ಶಶಿಕಲಾಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಒದಗಿಸಿದ್ದು ನಿಜ..!

Published : Nov 14, 2017, 08:45 AM ISTUpdated : Apr 11, 2018, 01:11 PM IST
ಶಶಿಕಲಾಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಒದಗಿಸಿದ್ದು ನಿಜ..!

ಸಾರಾಂಶ

ಇದೇ ಜುಲೈನಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅವ್ಯಾಹತವಾಗಿ ಅಕ್ರಮಗಳು ನಡೆದಿದೆ ಎಂದು ಆಗಿನ ಕಾರಾಗೃಹದ ಡಿಐಜಿ ಡಿ.ರೂಪಾ ಅವರು ಕಾರಾಗೃಹದ ಮುಖ್ಯಸ್ಥರು ಹಾಗೂ ರಾಜ್ಯ ಸರ್ಕಾರಕ್ಕೆ ಸ್ಫೋಟಕ ವರದಿ ಸಲ್ಲಿಸಿದ್ದರು. ಇದರಲ್ಲಿ ಆಗಿನ ಕಾರಾಗೃಹ ಮುಖ್ಯಸ್ಥ ಎಚ್.ಎನ್.ಸತ್ಯನಾರಾಯಣ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು.

ಬೆಂಗಳೂರು(ನ.14): ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಅವರಿಗೆ ವಿಶೇಷ ಸೌಲಭ್ಯ ದೊರೆತಿರುವುದು ನಿಜ, ಆದರೆ ಅದಕ್ಕೆ ಕಾರಾಗೃಹದ ಅಧಿಕಾರಿಗಳು ಹಣ ಪಡೆದಿದ್ದರು ಎಂಬ ಆರೋಪಕ್ಕೆ ಖಚಿತ ಪುರಾವೆ ಸಿಕ್ಕಿಲ್ಲ.

ಹೀಗೆಂದು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದ ಅಕ್ರಮ ಪ್ರಕರಣ ಕುರಿತು ವಿಚಾರಣೆ ಪೂರ್ಣಗೊಳಿಸಿರುವ ವಿನಯ್ ಕುಮಾರ್ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಅವರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ. ಆದರೆ, ಕಾರಾಗೃಹದ ಅಧಿಕಾರಿಗಳು ಅದಕ್ಕೆ ಹಣ ಪಡೆದಿದ್ದರು ಎಂಬ ಆರೋಪಕ್ಕೆ ಖಚಿತ ಪುರಾವೆ ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಅಕ್ರಮ ಆಸ್ತಿ ಸಂಪಾದನೆ

ಪ್ರಕರಣದ ಸಜಾ ಕೈದಿ ಶಶಿಕಲಾ ವಿ. ನಟರಾಜನ್ ಅವರಿಗೆ ಸಂದರ್ಶಕರ ಭೇಟಿ ಸೇರಿ ನಿಯಮ ಬಾಹಿರ ವಾಗಿ ಕೆಲವು ಸೌಲಭ್ಯ ನೀಡಿರುವುದು ಪತ್ತೆಯಾಗಿದೆ. ಆದರೆ, ಸೌಲಭ್ಯ ಒದಗಿಸಿದ್ದಕ್ಕೆ ಪ್ರತಿಯಾಗಿ ಶಶಿಕಲಾ ನಟರಾಜನ್ ಅವರಿಂದ ಹಣ ಸೇರಿದಂತೆ ಬೇರೆ ರೀತಿಯಲ್ಲಿ ಅನುಕೂಲ ಪಡೆದಿದ್ದರು ಎಂಬ ಆರೋಪಕ್ಕೆ ಖಚಿತ ಪುರಾವೆಗಳು ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ಅಲ್ಲದೆ, ಬಹು ಅಂಗಾಂಗ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿಗೆ ನ್ಯಾಯಾಲಯಗಳ ಆದೇಶದ ಅನ್ವಯ ಕಾರಾಗೃಹದಲ್ಲಿ ಸವಲತ್ತು ಕಲ್ಪಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯದ ಆದೇಶದ ಪ್ರತಿ ಸಹ ಲಗತ್ತಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸರ್ಕಾರಕ್ಕೆ ತಾವು ವರದಿ ಸಲ್ಲಿಸಿರುವುದನ್ನು ಸೋಮವಾರ ‘ಕನ್ನಡ ಪ್ರಭ’ಕ್ಕೆ ಖಚಿತಪಡಿಸಿದ ವಿನಯ್ ಕುಮಾರ್ ಅವರು, ತಮ್ಮ ವರದಿಯಲ್ಲಿನ ಉಲ್ಲೇಖಿತ ಅಂಶಗಳ ಕುರಿತು ಮಾಹಿತಿ ಹಂಚಿಕೊಳ್ಳಲು ಬಲವಾಗಿ ನಿರಾಕರಿಸಿದರು.

