸ್ಟಿಕರ್ ಕಾಣುತ್ತಿದೆ. ಜನರನ್ನು ಜಾಗೃತಗೊಳಿಸುವ ಕೆಲಸ ನಿರಂತರವಾಗಿದೆ.
ಚಿಂತಕ ಬಂಜಗೆರೆ ಜಯಪ್ರಕಾಶ್ ಗುರುವಾರ ಸುದ್ದಿಗೋಷ್ಠಿ ನಡೆಸಿ ಯೋಜನೆಯಿಂದಾಗುವ ಹಾನಿಯನ್ನು ಹನಿ ಹನಿಯಾಗಿ ವಿವರಿಸಿದರು. ಇಷ್ಟು ಬೇಗನೆ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷಾತೀತವಾಗಿ, ಪಂಗಡತೀತವಾಗಿ ಪರಿಸರ ಕಾಳಜಿ ಪಸರಿಸಿರೋದು ಬಹಳ ಸಂತೋಷದ ವಿಷಯ, ಆ ಕಾರಣಕ್ಕಾಗಿ ಸಂಘಟಕರನ್ನ ಮನಸ್ಸಾರೆ ಅಭಿನಂದಿಸಿತ್ತೇನೆ. ಒಕ್ಕೂಟದ ಬೇಡಿಕೆ ತಾರ್ಕಿಕವಾಗಿ, ನ್ಯಾಯಯುತವಾಗಿ ಸರಿಯಾಗಿದೆ. ಬೆಂಗಳೂರಿಗೆ ನೀರಿನದಾಹ ಇದೆ ಎನ್ನುವುದು ಸತ್ಯ, ಇದರಲ್ಲಿ ಎರಡು ಮಾತಿಲ್ಲ, ನಾನೂ ಬೆಂಗಳೂರ ಆಸುಪಾಸು ವಾಸಿಯೇ, ಬೆಂಗಳೂರನ್ನ ಈ ರೀತಿ ಬ್ರಹ್ಮರಾಕ್ಷಸನ ತರಹ ಬೆಳೆಯಲು ಬಿಟ್ಟು, ರಾಜ್ಯದ ಎಲ್ಲಾ ಜಲಮೂಲವನ್ನ ಒದಗಿಸಿದರೂ ಅದನ್ನ ಪೋಷಿಸಲು ಸಾಧ್ಯವಿಲ್ಲ ಎಂದರು.
ವಿದ್ಯುತ್ ಹೊರತಾಗಿ ಆ ನೀರನ್ನ ಬಳಸಬಹುದು ಎಂದಾದರೆ ಈ ಭಾಗದ ಜನರಿಗೆ ಕುಡಿಯಲು ಹಾಗೂ ಹೊಲಗಳಿಗೆ ನೀರಿನ ವ್ಯವಸ್ಥೆ ಮಾಡಿ, ಅದನ್ನ ಬಿಟ್ಟು ಪೈಪ್ ಮೂಲಕ, ರೈಲು ಮೂಲಕ ನೀರನ್ನ ಕಳಿಸ್ತೀನಿ ಎಂಬುದು ಅಪ್ರಯೋಜಕ, ಈ ಜಿಲ್ಲೆಯ ಅವಶ್ಯಕತೆ ಪೂರೈಸಬೇಕು, ಭದ್ರಾ ಮೇಲ್ದಂಡೆ ಹೋರಾಟ ಮಾಡುವಾಗಲೂ ಇರೋ ಪರಿಸರ ಹಾಳು ಮಾಡದೇ ನೀರು ತೆಗೆದುಕೊಂಡು ಹೋಗಲು ಕೇಳಿಕೊಂಡಿದ್ವಿ, ಚಿತ್ರದುರ್ಗಕ್ಕೆ ನೀರು ಬೇಕಿತ್ತು ಆದರೆ ಹೆಚ್ಚುವರಿ ಮಳೆ ನೀರು ಈಗಿರುವ ಜಲಾಶಯದಿಂದಲೇ ಒಯ್ಯಲು ಸರ್ಕಾರದ ಜೊತೆ ಮಾತನಾಡಿದ್ವಿ, ಧೀರ್ಘಕಾಲದ ದುಷ್ಪರಿಣಾಮ ಬೀರುವ ಯಾವ ಯೋಜನೆಯೂ ರಾಜ್ಯಕ್ಕೆ ಬೇಡ, ಶಿವಮೊಗ್ಗದ ಈ ಜನಾಂದೋಲನಕ್ಕೆ, ಹೋರಾಟಕ್ಕೆ ಸೂಕ್ಷ್ಮ ಸಂವೇದಿ ಬುದ್ಧಿಜೀವಿಗಳೆಲ್ಲರ ಬೆಂಬಲ ಇದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.