ಗಣ್ಯರ ಭೇಟಿ ಅವಕಾಶ?: ಶಶಿಕಲಾ ನಟರಾಜನ್ ಅವರಿಗೆ ಹೊರಗಿನವರ ಸಂದರ್ಶನಕ್ಕೆ ಅನುಮತಿ ನೀಡುವಲ್ಲಿ ನಿಯಮ ಉಲ್ಲಂಘನೆಯಾಗಿರುವುದು ನಿವೃತ್ತ ಐಎಎಸ್ ಅಧಿಕಾರಿ ವಿಚಾರಣೆ ವೇಳೆ ಖಚಿತವಾಗಿದೆ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಶಶಿಕಲಾ ಅವರನ್ನು ಭೇಟಿಯಾಗಲು ಅವರ ಕುಟುಂಬದ ಸದಸ್ಯರು ಹಾಗೂ ಪರಿಚಿತರಿಗೆ ನಿಯಮ ಮೀರಿ ಅಧಿಕಾರಿಗಳು ಅನುಮತಿ ನೀಡಿರುವುದು ಗೊತ್ತಾಗಿದೆ. ಆದರೆ ಸಮವಸ್ತ್ರ ಧಾರಣೆ ವಿನಾಯತಿ ಸೇರಿದಂತೆ ಕೆಲವು ಸೌಲಭ್ಯಗಳು ಕಾರಾಗೃಹದ ನಿಯಮಾವಳಿ ಪ್ರಕಾರ ಅವರಿಗೆ ಲಭಿಸಿದೆ ಎಂದು ವಿನಯ್ ಕುಮಾರ್ ವರದಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಶಶಿಕಲಾ ಅವರಿಗೆ ವಿಶೇಷ ಅಡುಗೆ ಕೋಣೆ, ಅಗತ್ಯಕ್ಕಿಂತ ಹೆಚ್ಚು ಕೊಠಡಿಗಳ ವಿತರಣೆ ಹಾಗೂ ಮೊಬೈಲ್ ಬಳಕೆ ಆರೋಪಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇನ್ನು ಛಾಪಾ ಕಾಗದ ಹರಣದ ರೂವಾರಿ ತೆಲಗಿಗೆ ಕಾನೂನು ಬಾಹಿರವಾಗಿ ವಿಐಪಿ ಸೌಲಭ್ಯ ಕಲ್ಪಿಸಲಾಗಿತ್ತು ಎಂಬುದನ್ನು ಸಮಿತಿ ನಿರಾಕರಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಇದೇ ಜುಲೈನಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅವ್ಯಾಹತವಾಗಿ ಅಕ್ರಮಗಳು ನಡೆದಿದೆ ಎಂದು ಆಗಿನ ಕಾರಾಗೃಹದ ಡಿಐಜಿ ಡಿ.ರೂಪಾ ಅವರು ಕಾರಾಗೃಹದ ಮುಖ್ಯಸ್ಥರು ಹಾಗೂ ರಾಜ್ಯ ಸರ್ಕಾರಕ್ಕೆ ಸ್ಫೋಟಕ ವರದಿ ಸಲ್ಲಿಸಿದ್ದರು. ಇದರಲ್ಲಿ ಆಗಿನ ಕಾರಾಗೃಹ ಮುಖ್ಯಸ್ಥ ಎಚ್.ಎನ್.ಸತ್ಯನಾರಾಯಣ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಆ ವರದಿಯ ಅಂಶಗಳು ಬಹಿರಂಗಗೊಂಡು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ವಿಚಾರಣಾ ಸಮಿತಿ ರಚಿಸಿತು. ಅದರಂತೆ ನಾಲ್ಕು ತಿಂಗಳು ವಿಚಾರಣೆ ನಡೆಸಿದ ಸಮಿತಿ, ಸರ್ಕಾರಕ್ಕೆ ಅಕ್ಟೋಬರ್ ತಿಂಗಳಾಂತ್ಯದಲ್ಲಿ ವರದಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು